Homeರಾಜ್ಯನಾಳಿನ ರಾಜ್ಯ ಬಂದ್‌ಗೆ ಅಪಸ್ವರ : ಕನ್ನಡ ಪರ ಸಂಘಟನೆಗಳಲ್ಲಿ ಗೊಂದಲ

ನಾಳಿನ ರಾಜ್ಯ ಬಂದ್‌ಗೆ ಅಪಸ್ವರ : ಕನ್ನಡ ಪರ ಸಂಘಟನೆಗಳಲ್ಲಿ ಗೊಂದಲ

ಬೆಂಗಳೂರು,ಆ.12- ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ನಾಳೆ ಕರೆ ನೀಡಿರುವ ರಾಜ್ಯಬಂದ್‌ಗೆ ಅಪಸ್ವರ ಕೇಳಿ ಬಂದಿದೆ. ನಾಳಿನ ಬಂದ್‌ಗೆ ಕನ್ನಡಪರ ಸಂಘಟನೆಗಳ ನಡುವೆ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ. ಕೆಲ ಸಂಘಟನೆಗಳು ನೇರ ಬೆಂಬಲ ಘೋಷಿಸಿದ್ದರೆ, ಇನ್ನೂ ಕೆಲವರು ನೈತಿಕ ಬೆಂಬಲಕ್ಕೆ ಸೀಮಿತವಾಗಿದ್ದಾರೆ. ಮತ್ತೊಂದೆಡೆ ಪ್ರಮುಖ ಸಂಘಟನೆಗಳು ಬಂದ್‌ಗೆ ವಿರೋಧ ವ್ಯಕ್ತಪಡಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.

ಕನ್ನಡಪರ ಸಂಘಟನೆ ಮುಖಂಡರಾದ ಸಾ.ರಾ.ಗೋವಿಂದುರವರು ಮಂಡ್ಯದಲ್ಲಿ ಮಾತನಾಡಿ, ನಾಳಿನ ಬಂದ್‌ಗೆ ನಮ ಬೆಂಬಲವಿಲ್ಲ. ಬಂದ್‌ ಮಾಡುವವರು ಮಾಡಲಿ, ನಮದೇನೂ ಅಭ್ಯಂತರವಿಲ್ಲ. ನಾಡಿನಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳಿಗೆ ನೀರು ಬಂದಿದೆ. ಹಾಗಾಗಿ ಬಂದ್‌ ಮಾಡುವ ಅಗತ್ಯವಿಲ್ಲ. ಬಂದ್‌ಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದರು.

ಬಂದ್‌ಗೆ ನೈತಿಕ ಬೆಂಬಲ ಮಾತ್ರ :
ಹೋಟೆಲ್‌ ಮಾಲೀಕರ ಸಂಘ, ಖಾಸಗಿ ಸಾರಿಗೆ ಸಂಘಟನೆಗಳು ಹಾಗೂ ಖಾಸಗಿ ಶಾಲೆಗಳ ಒಕ್ಕೂಟ ಬಂದ್‌ಗೆ ನೈತಿಕ ಬೆಂಬಲ ನೀಡುವುದಾಗಿ ಹೇಳಿವೆ. ಆದರೆ ತಮ ಸೇವೆಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿವೆ.

ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಶಶಿಕುಮಾರ್‌ ಅವರು, ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಮಟ್ಟ ಹೆಚ್ಚಿರುವುದು, ಸುಪ್ರೀಂ ಕೋರ್ಟ್‌ ಆದೇಶ ಹಾಗೂ ರಾಜ್ಯ ಸರ್ಕಾರದ ಬಂದ್‌ ಬೇಡ ಎಂಬ ಮನವಿಯ ಹಿನ್ನೆಲೆಯಲ್ಲಿ ನೈತಿಕ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಖಾಸಗಿ ಶಾಲೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದಿದ್ದಾರೆ.
ಖಾಸಗಿ ಬಸ್‌‍ ಮಾಲೀಕರ ಸಂಘಟನೆಗಳೂ ಇದೇ ನಿಲುವು ತಳೆದಿವೆ. ಹೀಗಾಗಿ ಸಾರಿಗೆ, ಶಾಲೆ, ಹೋಟೆಲ್‌ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳು ಎಂದಿನಂತೆ ಕಾರ್ಯ ನಿರ್ವಹಿಸುವ ಸಾಧ್ಯತೆ ಇದೆ.

ಕರವೇ ಬಣಗಳಲ್ಲೂ ಭಿನ್ನಾಭಿಪ್ರಾಯ :
ಬಂದ್‌ ವಿಚಾರದಲ್ಲಿ ಕನ್ನಡಪರ ಸಂಘಟನೆಗಳ ನಡುವಿನ ಭಿನ್ನಾಭಿಪ್ರಾಯವೂ ಬಹಿರಂಗವಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್‌ ಶೆಟ್ಟಿ ಬಣ ಬಂದ್‌ಗೆ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ಹಂತದಲ್ಲಿ ಬಂದ್‌ ನಡೆಸುವುದು ಬೇಡ. ಪ್ರಧಾನಿ ಮಧ್ಯಪ್ರವೇಶ ಮಾಡಬೇಕು. ಬಂದ್‌ ನಿರ್ಧಾರದಿಂದ ಹಿಂದೆ ಸರಿಯುವಂತೆ ವಾಟಾಳ್‌ ನಾಗರಾಜ್‌ ಅವರನ್ನು ಮನವೊಲಿಸುತ್ತೇವೆ ಎಂದು ಪ್ರವೀಣ್‌ ಶೆಟ್ಟಿ ತಿಳಿಸಿದ್ದಾರೆ.

ಇನ್ನೊಂದೆಡೆ, ವಾಟಾಳ್‌ ನಾಗರಾಜ್‌ ಮಾತ್ರ ಯಾವುದೇ ಕಾರಣಕ್ಕೂ ಬಂದ್‌ನಿಂದ ಹಿಂದೆ ಸರಿಯುವುದಿಲ್ಲ ಎಂಬ ನಿಲುವು ತಳೆದಿದ್ದಾರೆ. ರೈತರ ಹಿತಾಸಕ್ತಿಗಾಗಿ ಬಂದ್‌ ನಡೆಸಿಯೇ ತೀರುತ್ತೇವೆ ಎಂದು ಹೇಳಿದ್ದು, ನಗರದ ಹಲವು ಪ್ರದೇಶಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಬಂದ್‌ಗೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

ಹಾಗಾದರೆ ನಾಳೆ ಏನಿರುತ್ತೆ? ಏನಿರಲ್ಲ? :
ಬಂದ್‌ಗೆ ಕರೆ ನೀಡಲಾಗಿದ್ದರೂ ಬಹುತೇಕ ವಲಯಗಳಲ್ಲಿ ಸೇವೆಗಳು ಎಂದಿನಂತೆ ಮುಂದುವರಿಯುವ ಸಾಧ್ಯತೆ ಇದೆ.ಸೇವೆಗಳು ಎಂದಿನಂತೆ ಇರಬಹುದಾದ ಕ್ಷೇತ್ರಗಳು:ಆಸ್ಪತ್ರೆಗಳು, ಮೆಡಿಕಲ್‌ ಸ್ಟೋರ್‌ಗಳು, ಶಾಲಾ-ಕಾಲೇಜುಗಳು, ನಮ ಮೆಟ್ರೋ, ಆಟೋ, ಟ್ಯಾಕ್ಸಿಶಾಲಾ ವಾಹನಗಳು, ಖಾಸಗಿ ಬಸ್‌‍ಗಳು, ಏರ್‌ಪೋರ್ಟ್‌ ಟ್ಯಾಕ್ಸಿಗಳು, ಅಂಗಡಿಮುಂಗಟ್ಟುಗಳು, ಹೋಟೆಲ್‌ಗಳು, ಬೇಕರಿ, ಕಾಂಡಿಮೆಂಟ್‌್ಸ, ಬಟ್ಟೆ ಅಂಗಡಿಗಳು, ಸರ್ಕಾರಿ ಕಚೇರಿಗಳು, ಸ್ಥಳೀಯ ಆಡಳಿತ ಸಂಸ್ಥೆಗಳು, ಕೈಗಾರಿಕೆಗಳು, ಮಾಲ್‌ಗಳು ಹಾಗೂ ಬೀದಿಬದಿ ವ್ಯಾಪಾರಗಳು ಎಂದಿನಂತೆ ಇರಲಿವೆ.

ಬಂದ್‌ಗೆ ಯಾರ ಬೆಂಬಲ :
ವಾಟಾಳ್‌ ನಾಗರಾಜ್‌ ನೇತೃತ್ವದ ಕನ್ನಡ ಸಂಘಟನೆಗಳ ಒಕ್ಕೂಟ, ರಾಜ್‌ಕುಮಾರ್‌ ಅಭಿಮಾನಿ ಸಂಘ, ಕನ್ನಡ ಸೇನೆ, ಕನ್ನಡ ಜಾಗೃತಿ ವೇದಿಕೆಗಳೂ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕರವೇ ಪ್ರವೀಣ್‌ ಶೆಟ್ಟಿ ಬಣ, ಕರವೇ ಶಿವರಾಮೇಗೌಡ ಬಣ, ಕರವೇ ನಾರಾಯಣ ಗೌಡ ಬಣ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಖಾಸಗಿ ಸಾರಿಗೆ ಒಕ್ಕೂಟ ಹಾಗೂ ಬಹುತೇಕ ಆಟೋ ಸಂಘಟನೆಗಳು, ಖಾಸಗಿ ಶಾಲೆಗಳ ಒಕ್ಕೂಟಗಳು, ಹೋಟೆಲ್‌ ಅಸೋಸಿಯೇಷನ್‌, ಟ್ರಾವೆಲ್ಸ್ ಅಸೋಸಿಯೇಷನ್ಸ್ ನವರು ಬಂದ್‌ಗೆ ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದಾರೆ.

ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದರೂ, ಪ್ರಮುಖ ಸಂಘಟನೆಗಳ ನಡುವೆ ಒಮತ ಮೂಡದಿರುವುದು ಬಂದ್‌ನ ಪರಿಣಾಮದ ಬಗ್ಗೆ ಭಾರೀ ಗೊಂದಲ ಸೃಷ್ಟಿಸಿದೆ. ಬಹುತೇಕ ಸೇವೆಗಳು ಎಂದಿನಂತೆ ಮುಂದುವರಿದರೆ ಬಂದ್‌ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.ನಾಳೆ ಕರ್ನಾಟಕ ನಿಜಕ್ಕೂ ಬಂದ್‌ ಆಗುತ್ತಾ, ಅಥವಾ ಬಂದ್‌ ಕೇವಲ ಸಾಂಕೇತಿಕವಾಗಿಯೇ ಉಳಿಯುತ್ತಾ? ಇದಕ್ಕೆ ನಾಳೆ ಉತ್ತರ ಸಿಗಲಿದೆ.

RELATED ARTICLES
spot_img

Latest News