Homeರಾಜ್ಯಈ ವರ್ಷಾಂತ್ಯಕ್ಕೆ ಜಿಬಿಎ ಪಂಚ ಪಾಲಿಕೆ ಚುನಾವಣೆ

ಈ ವರ್ಷಾಂತ್ಯಕ್ಕೆ ಜಿಬಿಎ ಪಂಚ ಪಾಲಿಕೆ ಚುನಾವಣೆ

ಬೆಂಗಳೂರು, ಸೆ.26- ಮತ್ತೆ ಜಿಬಿಎ ಚುನಾವಣೆ ವಿಚಾರ ಮುನ್ನೆಲೆಗೆ ಬಂದಿದೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಐದು ನಗರ ಪಾಲಿಕೆಗಳ ಚುನಾವಣೆಗೆ ತೆರೆಮರೆಯಲ್ಲಿ ಸಿದ್ಧತೆ ಚುರುಕುಗೊಂಡಿದೆ.ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಡಿಸೆಂಬರ್‌ ನಲ್ಲೇ ಚುನಾವಣೆ ನಡೆಸಬೇಕಿರುವ ಹಿನ್ನೆಲೆಯಲ್ಲಿ ಆಡಳಿತ ಯಂತ್ರವನ್ನು ಚುನಾವಣಾ ಕಾರ್ಯಕ್ಕೆ ಸಜ್ಜುಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಐದು ನಗರ ಪಾಲಿಕೆಗಳ ಚುನಾವಣೆ ಡಿಸೆಂಬರ್‌ 2026ರಲ್ಲಿ ನಡೆಸುವಂತೆ ಸುಪ್ರೀಂ ಕೋರ್ಟ್‌ ಜುಲೈ 17ರಂದು ಸ್ಪಷ್ಟ ನಿರ್ದೇಶನ ನೀಡಿತ್ತು. ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌‍ಐಆರ್‌ ಪ್ರಕ್ರಿಯೆ ನವೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ ಎಂಬುದನ್ನು ಪರಿಗಣಿಸಿದ ನ್ಯಾಯಪೀಠ, ಐದು ಪಾಲಿಕೆಗಳ ಚುನಾವಣೆಗಳನ್ನು ಡಿಸೆಂಬರ್‌ನಲ್ಲಿ ನಡೆಸುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಚುನಾವಣಾ ಸಿದ್ಧತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ಉಲ್ಲೇಖಿಸಿವೆ.

ಜಿಬಿಎ ಮುಖ್ಯ ಆಯುಕ್ತರು ಹಾಗೂ ಐದು ನಗರ ಪಾಲಿಕೆಗಳ ಆಯುಕ್ತರ ಮಟ್ಟದಲ್ಲಿ ಚುನಾವಣಾ ಸಂಬಂಧಿತ ಸಿದ್ಧತೆಗಳಿಗೆ ಒತ್ತು ನೀಡಲಾಗುತ್ತಿದೆ.ಕಾಮಗಾರಿಗಳಿಗೆ ವೇಗ:ಚುನಾವಣೆ ಘೋಷಣೆಯಾದ ಬಳಿಕ ಅಭಿವೃದ್ಧಿ ಕಾಮಗಾರಿಗಳಿಗೆ ಹೊಸ ನಿರ್ಬಂಧಗಳು ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈಗಾಗಲೇ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ರಸ್ತೆ, ಪಾದಚಾರಿ ಮಾರ್ಗ, ಬೀದಿದೀಪ, ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರು ಸೇರಿದಂತೆ ನಾಗರಿಕ ಮೂಲಸೌಕರ್ಯ ಕಾಮಗಾರಿಗಳ ಪ್ರಗತಿಯನ್ನು ವೇಗಗೊಳಿಸುವುದು ಸಿದ್ಧತೆಯ ಪ್ರಮುಖ ಭಾಗವಾಗಿದೆ.ಇತ್ತೀಚಿನ ದಿನಗಳಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ನಗರದ ರಸ್ತೆ ಹಾಗೂ ಬೀದಿದೀಪ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ, ವಿಳಂಬವಾಗಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದ್ದರು.

ಎಸ್‌‍ಐಆರ್‌ ಮುಗಿದ ಬಳಿಕ ಚುನಾವಣಾ ಪ್ರಕ್ರಿಯೆ;ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌‍ಐಆರ್‌) ಈಗ ಚುನಾವಣಾ ಸಿದ್ಧತೆಯ ಪ್ರಮುಖ ಹಂತವಾಗಿದೆ. ಜಿಬಿಎ ವ್ಯಾಪ್ತಿಯಲ್ಲೂ ವಿಚಾರದಲ್ಲಿ ವಿಚಾರಣೆ ಮತ್ತು ದಾಖಲೆ ಪರಿಶೀಲನೆ ಮುಂದುವರಿದಿದೆ. ಸೆ.25ರಂದು ಜಿಬಿಎ ಮುಖ್ಯ ಆಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮಹೇಶ್ವರ್‌ ರಾವ್‌ ಅವರು ಸುಮಾರು 13.40 ಲಕ್ಷ ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು, 2.56 ಲಕ್ಷ ಪ್ರಕರಣಗಳು ಬಾಕಿ ಇರುವುದಾಗಿ ತಿಳಿಸಿದ್ದಾರೆ.

ಅಧಿಕೃತ ವೆಬ್‌ಸೈಟ್‌ನಲ್ಲೂ ಕರಡು ಪಟ್ಟಿ, ಅಂತಿಮ ಮತದಾರರ ಪಟ್ಟಿ, ಕ್ಲೇಮ್ಸೌಆಬ್ಜೆಕ್ಷನ್ಸ್‌‍ ಹಾಗೂ ಚುನಾವಣಾ ಸಂಬಂಧಿತ ಮಾಹಿತಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.ಪ್ರಕ್ರಿಯೆ ಪೂರ್ಣಗೊಂಡು ಅಂತಿಮ ಮತದಾರರ ಪಟ್ಟಿ ಸಿದ್ಧವಾದ ಬಳಿಕ ಜಿಬಿಎ ಚುನಾವಣಾ ಪ್ರಕ್ರಿಯೆ ಮತ್ತಷ್ಟು ವೇಗ ಪಡೆಯುವ ನಿರೀಕ್ಷೆ ಇದೆ.

5 ಪಾಲಿಕೆಗಳಿಗೆ ಒಂದೇ ಚುನಾವಣಾ ಕಸರತ್ತು;ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಡಿ 369 ವಾರ್ಡ್‌ಗಳ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಯಬೇಕಿದೆ. ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಡಿಸೆಂಬರ್‌ ಅಂತ್ಯದೊಳಗೆ ಚುನಾವಣೆ ಪೂರ್ಣಗೊಳಿಸುವ ಜವಾಬ್ದಾರಿ ರಾಜ್ಯ ಚುನಾವಣಾ ಆಯೋಗ, ಜಿಬಿಎ ಹಾಗೂ ಸರ್ಕಾರದ ಮೇಲಿದೆ.

ಇದೀಗ ಅಂತಿಮ ಹಂತದತ್ತ ಸಾಗುತ್ತಿರುವ ಬೆನ್ನಲ್ಲೇ ಆಡಳಿತಾತ್ಮಕ ಸಿದ್ಧತೆಗಳೂ ಸಮಾನಾಂತರವಾಗಿ ನಡೆಯುತ್ತಿರುವುದು ಬೆಂಗಳೂರು ನಗರಪಾಲಿಕೆ ಚುನಾವಣೆ ಸಮೀಪಿಸುತ್ತಿರುವ ಸೂಚನೆ ಎಂಬ ಚರ್ಚೆ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ಆರಂಭವಾಗಿದೆ. ಆದರೆ, ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುವುದು ನ್ಯಾಯಾಲಯದ ನಿರ್ದೇಶನವಾಗಿದ್ದರೂ, ನಿಖರ ಚುನಾವಣಾ ದಿನಾಂಕವನ್ನು ರಾಜ್ಯ ಚುನಾವಣಾ ಆಯೋಗವೇ ಅಧಿಕೃತವಾಗಿ ಪ್ರಕಟಿಸಬೇಕಿದೆ..

RELATED ARTICLES
spot_img

Latest News