ನವದೆಹಲಿ, ಸೆ.26- ಭಾರತದ ಹಿರಿಯ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಬಲಗಾಲಿಗೆ ಮತ್ತೆ ಗಾಯವಾಗಿದ್ದು, ಕನಿಷ್ಠ ಮೂರು ವಾರಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರ ಉಳಿಯುವ ಸಾಧ್ಯತೆಯಿದೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ವೈಟ್ಬಾಲ್ ಸರಣಿಯಲ್ಲೂ ಅವರು ಆಡುವುದು ಅನುಮಾನವಾಗಿದೆ.
ಸೆ.20ರಂದು ಪಾಂಡ್ಯ ಅವರ ‘ರಿಟರ್ನ್ ಟು ಪ್ಲೇ’ ದಿನಾಂಕ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅ.6ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ಎ ವಿರುದ್ಧದ ಏಕದಿನ ಸರಣಿಗೆ ಅವರನ್ನು ಭಾರತ ‘ಎ’ ತಂಡಕ್ಕೆ ಆಯ್ಕೆ ಮಾಡಲಾಗಿತ್ತು.
ಬಿಸಿಸಿಐ ವೈದ್ಯಕೀಯ ಸಮಿತಿಯ ಮುಖ್ಯಸ್ಥ ಡಾ. ದಿನ್ಶಾ ಪಾರ್ಡಿವಾಲಾ ಅವರು ಪಾಂಡ್ಯ ಅವರ ಸ್ಕ್ಯಾನ್ ವರದಿಗಳನ್ನು ಪರಿಶೀಲಿಸಿದ್ದು, ಎರಡು ವಾರ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ ಎಂದು ಬಿಸಿಸಿಐ ಮೂಲ ತಿಳಿಸಿದೆ.
ಜಪಾನ್ನಿಂದ ಮರಳಿದ ಬಳಿಕ ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ, ಪುನಶ್ಚೇತನ ತರಬೇತಿ ಆರಂಭಿಸುವ ದಿನಾಂಕವನ್ನು ನಿರ್ಧರಿಸಲಾಗುತ್ತದೆ.ಅ.22ರಿಂದ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆರಂಭವಾಗಲಿದ್ದು, ಬಳಿಕ ಏಕದಿನ ಸರಣಿ ನಡೆಯಲಿದೆ. ಈ ವೇಳೆಗೆ ಪಾಂಡ್ಯ ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ಕಳೆದ ನಾಲ್ಕು ತಿಂಗಳಲ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿ, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಹಾಗೂ ಇದೀಗ ಆಸ್ಟ್ರೇಲಿಯಾ ‘ಎ’ ಸರಣಿಗೂ ಮುನ್ನ ಪಾಂಡ್ಯ ಹೊಸ ಗಾಯದ ಸಮಸ್ಯೆ ಎದುರಿಸಿದ್ದಾರೆ. ನ್ಯೂಜಿಲೆಂಡ್ ಸರಣಿಯೂ ತಪ್ಪಿದರೆ, ಮುಂದಿನ ಜಿಂಬಾಬ್ವೆ ಏಕದಿನ ಸರಣಿಯಲ್ಲಿ ಅವರು ಮರಳುವ ಸಾಧ್ಯತೆಯಿದೆ. ಅದಕ್ಕೂ ಮುನ್ನ ವಿಜಯ್ ಹಜಾರೆ ಟ್ರೋಫಿ ಅಥವಾ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕಾಗಬಹುದು.
