ಬೆಂಗಳೂರು, ಆ.12- ಖಾತೆ ಹಂಚಿಕೆಗೆ ಕೊನೆಗೂ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಅಧಿಕೃತ ಪಟ್ಟಿಯನ್ನು ಇಂದು ಮುಖ್ಯಮಂತ್ರಿಯವರು ಲೋಕಭವನಕ್ಕೆ ರವಾನಿಸಲಿದ್ದಾರೆ. ಕಳೆದ 10 ದಿನಗಳಿಂದಲೂ ಮರೀಚಿಕೆಯಾಗಿದ್ದ ಖಾತೆಗಳ ಹಂಚಿಕೆ ವಿಚಾರ ಕೊನೆಗೂ ಇತ್ಯರ್ಥಗೊಂಡಂತಾಗಿದೆ. ನಾಳೆಯಿಂದ ಅಧಿವೇಶನ ಆರಂಭಗೊಳ್ಳಲಿದ್ದು, ಮುನ್ನಾದಿನ ಖಾತೆಗಳನ್ನು ಹಂಚುತ್ತಿರುವುದು ರಾಜ್ಯ ರಾಜಕೀಯದಲ್ಲಿ ಇದೇ ಮೊದಲು ಎಂಬ ಟೀಕೆಗಳು ಕೇಳಿ ಬರುತ್ತಿವೆ.
ಮಧ್ಯಾಹ್ನದ ವೇಳೆಗೆ ಪಟ್ಟಿಯನ್ನು ಲೋಕಭವನಕ್ಕೆ ರವಾನಿಸಲಾಗುತ್ತಿದ್ದು, ಅಧಿಕೃತ ಅಧಿಸೂಚನೆ ಪ್ರಕಟವಾದ ಬಳಿಕ ಸಂಜೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದ ಸಚಿವರು ಹಾಗೂ ಶಾಸಕರ ಜೊತೆ ಚರ್ಚೆಗೆ ಸಮಯ ನಿಗದಿಪಡಿಸಿದ್ದಾರೆ.ವಿಧಾನ ಮಂಡಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳನ್ನು ಎದುರಿಸಲು ರಣತಂತ್ರ ರೂಪಿಸಲು ಇಂದು ಶಾಸಕರು ಮತ್ತು ಸಚಿವರ ಜೊತೆ ಚರ್ಚೆ ನಡೆಸಲಿದ್ದಾರೆ.
ವಿರೋಧ ಪಕ್ಷಗಳು ಬಿಡದಿ ಉಪ ನಗರ ನಿರ್ಮಾಣ, ನೈಸ್ ರಸ್ತೆ ವಿವಾದ, ಭ್ರಷ್ಟಾಚಾರಕ್ಕೆ ಗುರಿಯಾಗಿರುವ ಬಿ.ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿರುವುದು, ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದು, ಬೆಳೆ ನಷ್ಟ, ರೈತರ ಆತಹತ್ಯೆ, ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯ ಕೊರತೆ, ಪಿಂಚಣಿ ಫಲಾನುಭವಿಗಳ ಕಡಿತ, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಆಯುಧವಾಗಿಟ್ಟುಕೊಂಡು ಸರ್ಕಾರದ ವಿರುದ್ಧ ಝಳಪಿಸಲು ಸಜ್ಜಾಗಿವೆ.
ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿಯವರು ಅಧಿವೇಶನದಲ್ಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಸಚಿವರ ಜೊತೆ, ಕೆಲ ಶಾಸಕರ ನ್ನೊಳಗೊಂಡು ತಂಡಗಳನ್ನು ರಚಿಸಲಿದ್ದಾರೆ. ಸಂಪುಟ ವಿಸ್ತರಣೆ ಅಸಮಾಧಾನ, ಖಾತೆ ಹಂಚಿಕೆಯಲ್ಲಿನ ವಿಳಂಬ, ಕಾಂಗ್ರೆಸ್ ಹೈಕಮಾಂಡ್‌ನ ಅತಿಯಾದ ಹಸ್ತಕ್ಷೇಪದಿಂದ ಕಾಂಗ್ರೆಸ್‌ನಲ್ಲೇ ಅಸಮಾಧಾನ, ಅತೃಪ್ತಿಗಳು ತೀವ್ರವಾಗಿವೆ.
ಸಚಿವ ಸ್ಥಾನ ಸಿಗದೇ ಇರುವ ಕೆಲ ಶಾಸಕರು ಭಿನ್ನಮತೀಯರಾಗಿ ಸರ್ಕಾರದ ವಿರುದ್ಧ ಮುಗಿ ಬೀಳಲು ಒಳಗೊಳಗೆ ತಯಾರಾಗಿದ್ದಾರೆ. ಈ ಪರಿಸ್ಥಿತಿಗಳನ್ನು ಅರ್ಥೈಸಿಕೊಂಡಿರುವ ಮುಖ್ಯಮಂತ್ರಿಯವರು ಅಸಮಾಧಾನಿತರನ್ನು ಸಂತೈಸುವ ಜೊತೆಗೆ ಪಕ್ಷ ನಿಷ್ಠರಾಗಿ ಸರ್ಕಾರದ ಬೆಂಬಲಕ್ಕೆ ನಿಲ್ಲುವಂತಹ 30 ರಿಂದ 40 ಶಾಸಕರನ್ನು ಗುರುತಿಸಿದ್ದು, ಅವರುಗಳ ಜೊತೆ ವಿಷಯಾಧರಿತ ಚರ್ಚೆ ನಡೆಸಲಿದ್ದಾರೆ.
ಪಕ್ಷ ರಾಜಕಾರಣ ವಿಚಾರ ಬಂದಾಗ ಸಾಮೂಹಿಕವಾಗಿ ಎಲ್ಲರೂ ವಿರೋಧ ಪಕ್ಷಗಳಿಗೆ ಎದುರು ನಿಲ್ಲಬೇಕು. ವಿಷಯಾಧರಿತ ಚರ್ಚೆಗಳು ಎದುರಾದಾಗ ಸಚಿವರ ಜೊತೆಗೆ ಶಾಸಕರು ಸರ್ಕಾರವನ್ನು ಸಮರ್ಥಿಸಿಕೊಳ್ಳಬೇಕೆಂದು ಮುಖ್ಯಮಂತ್ರಿ ಸಲಹೆ ನೀಡಲಿದ್ದಾರೆ.
ಇಂದಷ್ಟೇ ಖಾತೆ ಹಂಚಿಕೆಯಾಗುತ್ತಿರುವುದರಿಂದ 19 ಮಂದಿ ಹೊಸ ಸಚಿವರಿಗೆ ಇಲಾಖೆಯ ಕಾರ್ಯನಿರ್ವಹಣೆ ಮತ್ತು ಅಧಿವೇಶನದಲ್ಲಿ ಪ್ರಶ್ನೋತ್ತರ ಸೇರಿದಂತೆ ಕೆಲವು ಸಂದರ್ಭಗಳನ್ನು ನಿಭಾಯಿಸುವುದು ಕಷ್ಟಸಾಧ್ಯವಾಗುವ ಪರಿಸ್ಥಿತಿ ಇದೆ. ಅದಕ್ಕಾಗಿ ಕೆಲವು ಮಾಜಿ ಸಚಿವರು ಹಾಗೂ ಹಿರಿಯ ಶಾಸಕರನ್ನು ನೂತನ ಸಚಿವರ ಬೆಂಬಲಕ್ಕೆ ನಿಲ್ಲುವಂತೆ ಮುಖ್ಯಮಂತ್ರಿ ಮನವಿ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಸಂಪುಟ ವಿಸ್ತರಣೆ ಸೇರಿದಂತೆ ಯಾವುದೇ ಅಸಮಾಧಾನಗಳನ್ನು ಚರ್ಚಿಸಲು ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಅವಕಾಶ ಕಲ್ಪಿಸಲಾಗುವುದು. ವಿಧಾನ ಮಂಡಲದ ವೇದಿಕೆಯಲ್ಲಿ ಸರ್ಕಾರದ ಸಮರ್ಥನೆ ಮಾಡಿಕೊಳ್ಳುವುದು ಮುಂದಿನ ಚುನಾವಣೆಯ ದೃಷ್ಟಿಯಿಂದ ಎಲ್ಲರಿಗೂ ಬಹುಮುಖ್ಯವಾಗಿದೆ.
ಶಾಸಕರು ಸರ್ಕಾರದ ಪರವಾಗಿ ನಿಲ್ಲಲೇಬೇಕು. ಪಕ್ಷ ಮುಂದಿನ ದಿನಗಳಲ್ಲಿ ಒಂದಲ್ಲಾ ಒಂದು ರೀತಿ ಅವಕಾಶಗಳನ್ನು ಕಲ್ಪಿಸಲಿದೆ. ಪಕ್ಷ ವಿರೋಧಿಗಳಾಗಿ, ಭಿನ್ನಮತೀಯರಂತೆ ವರ್ತಿಸುವವರ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್ಚರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
