Friday, November 22, 2024
Homeರಾಷ್ಟ್ರೀಯ | Nationalಭಯೋತ್ಪಾದಕ ಚಟುವಟಿಕೆ ತ್ಯಜಿಸಿ ಮೋದಿ ಭೇಟಿಯಾದ ಅಶ್ರಫ್ ಆಜಾದ್

ಭಯೋತ್ಪಾದಕ ಚಟುವಟಿಕೆ ತ್ಯಜಿಸಿ ಮೋದಿ ಭೇಟಿಯಾದ ಅಶ್ರಫ್ ಆಜಾದ್

ಬೆಂಗಳೂರು,ಮಾ.9- ಬಿಜೆಪಿ ಅಧ್ಯಕ್ಷರಾಗಿದ್ದ ಮುರಳೀ ಮನೋಹರ ಜೋಷಿ ಮತ್ತು ನರೇಂದ್ರ ಮೋದಿ 1992 ರ ಜನವರಿಯಲ್ಲಿ ಗಣರಾಜ್ಯೋತ್ಸವ ದಿನದಂದು ಶ್ರೀನಗರ ಲಾಲ್‍ಚೌಕ್‍ನಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿದ್ದರು. 26 ವರ್ಷ ವಯಸ್ಸಿನ ಯುವಕ ಮೊಹಮ್ಮದ್ ಅಶ್ರಫ್ ಹಝಂ ಅಲಿಯಾಸ್ ಆಜಾದ್ ಉಗ್ರಗಾಮಿ ಸಂಘಟನೆಯೊಂದಿಗೆ ಗುರುತಿಸಿಕೊಂಡವನಾಗಿದ್ದು ಇಂಥ ಅಪಾಯಕಾರಿ ಕೆಲಸವನ್ನು ಬಿಜೆಪಿ ನಾಯಕರು ಯಾಕೆ ಪಟ್ಟು ಹಿಡಿದು ಮಾಡುತ್ತಿದ್ದಾರೆ ಎಂಬುದನ್ನು ಕುತೂಹಲದಿಂದ ವೀಕ್ಷಿಸಲು ಅಲ್ಲಿಗೆ ಹೋಗಿದ್ದ.

ಕಾಶ್ಮೀರದಲ್ಲಿ ಇದು ಅತ್ಯಂತ ತೀವ್ರ ಉಗ್ರರ ಉಪಟಳವಿದ್ದ ಜಾಗವಾಗಿತ್ತು. ಆಜಾದ್ ಬಿಜೆಪಿ ನಾಯಕರನ್ನು ಭೇಟಿಯಾದ. ಬಳಿಕ ಚೆಷ್ಮಾ ಶಾಹಿಯಲ್ಲಿನ ಅತಿಥಿ ಗೃಹದಲ್ಲಿ ಅವರನ್ನು ಕಂಡ. ಆಜಾದ್‍ನ ಪ್ರಕಾರ ಅವರ ಸಂಬಂಧ ದೃಢವಾಯಿತು. ಬಳಿಕ ಬಿಜೆಪಿ ನಾಯಕರು ಆಜಾದ್‍ನನ್ನು ದೆಹಲಿಗೆ ಆಹ್ವಾನಿಸಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಅವನ ಭೇಟಿ ಮಾಡಿಸಿದರು.

ಕೆಲವು ತಿಂಗಳ ಬಳಿಕ ನರೇಂದ್ರ ಮೋದಿ ಶ್ರೀನಗರಕ್ಕೆ ಭೇಟಿ ನೀಡಿ ಆಜಾದ್‍ನನ್ನು ಸಂಪರ್ಕಿಸಿದರು. ಖಾಸಗಿ ಟ್ಯಾಕ್ಸಿಯಲ್ಲಿ ಆಜಾದ್ ಬದ್ಗಾಮ್ ಜಿಲ್ಲೆಯ ಸೊಯಿಬಗ್ ಗ್ರಾಮದ ಹಿಜ್‍ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯ್ಯದ್ ಸಲಾಹುದ್ದೀನ್‍ನ ನೆಲೆಗೆ ಸಮೀಪದ ಹಕೇರ್ ಮುಲ್ಲಾದಲ್ಲಿದ್ದ ತನ್ನ ಮನೆಗೆ ಮೋದಿ ಅವರನ್ನು ಕರೆದೊಯ್ದ.

10 ದಿನಗಳಿಗೂ ಅಧಿಕ ಕಾಲ ಆಜಾದ್ ಮೋದಿ ಅವರ ಜೊತೆಗೆ ಇದ್ದು ಯಾವುದೇ ಭದ್ರತೆ ಇಲ್ಲದೆ ಕಾಶ್ಮೀರದ ಎಲ್ಲ ಆರು ಜಿಲ್ಲೆಗಳಲ್ಲಿನ ಅನೇಕ ಗ್ರಾಮಗಳಲ್ಲಿ ಸುತ್ತಾಡಿಸಿದ. ಆಜಾದ್ ಪ್ರಕಾರ ಮೋದಿ ಬಿಜೆಪಿ-ಆರ್‍ಎಸ್‍ಎಸ್ ಕಾರ್ಯಭಾರದ ಮೇಲೆ ಬಂದಿದ್ದು ತಮ್ಮನ್ನು ಮಾನವ ಹಕ್ಕುಗಳ ಕಾರ್ಯಕರ್ತ ಎಂದು ಪರಿಚಯಿಸಿಕೊಂಡಿದ್ದರು. ಅವರು ಜನರನ್ನು ಅವರ ರಾಜಕೀಯ ಆಶೋತ್ತರಗಳು, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳು, ಅಭಿವೃದ್ಧಿ, ಇತಿಹಾಸ ಇತ್ಯಾದಿಗಳ ಬಗ್ಗೆ ವಿವಿಧ ಪ್ರಶ್ನೆಗಳನ್ನು ಕೇಳಿದರು. ಅವರ ಉತ್ತರಗಳನ್ನು ಮೋದಿ ತಮ್ಮ ನೋಟ್‍ಬುಕ್‍ನಲ್ಲಿ ಬರೆದುಕೊಂಡರು.

ಅಲ್ಲಿಂದೀಚೆಗೆ ಆಜಾದ್ ಬಿಜೆಪಿಗೆ ಸೇರ್ಪಡೆಗೊಂಡರು ಮತ್ತು ಇಲ್ಲಿಯತನಕ ಅದೇ ಪಕ್ಷದಲ್ಲಿ ಮುಂದುವರೆದಿದ್ದಾರೆ. 2019 ರ ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಆಜಾದ್ ಮತ್ತು ಮೋದಿ ಶ್ರೀನಗರ ವಿಮಾನನಿಲ್ದಾಣದಲ್ಲಿ ಭೇಟಿಯಾದರು ಮತ್ತು ತಮ್ಮ ಹಳೆಯ ದಿನಗಳನ್ನು ಸ್ಮರಿಸಿಕೊಂಡರು. ಗುರುವಾರ ಸಹ ಮತ್ತೊಮ್ಮೆ ಇವರಿಬ್ಬರೂ ಶ್ರೀನಗರ ವಿಮಾನನಿಲ್ದಾಣದಲ್ಲಿ ಭೇಟಿಯಾಗಿದ್ದಾರೆ. ಆಜಾದ್ ಮೋದಿ ಅವರನ್ನು ಬರಮಾಡಿಕೊಂಡು ಬೀಳ್ಕೊಟ್ಟಿದ್ದಾರೆ.

ಮೋದಿ ಆಜಾದ್‍ರ ಕುಟುಂಬ ಮತ್ತು ಸೊಯಿಬಗ್‍ನ ಅಭಿವೃದ್ಧಿಯ ಬಗ್ಗೆ ವಿಚಾರಿಸುವುದನ್ನು ಹಿರಿಯ ಅಧಿಕಾರಿಗಳು ವೀಕ್ಷಿಸಿದರು. ಆಜಾದ್‍ರನ್ನು ನನ್ನ ಹಳೆಯ ಸ್ನೇಹಿತ ಎಂದು ಮೋದಿ ಪರಿಚಯಿಸಿದರು. ವಿಮಾನ ನಿಲ್ದಾಣದಲ್ಲಿ ವಾಪಸಾದಾಗ ಮೋದಿ ಆಜಾದ್‍ಗೆ ಹೇಳಿದರು “ಆಜಾದ್ ಸಾಹಬ್ ಆಪ್ ಕೀ ಮೆಹನತ್ ರಂಗ್ ಲಾಯೀ ಹೈ. ಬಹುತ್ ಸಾರೇ ಲೋಗ್ ಜಲ್‍ಸೇ ಮೇ ಆಯೇ ಥೇ.” ಈಗ 60 ವರ್ಷ ವಯಸ್ಸಿನ ಈ ಬಿಳಿ ಗಡ್ಡಧಾರಿ ಬೇರಾರೂ ಅಲ್ಲ. ಗುರುವಾರ ಶ್ರೀನಗರ ವಿಮಾನನಿಲ್ದಾಣದಲ್ಲಿ ಮೋದಿ ಅವರನ್ನು ಭೇಟಿಯಾದ ಅಶ್ರಫ್ ಆಜಾದ್!

RELATED ARTICLES

Latest News