Homeರಾಜ್ಯಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲೂ ಮೋದಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲೂ ಮೋದಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

KPCC President BK Hariprasad attacks Modi in Independence Day speech

ಬೆಂಗಳೂರು, ಆ.15- ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿಯಲಾರಂಭಿಸಿದ್ದು, ದೇಶ ಹಲವಾರು ಸಮಸ್ಯೆಗಳಿಂದ ತೊಂದರೆಗೀಡಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಆರೋಪಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಳಿಕ ನಮ ಭವಿಷ್ಯವನ್ನು ನಾವೇ ನಿರ್ಧರಿಸುವ ಅವಕಾಶ ಸಿಕ್ಕಿದೆ. ಅನೇಕ ಹಿರಿಯರ ತ್ಯಾಗ, ಹೋರಾಟದಿಂದಾಗಿ ನಾವು ಮುಕ್ತ ವಾತಾವರಣವನ್ನು ಅನುಭವಿಸುತ್ತಿದ್ದೇವೆ ಎಂದು ಹೇಳಿದರು.

1850ರಲ್ಲಿ ಬಹುದೂರ್‌ ಶಾ ಜಬ್ಬಾರ್‌ ಅವರನ್ನು ಹೀನಾಯವಾಗಿ ಬ್ರಿಟಿಷರು ಪದಚ್ಯುತಗೊಳಿಸಿದ್ದನ್ನು ವಿರೋಧಿಸಿ ಮುಸ್ಲಿಮರು ನಂತರದ ದಿನಗಳಲ್ಲಿ ವೀರಾವೇಷದಿಂದ ಹೋರಾಟ ನಡೆಸಿದ್ದರು. ಮಹಿಳೆಯರು ಸೇರಿದಂತೆ ಅನೇಕ ಮುಸ್ಲಿಮರನ್ನು ನೇಣಿಗೇರಿಸಲಾಯಿತು. ಇಂದು ದೇಶದಲ್ಲಿ ಅಧಿಕಾರ ಹಿಡಿದಿರುವ ಆರ್‌ಎಸ್‌‍ಎಸ್‌‍ ಮತ್ತು ಅದರ ಹಿಂಬಾಲಕರನ್ನು ಹೊರತು ಪಡಿಸಿದರೆ, ಉಳಿದ ಎಲ್ಲರೂ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದರು. ನಮಗೆ ಪ್ರಜಾಪ್ರಭುತ್ವದ ಮೌಲ್ಯಗಳು ಗೊತ್ತಿದೆ ಎಂದು ಹೇಳಿದರು.

ಅಂಬೇಡ್ಕರ್‌ ಅವರು ಸಂವಿಧಾನ ಬರೆದು ಜಾತಿ, ಧರ್ಮ, ಭಾಷೆ. ಮೀರಿ ನಾವೆಲ್ಲಾ ಭಾರತೀಯರು ಎಂಬ ಭಾವನೆಯನ್ನು ಮೊದಲು ಹುಟ್ಟುಹಾಕಿದ್ದರು. ಸಂಸ್ಕೃತದಲ್ಲಿದ್ದ ವೇದ ಉಪನಿಷತ್ತುಗಳು, ಮಹಾಕಾವ್ಯಗಳು ಭಾರತೀಯರನ್ನು ಸಮಾನರು ಎಂದು ಕರೆಯುವ ಧೈರ್ಯ ಮಾಡಿರಲಿಲ್ಲ. ಆದರೆ ಸಂವಿಧಾನ ದುರ್ಬಲರು ಸೇರಿದಂತೆ ಎಲ್ಲರ ಪರವಾಗಿ ನಿಂತಿತ್ತು. ಅದರ ಪರಿಣಾಮವೇ ನಾವು ಸ್ವಾತಂತ್ರ್ಯವಾಗಿ ಯೋಚಿಸಲು, ಮಾತನಾಡಲು, ಕೆಲಸಮಾಡಲು, ಕಲಿಯಲು ಮತ್ತು ನಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಲು ಅವಕಾಶವಿದೆ. ಈ ಮೌಲ್ಯವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ಭಾರತದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ ಎಂಬ ಅಪನಂಬಿಕೆಯನ್ನು ನೆಹರೂ ಆಡಳಿತ ಹುಸಿಮಾಡಿತು. ವೈವಿಧ್ಯಮಯ ಭಾರತ ಸಂಸದೀಯ ವ್ಯವಸ್ಥೆಯಲ್ಲಿ ಸಾರ್ವಜನಿಕ ಮತದಾನದ ಹಕ್ಕನ್ನು ದೃಢಪಡಿಸುವ ಮೂಲಕ ಭವ್ಯ ಭಾರತಕ್ಕೆ ನೆಹರೂ ಬುನಾದಿ ಹಾಕಿದ್ದರು. ವಿರೋಧ ಪಕ್ಷಗಳ ಬಿನ್ನಭಿಪ್ರಾಯಕ್ಕೂ ಗೌರವ ನೀಡುತ್ತಿದ್ದರು ಎಂದು ಹೇಳಿದರು.

ಹಿಂದಿನ ಎಲ್ಲಾ ಪ್ರಧಾನಿಗಳು ದೇಶದ ಅಭಿವೃದ್ಧಿಗಾಗಿ ತಮದೇ ಆದ ಕೊಡುಗೆ ನೀಡಿದ್ದಾರೆ. 2014ರ ಬಳಿಕ ಪ್ರಜಾಪ್ರಭುತ್ವ ಕುಸಿಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹಿಂದೆಂದೂ ಕಾಣದಷ್ಟೂ ಬಿಕ್ಕಟ್ಟುಗಳನ್ನು ದೇಶ ಎದುರಿಸುತ್ತಿದೆ. ಭಾರತದ ರಾಜಕಾರಣವನ್ನು ನಿಯಂತ್ರಿಸುವ ಸಂವಿಧಾನ ಬಾಹಿರ ಶಕ್ತಿಗಳು ಮೊದಲು ಶಾಂತಿಧೂತ ಗಾಂಧೀಯವರನ್ನು ಕೊಲೆ ಮಾಡಿದ್ದವು. ಅನಂತರ ನಿರಂತರವಾಗಿ ಗಾಂಧಿಯವರನ್ನು ಅಪಮಾನಿಸುವ, ನೆಹರೂ ವಿರುದ್ಧ ಸುಳ್ಳುಗಳನ್ನು ಬಿತ್ತುವ ಪ್ರಯತ್ನ ಮಾಡುತ್ತಿವೆ. ಸಂವಿಧಾನಕ್ಕಿಂತಲೂ, ಸನಾತನ ಧರ್ಮವೇ ಹೆಚ್ಚು ಎಂದು ನಾಚಿಕೆ ಇಲ್ಲದೇ ವಾದಿಸಲಾಗುತ್ತಿದೆ. ಇತ್ತೀಚೆಗೆ ನಡೆಯುತ್ತಿರುವ ಪ್ರಕರಣಗಳು ದಿಗ್ಬ್ರಮೆ ಹುಟ್ಟಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಚುನಾವಣಾ ಆಯೋಗದಿಂದ ಮತದಾರ ಪಟ್ಟಿ ಪರಿಷ್ಕರಣೆ ಮೂಲಕ ಕೋಟ್ಯಾಂತರ ಜನರ ಮತದಾನ ಹಕ್ಕನ್ನು ಕಸಿಯಲಾಗುತ್ತಿದೆ. ಆಯೋಧ್ಯೆ ರಾಮಮಂದಿರದಲ್ಲಿ ನಡೆದ ಅವ್ಯವಹಾರದ ಬಗ್ಗೆ ರಾಮನ ಭಕ್ತರು ಮಾತ್ರ ಚರ್ಚೆ ಮಾಡಬೇಕು. ಉಳಿದವರು ಈ ಬಗ್ಗೆ ಮಾತನಾಡುವ ಅಗತ್ಯ ಇಲ್ಲ ಎಂದು ವಾದಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.

ಸಂವಿಧಾನ ವಿರುದ್ಧ ಕೃತ್ಯಗಳು ಸಹಜ ಎಂಬಂತೆ ನಡೆಯುತ್ತಿವೆ. ಸಂಸತ್‌ನಲ್ಲಿ ತಮಗೆ ಬಹುಮತ ಇರುವುದರಿಂದ ಏನೂ ಬೇಕಾದರೂ ಮಾಡಬಬಹುದು ಎಂಬ ಸರ್ವಾಧಿಕಾರಿ ಧೋರಣೆಗೆ ಸರ್ಕಾರ ಅಂಟಿಕೊಂಡಿದೆ. ಚುನಾವಣೆ ಹೊರತುಪಡಿಸಿದರೆ, ಉಳಿದ ಯಾವ ಘಟನೆಗೂ ತಮಗೂ ಸಂಬಂಧವಿಲ್ಲ ಎಂಬಂತೆ ಪ್ರಧಾನಿಯವರು ವಿದೇಶಿ ಪ್ರವಾಸ ಮಾಡುತ್ತಲೇ ಇದ್ದಾರೆ. ಗೃಹಸಚಿವರು ತಮಗೆ ಯಾವುದೇ ಉತ್ತರದಾಯಿತ್ವವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಇಂತಹ ನೂರಾರು ಘಟನೆಗಳನ್ನು ದಿನನಿತ್ಯ ನೋಡುತ್ತಿದ್ದೇವೆ. ಇದು ಪ್ರಜಾಪ್ರಭುತ್ವ ಕುಸಿಯುತ್ತಿರುವ ಸಂಕೇತವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ಸಿಗರು ಪ್ರಜಾ ಸತಾತಕ ಹೋರಾಟದ ಮೂಲಕ ಪ್ರಜಾಪ್ರಭುತ್ವ ಕುಸಿತವನ್ನು ತಡೆಯದಿದ್ದರೆ ಸ್ವಾತಂತ್ರೆ ಅರ್ಥವೇ ಇರುವುದಿಲ್ಲ ಎಂದು ಹೇಳಿದರು. ಸುಪ್ರೀಂಕೋರ್ಟ್‌, ಹೈಕೋರ್ಟ್‌ ನ್ಯಾಯಾಧೀಶರ ನೇಮಕಾತಿಯಲ್ಲೂ ಏಕಪಕ್ಷೀಯ ನೀರ್ಧಾರಗಳಾಗುತ್ತವೆ. ಈ ಮೊದಲು ಸರ್ಕಾರ ಮತ್ತು ನ್ಯಾಯಾಂಗದ ನಡುವೆ ಸಂಘರ್ಷಗಳಾಗುತ್ತಿದ್ದವು. ಸರ್ಕಾರದ ಕೈಮೇಲಾಗುವಂತಹ ತೀರ್ಪುಗಳನ್ನು ನೀಡುವ ನ್ಯಾಯಾಧೀಶರು ನಿವೃತ್ತಿ ನಂತರ ಉನ್ನತ ಹುದ್ದೆಗಳನ್ನು ಪಡೆಯತೊಡಗಿದ್ದಾರೆ ಎಂದು ಆರೋಪಿಸಿದರು.

ಮೋದಿಯವರ ಟೀಕೆಕಾರರನ್ನು ಬಾಯಿ ಮುಚ್ಚಿಸಲು ಎರಡು ಮಾದರಿಯನ್ನು ಅನುಸರಿಸಲಾಗುತ್ತಿದೆ. ವಸಹಾತುಷಾಯಿಯ ಕಾನೂನುಗಳ ದುರ್ಬಳಕೆ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಚಾರಿತ್ರ್ಯ ಹರಣ ಮಾಡಲಾಗುತ್ತದೆ ಎಂದು ದೂರಿದರು. ಭಿನ್ನಾಭಿಪ್ರಾಯ ಹೊಂದಿರುವ ವ್ಯಕ್ತಿಗಳ ವಿರುದ್ಧ ದಾಖಲಾಗಿರುವ ಒಟ್ಟು ದೇಶದ್ರಶೋಹ ಪ್ರಕರಣಗಳಲ್ಲಿ ಶೇ.90ರಷ್ಟು ಮೋದಿ ಆಡಳಿತದಲ್ಲೇ ದಾಖಲಾಗಿರುವುದು ಗಮನಾರ್ಹ ಅಂಶ. ಯುಎಪಿಎ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳಲ್ಲಿ 2015ರಿಂದ 2019ರ ನಡುವೆ ಶೇ.70ರಷ್ಟು ಹೆಚ್ಚಾಗಿವೆ. ಬಂಧಿತರಾಗಿರುವ ಜನ ಇನ್ನೂ ಜೈಲಿನಲ್ಲಿದ್ದಾರೆ. ಜನ ಸಂಖ್ಯೆಯಲ್ಲಿ ಶೇ.14ರಷ್ಟಿರುವ ಮುಸ್ಲಿಂ ಸಮುದಾಯದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ವಿವರಿಸಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮಾತನಾಡಿ, 80ನೇ ವರ್ಷದ ಸ್ವಾತಂತ್ರ ಆಚರಿಸುವ ಭಾಗ್ಯ ನಮಗೆ ದೊರೆತಿದೆ. ಸ್ವಾತಂತ್ರ ಬೆಲೆ ಕಟ್ಟಲು ಸಾಧ್ಯವಿಲ್ಲ, ಅದು ನಮ ಉಸಿರು ಎಂದರು.ಎಲ್ಲರ ನಂಬಿಕೆಯಂತೆ ರಾಜ್ಯದ ಜನರ ಇಚ್ಚೆಯಂತೆ ಸೇವೆ ಸಲ್ಲಿಸುತ್ತೇನೆ. ರಾಗ ದ್ವೇಷಗಳಿಲ್ಲದೆ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ. ಪಕ್ಷದ ಶಿಸ್ತಿನ ಸಿಪಾಯಿಯಂತೆ ರಾಜಕ್ಕಾಗಿ ದುಡಿಯುತ್ತೇನೆ ಎಂದು ಹೇಳಿದರು.

ಹರಿಪ್ರಸಾದ್‌ ಅವರ ನಾಯಕತ್ವದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ಬರಲು ಶ್ರಮಿಸಬೇಕು. ದೇಶದಲ್ಲೂ ಬದಲಾವಣೆಯಾಗಬೇಕು. ಸಿದ್ದರಾಮಯ್ಯಅವರ ನೇತೃತ್ವದಲ್ಲಿ 5 ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲೂ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ದುಡಿದು ನಾಡಿನ ಜನರ ಸೇವೆ ಮಾಡುವುದಾಗಿ ಹೇಳಿದರು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಗ್ಯಾರಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ.ರೇವಣ್ಣ, ವಿಧಾನ ಪರಿಷತ್‌ ಸದಸ್ಯೆ ಉಮಾಶ್ರೀ, ನಾಗರಾಜ್‌ ಯಾದವ್‌, ಗೋವಿಂದ್‌ ರಾಜ್‌ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES
spot_img

Latest News