Friday, May 24, 2024
Homeರಾಷ್ಟ್ರೀಯಚುನಾವಣಾ ಆಯುಕ್ತ ಗೋಯಲ್ ದಿಢೀರ್ ರಾಜೀನಾಮೆಗೆ ಕಾರಣವೇನು..?

ಚುನಾವಣಾ ಆಯುಕ್ತ ಗೋಯಲ್ ದಿಢೀರ್ ರಾಜೀನಾಮೆಗೆ ಕಾರಣವೇನು..?

ನವದೆಹಲಿ,ಮಾ.10- ಲೋಕಸಭಾ ಚುನಾವಣೆ ಘೋಷಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರ ದಿಢೀರ್ ರಾಜೀನಾಮೆಗೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನಡುವಿನ ಭಿನ್ನಾಭಿಪ್ರಾಯಗಳೇ ಕಾರಣ ಎಂದು ಆಯೋಗದ ಮೂಲಗಳು ತಿಳಿಸಿವೆ.

ಚುನಾವಣಾ ಆಯುಕ್ತ ಅರುಣ್ ಗೋಯೆಲ್ ನೀಡಿರುವ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿಕೃತವಾಗಿ ಅಂಗೀಕರಿಸಿದ್ದಾರೆ ಎಂದು ತಿಳಿದುಬಂದಿದೆ. ರಾಜೀನಾಮೆ ನೀಡದಂತೆ ಕೇಂದ್ರ ಸರ್ಕಾರ ಗೋಯಲ್ ಅವರ ಮನವೋಲಿಸುವ ಕೆಲಸ ಮಾಡಿದರೂ ಪ್ರಯೋಜನವಾಗದೆ ಇರಲು ಪ್ರಮುಖ ಕಾರಣವೇ ರಾಜೀವ್ ಕುಮಾರ್ ಎಂದು ವರದಿಯಾಗಿದೆ.

ಮೂರು ಸದಸ್ಯರನ್ನು ಒಳಗೊಂಡಿರುವ ಭಾರತದ ಚುನಾವಣಾ ಆಯೋಗವು ಈಗಾಗಲೇ ಒಂದು ಸ್ಥಾನ ಖಾಲಿ ಇತ್ತು ಇದೀಗ ಗೋಯಲ್ ರಾಜೀನಾಮೆಯಿಂದಾಗಿ ರಾಜೀವ್ ಕುಮಾರ್ ಮಾತ್ರ ಚುನಾವಣಾ ಸಮಿತಿಯಲ್ಲಿ ಉಳಿದಿದ್ದಾರೆ. ನಿವೃತ್ತ ಅಧಿಕಾರಿಯಾಗಿದ್ದ ಪಂಜಾಬ್ ಕೇಡರ್‍ನ 1985-ಬ್ಯಾಚ್ ಐಎಎಸ್ ಅಧಿಕಾರಿ ಗೋಯೆಲ್ ಅವರು ನವೆಂಬರ್ 2022 ರಲ್ಲಿ ಚುನಾವಣಾ ಆಯೋಗವನ್ನು ಸೇರಿದ್ದರು.

ಮೂಲಗಳ ಪ್ರಕಾರ ಮುಂದಿನ ವಾರ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ಆದಾಗ್ಯೂ, ಗೋಯೆಲ್ ಅವರ ಅನಿರೀಕ್ಷಿತ ನಿರ್ಗಮನದ ಹಿಂದೆ ಹಲವಾರು ಅನುಮಾನಗಳನ್ನು ಹುಟ್ಟಿಹಾಕಿದೆ. ಹೊಸ ಆಯುಕ್ತರ ನೇಮಕಾತಿ ಪ್ರಕ್ರಿಯೆಯು ಕಾನೂನು ಸಚಿವರ ನೇತೃತ್ವದಲ್ಲಿ ಮತ್ತು ಇಬ್ಬರು ಕೇಂದ್ರ ಕಾರ್ಯದರ್ಶಿಗಳನ್ನು ಒಳಗೊಂಡಂತೆ ಐದು ಹೆಸರುಗಳನ್ನು ಶಾರ್ಟ್‍ಲಿಸ್ಟ್ ಮಾಡಿ ತರುವಾಯ, ಪ್ರಧಾನ ಮಂತ್ರಿ ನೇತೃತ್ವದ ಆಯ್ಕೆ ಸಮಿತಿಯು, ಪ್ರಧಾನ ಮಂತ್ರಿಯಿಂದ ನಾಮನಿರ್ದೇಶನಗೊಂಡ ಕೇಂದ್ರ ಕ್ಯಾಬಿನೆಟ್ ಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಅಥವಾ ಏಕೈಕ ದೊಡ್ಡ ವಿರೋಧ ಪಕ್ಷದ ನಾಯಕರನ್ನು ಒಳಗೊಂಡಿದ್ದು, ಅಂತಿಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾಗುತ್ತದೆ.

ಗೋಯೆಲ್ ಅವರ ರಾಜೀನಾಮೆಗೆ ಮುಂಚಿನ ಒಂದು ಗಮನಾರ್ಹ ಕ್ರಮವೆಂದರೆ ಕಳೆದ ವರ್ಷದ ಕೊನೆಯಲ್ಲಿ ಹೊಸ ಕಾನೂನನ್ನು ಜಾರಿಗೊಳಿಸಿದ್ದು, ದೇಶದ ಉನ್ನತ ಚುನಾವಣಾ ಅಧಿಕಾರಿಗಳನ್ನು ನೇಮಿಸುವ ಪ್ರಕ್ರಿಯೆಯನ್ನು ಬದಲಾಯಿಸಲಾಗಿದ್ದು, ಪರಿಷ್ಕøತ ಕಾರ್ಯವಿಧಾನದ ಅಡಿಯಲ್ಲಿ, ಭಾರತದ ಮುಖ್ಯ ನ್ಯಾಯಾಧಿಶರನ್ನು ಆಯ್ಕೆ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ.

ಗೋಯೆಲ್ ಅವರ ಹಠಾತ್ ನಿರ್ಗಮನದ ಪರಿಣಾಮಗಳನ್ನು ಪ್ರಶ್ನಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತ ಪರಿಸ್ಥಿತಿಯು ಚುನಾವಣಾ ಆಯೋಗವನ್ನು ಚುನಾವಣಾ ಲೋಪ ಎಂದು ಮರುನಾಮಕರಣ ಮಾಡುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ. ಚುನಾವಣಾ ಆಯೋಗವೋ ಅಥವಾ ಚುನಾವಣಾ ಲೋಪದೋಷವೋ? ಭಾರತದಲ್ಲಿ ಈಗ ಒಬ್ಬರೇ ಚುನಾವಣಾ ಆಯುಕ್ತರಿದ್ದಾರೆ, ಇನ್ನು ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾಗಲಿದೆ. ಏಕೆ? ಎಂದು ಅವರು ಎಕ್ಸ್‍ನಲ್ಲಿ ಕೇಳಿದ್ದಾರೆ.

RELATED ARTICLES

Latest News