Saturday, November 23, 2024
Homeರಾಷ್ಟ್ರೀಯ | Nationalಎನ್‍ಐಎ ಕೈಗೆ ಸಿಗದ ಬಾಂಬರ್, ಹೈದರಾಬಾದ್ ಕರ್ನಾಟಕದಲ್ಲಿ ಶೋಧ

ಎನ್‍ಐಎ ಕೈಗೆ ಸಿಗದ ಬಾಂಬರ್, ಹೈದರಾಬಾದ್ ಕರ್ನಾಟಕದಲ್ಲಿ ಶೋಧ

ಬೆಂಗಳೂರು,ಮಾ.10- ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಅಧಿಕಾರಿಗಳು ಮತ್ತು ಸಿಸಿಬಿ ಪೊಲೀಸರು ಏನೇ ತಿಪ್ಪರಲಾಗ ಹಾಕಿದರೂ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿ ಪರಾರಿಯಾಗಿರುವ ಆರೋಪಿಯ ಸುಳಿವು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಸೀದಾ ಬಿಎಂಟಿಸಿ ಬಸ್ ಹತ್ತಿ ರಾಜಾಜಿನಗರದ ಸುಜಾತ ಥಿಯೇಟರ್ ಬಸ್‍ಸ್ಟಾಂಡ್‍ಗೆ ಬಂದಿಳಿದು ಅಲ್ಲಿಂದ ಕೆಎಸ್‍ಆರ್‍ಟಿಸಿ ಬಸ್ ಹತ್ತಿ ತುಮಕೂರು, ಬಳ್ಳಾರಿ, ಬೀದರ್, ಗುಲ್ಬರ್ಗಾ, ರಾಯಚೂರು ಮೂಲಕ ಭಟ್ಕಳ ತಲುಪಿದ್ದ ಬಾಂಬರ್ ನಂತರ ಎಲ್ಲಿಗೆ ಹೋಗಿದ್ದಾನೆ ಎಂಬುದು ಇನ್ನೂ ಪತ್ತೆಯಾಗಿಲ್ಲ.

ಹೀಗಾಗಿ ಹೈದರಾಬಾದ್ ಕರ್ನಾಟಕದಲ್ಲಿ ಬೀಡುಬಿಟ್ಟಿರುವ ಎನ್‍ಐಎ ಅಧಿಕಾರಿಗಳು ಅಲ್ಲಿನ ಗಲ್ಲಿ ಗಲ್ಲಿಗಳಲ್ಲೂ ಬಾಂಬರ್‍ಗಾಗಿ ಶೋಧ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ಆತನ ಸುಳಿವು ಮಾತ್ರ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಆದರೂ ಪಟ್ಟುಬಿಡದ ಎನ್‍ಐಎ ಅಧಿಕಾರಿಗಳು ತಮ್ಮ ತಂತ್ರವನ್ನೆಲ್ಲಾ ಬಳಸಿ ಆರೋಪಿಗಾಗಿ ಶೋಧ ಮುಂದುವರೆಸಿದ್ದು ಆತನ ಬಂಧನಕ್ಕಾಗಿ ತೀವ್ರ ಕಾರ್ಯಚರಣೆ ನಡೆಸುತ್ತಿದ್ದಾರೆ. ಸುಜಾತ ಬಸ್ ನಿಲ್ದಾಣದಿಂದ ತುಮಕೂರಿಗೆ ಬಾಂಬರ್ ಹೋಗಿರುವುದು ಖಚಿತವಾಗುತ್ತಿದ್ದಂತೆ ಅಲ್ಲಿಗೆ ದೌಡಾಯಿಸಿದ್ದ ಪೊಲೀಸರು ತುಮಕೂರು ಮತ್ತು ಬಳ್ಳಾರಿಯ ಇಂಚಿಂಚು ಜಾಗವನ್ನು ಜಾಲಾಡಿದ್ದರೂ ಆತನ ಸುಳಿವು ಮಾತ್ರ ಪತ್ತೆಯಾಗಿರಲಿಲ್ಲ.

ಹೀಗಾಗಿ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂತಿರುಗಿದ್ದ ತಂಡಗಳು ಇದೀಗ ಬಾಂಬರ್ ಪತ್ತೆಗಾಗಿ ಹೈದರಾಬಾದ್ ಕರ್ನಾಟಕದಲ್ಲಿ ಠಿಕಾಣಿ ಹೂಡಿದ್ದಾರೆ. ಸ್ಥಳದಲ್ಲೇ ಬೀಡುಬಿಟ್ಟಿರುವ ಎನ್‍ಐಎ ಅಧಿಕಾರಿಗಳು ಮತ್ತು ಸಿಸಿಬಿ ಪೊಲೀಸರ ವಿಶೇಷ ತಂಡ ಅನುಮಾನಸ್ಪದ ಸ್ಥಳಗಳ ಮೇಲೆ ದಿಢೀರ ದಾಳಿ ನಡೆಸಿ ಅನುಮಾನ ಬಂದವರನ್ನು ತೀವ್ರ ವಿಚಾರಣೆಗೊಳಪಡಿಸುತ್ತಿದೆ. ಇದೆಲ್ಲದರ ನಡುವೆ ನೆರೆಯ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಬಳ್ಳಾರಿಯಲ್ಲಿ ಕೆಲವು ಶಂಕಿತರನ್ನು ಪಡೆದು ವಿಚಾರಣೆಗೆ ಒಳಪಡಿಸಿದ್ದರೂ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ.

ಬಾಂಬ್ ಇಟ್ಟ ನಂತರ ಆರೋಪಿ ತಲೆಗೆ ಟೋಪಿ ಹಾಕಿಕೊಂಡು ಮುಖ ಮುಚ್ಚಿಕೊಂಡು ಹೋಗುತ್ತಿದ್ದ ಬಗ್ಗೆ ಸಿಕ್ಕ ಚಹರೆ ಆಧಾರದ ಮೇಲೆ ಶಂಕಿತನ ಫೆÇೀಟೋಗಳನ್ನು ಸಾರ್ವಜನಿಕ ವಲಯದಲ್ಲಿ ಹರಿಬಿಟ್ಟು ಬಾಂಬರ್ ಬಗ್ಗೆ ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದರೂ ಆರೋಪಿ ಬಗ್ಗೆ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಎನ್‍ಐಎ ಅಧಿಕಾರಿಗಳ ತಂಡ ಬಾಂಬರ್‍ಗಾಗಿ ಶೋಧ ಮುಂದುವರೆಸಿದ್ದು ಯಾವಾಗ ಚಾಲಾಕಿ ಆರೋಪಿಯನ್ನು ಬಂಧಿಸುವರೋ ಕಾದುನೋಡಬೇಕಿದೆ.

RELATED ARTICLES

Latest News