ನವದೆಹಲಿ, ಆ.17- ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಸಂಘರ್ಷ ಹಾಗೂ ಆಮದು ಅಡುಗೆ ಅನಿಲದ ಪೂರೈಕೆಯಲ್ಲಿ ಎದುರಾಗಬಹುದಾದ ವ್ಯತ್ಯಯಗಳನ್ನು ಸಮರ್ಥವಾಗಿ ಎದುರಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ದೇಶೀಯ ಪೂರೈಕೆಗೆ ಬಲವಾದ ಭದ್ರತಾ ವ್ಯವಸ್ಥೆ ರೂಪಿಸುವ ಉದ್ದೇಶದಿಂದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಇದೇ ಮೊದಲ ಬಾರಿಗೆ ಸಾರ್ವಜನಿಕ ಹಾಗೂ ಖಾಸಗಿ ವಲಯದ ತೈಲ ಸಂಸ್ಕರಣಾಗಾರಗಳು ಮತ್ತು ಅಪ್‌ಸ್ಟ್ರೀಮ್ ಕಂಪನಿಗಳಿಗೆ ಎಲ್‌ಪಿಜಿ ಉತ್ಪಾದನೆಯ ಗುರಿ ನಿಗದಿಪಡಿಸಿ ಅಧಿಕೃತ ಆದೇಶ ಹೊರಡಿಸಿದೆ.
ದೇಶದ 21 ತೈಲ ಸಂಸ್ಕರಣಾ ಘಟಕಗಳು ಮತ್ತು ಅಪ್‌ಸ್ಟ್ರೀಮ್ ಕಂಪನಿಗಳ ಒಟ್ಟು ಎಲ್‌ಪಿಜಿ ಉತ್ಪಾದನಾ ಸಾಮರ್ಥ್ಯವನ್ನು ದಿನಕ್ಕೆ 63,810 ಟನ್ ಎಂದು ನಿಗದಿಪಡಿಸಲಾಗಿದೆ. ಇದು ಕಳೆದ ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ದೇಶೀಯವಾಗಿ ಉತ್ಪಾದಿಸಲಾದ ಎಲ್‌ಪಿಜಿಗಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿದ್ದು, ದೇಶದ ದೈನಂದಿನ ಬಳಕೆಯ ಸುಮಾರು ಶೇ.70ರಷ್ಟು ಪ್ರಮಾಣಕ್ಕೆ ಸಮನಾಗಿದೆ.
ಸಾರ್ವಜನಿಕ ವಲಯದ 18 ಸಂಸ್ಕರಣಾಗಾರಗಳಿಗೆ ದಿನಕ್ಕೆ ಒಟ್ಟು 31,470 ಟನ್ ಉತ್ಪಾದನಾ ಗುರಿ ನೀಡಲಾಗಿದೆ. ಒಎನ್‌ಜಿಸಿ ಮತ್ತು ಗೇಲ್ ಸೇರಿದಂತೆ ಅಪ್‌ಸ್ಟ್ರೀಮ್ ಅನಿಲ ಉತ್ಪಾದಕ ಸಂಸ್ಥೆಗಳಿಗೆ ದಿನಕ್ಕೆ ಒಟ್ಟು 6,460 ಟನ್ ಉತ್ಪಾದನಾ ಗುರಿ ನಿಗದಿಪಡಿಸಲಾಗಿದೆ.
ಪ್ರಮುಖ ಕಂಪನಿಗಳಿಗೆ ಉತ್ಪಾದನಾ ಗುರಿ
ಖಾಸಗಿ ಹಾಗೂ ಸಾರ್ವಜನಿಕ ವಲಯದ ಪ್ರಮುಖ ಕಂಪನಿಗಳಿಗೂ ನಿರ್ದಿಷ್ಟ ಉತ್ಪಾದನಾ ಗುರಿ ನಿಗದಿಪಡಿಸಲಾಗಿದೆ.
*ರಿಲಯನ್ಸ್ ಇಂಡಸ್ಟ್ರೀಸ್ ಜಾಮ್‌ನಗರ ಘಟಕಕ್ಕೆ ದಿನಕ್ಕೆ 18,000 ಟನ್ ಉತ್ಪಾದನಾ ಸಾಮರ್ಥ್ಯ ನಿಗದಿಪಡಿಸಲಾಗಿದೆ. ಇದು ದೇಶೀಯ ಮಾರುಕಟ್ಟೆಗಾಗಿ ಮೀಸಲಾದ ದೇಶೀಯ ಸುಂಕ ವಲಯದ ಸಂಸ್ಕರಣಾಗಾರವಾಗಿದೆ.
*ಬಿಪಿಸಿಎಲ್‌ನ ಕೊಚ್ಚಿ ಸಂಸ್ಕರಣಾಗಾರಕ್ಕೆ ದಿನಕ್ಕೆ 4,800 ಟನ್.
*ನಯಾರಾ ಎನರ್ಜಿಯ ವಡಿನಾರ್ ಘಟಕಕ್ಕೆ ದಿನಕ್ಕೆ 4,480 ಟನ್ ಉತ್ಪಾದನಾ ಗುರಿ ನೀಡಲಾಗಿದೆ.
ಈ ಮೂರು ಪ್ರಮುಖ ಕಂಪನಿಗಳು ಮಾತ್ರ ಒಟ್ಟಾಗಿ ದಿನಕ್ಕೆ 27,280 ಟನ್ ಎಲ್‌ಪಿಜಿ ಉತ್ಪಾದನಾ ಸಾಮರ್ಥ್ಯ ಹೊಂದಿವೆ.
ಆಮದು ಅವಲಂಬನೆಗೆ ಕಡಿವಾಣ
2025-26ರ ಆರ್ಥಿಕ ವರ್ಷದಲ್ಲಿ ಭಾರತವು ಒಟ್ಟು 33.2 ದಶಲಕ್ಷ ಟನ್ ಎಲ್‌ಪಿಜಿ ಬಳಸಿದೆ. ಇದು ದಿನಕ್ಕೆ ಸರಾಸರಿ 91,000 ಟನ್ ಬಳಕೆಗೆ ಸಮನಾಗಿದೆ. ಆದರೆ ದೇಶೀಯವಾಗಿ ಉತ್ಪಾದನೆಯಾಗಿದ್ದು 13.1 ದಶಲಕ್ಷ ಟನ್ ಮಾತ್ರ. ಉಳಿದ 21.3 ದಶಲಕ್ಷ ಟನ್ ಅಂದರೆ ಶೇ.64ಕ್ಕೂ ಅಧಿಕ ಎಲ್‌ಪಿಜಿ ಅಗತ್ಯವನ್ನು ಆಮದಿನ ಮೂಲಕ ಪೂರೈಸಬೇಕಾಯಿತು.
ಪಶ್ಚಿಮ ಏಷ್ಯಾದ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಇಂಧನ ಪೂರೈಕೆ ಸರಪಳಿಗೆ ಎದುರಾಗಬಹುದಾದ ಅಡಚಣೆಗಳು ಭಾರತದ ಎಲ್‌ಪಿಜಿ ಆಮದಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಹೆಚ್ಚಿಸಿವೆ. ಸೌದಿ ಅರೇಬಿಯಾ ಸೇರಿದಂತೆ ಪ್ರಮುಖ ಪೂರೈಕೆದಾರ ರಾಷ್ಟ್ರಗಳಿಂದ ಬರುವ ಎಲ್‌ಪಿಜಿಯ ಬಹುಪಾಲು ಇದೇ ಜಲಮಾರ್ಗದ ಮೂಲಕ ಭಾರತಕ್ಕೆ ತಲುಪುತ್ತದೆ. ಈ ಹಿನ್ನೆಲೆಯಲ್ಲಿ ಆಮದು ಅವಲಂಬನೆಯನ್ನು ಕಡಿಮೆ ಮಾಡುವುದರ ಜೊತೆಗೆ ದೇಶೀಯ ಉತ್ಪಾದನೆ ಹೆಚ್ಚಿಸಿ ಭದ್ರತಾ ಸಂಗ್ರಹವನ್ನು ಬಲಪಡಿಸಲು ಸರ್ಕಾರ ಮುಂದಾಗಿದೆ.
ತಾಂತ್ರಿಕ ಉನ್ನತೀಕರಣಕ್ಕೆ ಒತ್ತು
ತೈಲ ಸಂಸ್ಕರಣಾ ಕಂಪನಿಗಳು ತಮ್ಮ ಅಸ್ತಿತ್ವದಲ್ಲಿರುವ ಕನಿಷ್ಠ ಉತ್ಪಾದನಾ ಮಿತಿಯನ್ನು ಹೆಚ್ಚಿಸಲು ಅಗತ್ಯ ತಾಂತ್ರಿಕ ಉನ್ನತೀಕರಣ ಕೈಗೊಳ್ಳಬೇಕಿದೆ. ನಾಫ್ತಾದಿಂದ ಎಲ್‌ಪಿಜಿ ಪರಿವರ್ತನೆ ಹಾಗೂ ಗ್ಯಾಸೋಲಿನ್ ಆಧಾರಿತ ಘಟಕಗಳನ್ನು ಆಧುನಿಕ ತಂತ್ರಜ್ಞಾನಕ್ಕೆ ನವೀಕರಿಸುವ ಕ್ರಮಗಳಿಗೂ ಒತ್ತು ನೀಡಲಾಗಿದೆ.
ಇದರ ಜೊತೆಗೆ ಎಲ್‌ಪಿಜಿ ಸಂಗ್ರಹಣೆ ಮತ್ತು ಸಾಗಣೆಗೆ ಅಗತ್ಯವಿರುವ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವಂತೆ ಕಂಪನಿಗಳಿಗೆ ಸೂಚಿಸಲಾಗಿದೆ. ರೈಲ್ವೆ ಹಾಗೂ ರಸ್ತೆ ಟ್ಯಾಂಕರ್‌ಗಳಂತಹ ಸಾಗಣೆ ವ್ಯವಸ್ಥೆಗಳನ್ನು ಬಲಪಡಿಸುವುದು ಇದರಲ್ಲಿ ಸೇರಿದೆ.
ವಿದೇಶಿ ಪೂರೈಕೆಯಲ್ಲಿ ಭವಿಷ್ಯದಲ್ಲಿ ವ್ಯತ್ಯಯ ಉಂಟಾದರೂ ದೇಶೀಯ ಗ್ರಾಹಕರಿಗೆ ಎಲ್‌ಪಿಜಿ ಕೊರತೆಯಾಗದಂತೆ ಸರ್ಕಾರ ನಿಗಾ ವಹಿಸಲಿದೆ. ಉತ್ಪಾದನಾ ಗುರಿಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ಪರಿಶೀಲಿಸಲಾಗುವುದು. ಹೊಸ ಸಂಸ್ಕರಣಾಗಾರಗಳ ಸ್ಥಾಪನೆ ಹಾಗೂ ತಾಂತ್ರಿಕ ಪ್ರಗತಿಗೆ ಅನುಗುಣವಾಗಿ ಗುರಿಗಳನ್ನು ಪರಿಷ್ಕರಿಸಲಾಗುತ್ತದೆ.
