Homeರಾಷ್ಟ್ರೀಯಮಲಯಾಳಂ ಹೊಸ ವರ್ಷ ಆರಂಭ: ಭಕ್ತರಿಗೆ ಶಬರಿಮಲೆ ದೇವಸ್ಥಾನದ ಬಾಗಿಲು ಓಪನ್

ಮಲಯಾಳಂ ಹೊಸ ವರ್ಷ ಆರಂಭ: ಭಕ್ತರಿಗೆ ಶಬರಿಮಲೆ ದೇವಸ್ಥಾನದ ಬಾಗಿಲು ಓಪನ್

Sabarimala Temple Opens Doors for Devotees as Malayalam New Year Begins

ಶಬರಿಮಲೆ, ಆ.17- ಮಲಯಾಳಂ ಹೊಸ ವರ್ಷ ಹಾಗೂ ಚಿಂಗಂ ಮಾಸದ ಆರಂಭದ ಹಿನ್ನೆಲೆಯಲ್ಲಿ ಪ್ರಸಿದ್ಧ ಶಬರಿಮಲೆ ಶ್ರೀ ಅಯ್ಯಪ್ಪ ದೇವಸ್ಥಾನದ ಬಾಗಿಲನ್ನು ಇಂದು ಮುಂಜಾನೆ ಭಕ್ತರ ದರ್ಶನಕ್ಕಾಗಿ ತೆರೆಯಲಾಯಿತು.

ಮಲಯಾಳಂ ಕ್ಯಾಲೆಂಡರ್‌ನ ಕರ್ಕಿಡಕಂ ಮಾಸದ ಕೊನೆಯ ದಿನವಾದ ಭಾನುವಾರ ಸಂಜೆ ದೇವಸ್ಥಾನದಲ್ಲಿ ಪೂಜಾ ವಿಧಿವಿಧಾನಗಳನ್ನು ಪ್ರಧಾನ ಅರ್ಚಕ (ಮೇಲ್ಶಾಂತಿ) ಪ್ರಸಾದ್‌ ಇ.ಡಿ. ನೆರವೇರಿಸಿದರು. ದೇವಸ್ಥಾನದ ತಂತ್ರಿ (ಮುಖ್ಯ ಅರ್ಚಕ) ಕಂದರಾರು ಬ್ರಹ್ಮದತ್ತನ್‌ ಅವರ ಸಮ್ಮುಖದಲ್ಲಿ ಪೂಜೆ ನಡೆಯಿತು.

ಬಳಿಕ ಪಥಿನೆಟ್ಟಾಂ ಪಡಿ (18 ಮೆಟ್ಟಿಲು) ಕೆಳಭಾಗದಲ್ಲಿರುವ ಆಝಿ ಎಂಬ ಪವಿತ್ರ ಅಗ್ನಿಕುಂಡದಲ್ಲಿ ಅಗ್ನಿ ಬೆಳಗಿಸಲಾಯಿತು. ಚಿಂಗಂ ಮಾಸದ ಮೊದಲ ದಿನದ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದರು.

ಉಷಾ ಪೂಜೆಯ ಬಳಿಕ ಸೋಮವಾರವೇ ಶಬರಿಮಲೆಯ ಉಳ್ಕಳಕಂ ಆಯ್ಕೆಗಾಗಿ ಲಾಟರಿ ಪ್ರಕ್ರಿಯೆ ನಡೆಯಲಿದೆ. ಆಯ್ಕೆಯಾಗುವ ವ್ಯಕ್ತಿ ಪ್ರಧಾನ ಅರ್ಚಕರಿಗೆ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳಲ್ಲಿ ನೆರವಾಗಲಿದ್ದಾರೆ.

ಚಿಂಗಂ ಮಾಸದ ಪೂಜೆಗಳು ಪೂರ್ಣಗೊಂಡ ಬಳಿಕ ಆಗಸ್ಟ್‌ 21ರಂದು ರಾತ್ರಿ 10 ಗಂಟೆಗೆ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ಬಳಿಕ ಓಣಂ ಹಬ್ಬದ ವಿಶೇಷ ಪೂಜೆಗಳಿಗಾಗಿ ಆಗಸ್ಟ್‌ 24ರಂದು ದೇವಸ್ಥಾನ ಮತ್ತೆ ತೆರೆಯಲಿದೆ. ಓಣಂ ಆಚರಣೆಯ ಪ್ರಮುಖ ದಿನವಾದ ತಿರುವೋಣಂ ಈ ವರ್ಷ ಆಗಸ್ಟ್‌ 26ರಂದು ನಡೆಯಲಿದೆ.

ಚಿಂಗಂ ಮಾಸದಲ್ಲಿ ಶಬರಿಮಲೆಗೆ ಭೇಟಿ ನೀಡಲು ಬಯಸುವ ಭಕ್ತರು ವರ್ಚುವಲ್‌ ಕ್ಯೂ ವೆಬ್‌ಸೈಟ್‌ ಮೂಲಕ ದರ್ಶನದ ಸಮಯವನ್ನು ಮುಂಗಡವಾಗಿ ಕಾಯ್ದಿರಿಸುವಂತೆ ಸೂಚಿಸಲಾಗಿದೆ.

ಚಿಂಗಂ ಮಾಸದ ಸಂದರ್ಭದಲ್ಲಿ ಶಬರಿಮಲೆಗೆ ಆಗಮಿಸುವ ಅಯ್ಯಪ್ಪ ಭಕ್ತರ ಅನುಕೂಲಕ್ಕಾಗಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಆಗಸ್ಟ್‌ 16ರಿಂದ 28ರವರೆಗೆ ವಿಶೇಷ ಹಾಗೂ ವ್ಯಾಪಕ ಸಾರಿಗೆ ವ್ಯವಸ್ಥೆಗಳನ್ನು ಕಲ್ಪಿಸಿದೆ.

RELATED ARTICLES
spot_img

Latest News