ಬೆಂಗಳೂರು,ಮಾ.11- ನಾವು ಯಾವುದೇ ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡದೆ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವನ್ನು ಕಟ್ಟಿದರೆ ಈ ಕಾಂಗ್ರೆಸ್ ಸರ್ಕಾರ ಲೋಕಸಭೆ ಚುನಾವಣೆಯ ನಂತರ ಉಳಿಯುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಸಿದ್ದಾರೆ.
ಈ ಕುರಿತು ತಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರದ ಭ್ರಷ್ಟ್ರಾಚಾರ ಹಾಗು ದುರಾಡಳಿತವನ್ನು ಪ್ರಶ್ನಿಸಿ ರಸ್ತೆಗೆ ಇಳಿಯಬೇಕು. ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ಸರಾಸರಿಯಾಗಿ ವಿರೋಧಿಸಬೇಕು ಎಂದು ಕರೆ ನೀಡಿದ್ದಾರೆ. ಅಭಿವೃದ್ಧಿಯೇ ಇಲ್ಲದ, ರಾಜ್ಯದ ಬೊಕ್ಕಸವನ್ನು ಲೂಟಿ ಮಾಡುತ್ತಿರುವ ಈ ಸರ್ಕಾರವನ್ನು ಕಿತ್ತೆಸೆಯುವ ಸಂಕಲ್ಪ ಮಾಡಬೇಕು. ಹಿಂದುಗಳಿಗೆ ಅನ್ಯಾಯವಾದಾಗ ನಾವಿದ್ದೇವೆಂದು ಧ್ವನಿ ಎತ್ತಬೇಕು ಎಂದು ಹೇಳಿದ್ದಾರೆ.
ನಾವು ನಿಮ್ಮೊಂದಿಗೆ ಎಂಬ ಘೋಷ ವಾಕ್ಯ ರಾಜಕಾರಣದಲ್ಲಿ ನಡೆಯುವುದಿಲ್ಲ, ಸವಾಲಿಗೆ ಸವಾಲು ಎಂದಾಗ ನಮ್ಮ ಕಾರ್ಯಕರ್ತರು ಮುನ್ನುಗ್ಗುತ್ತಾರೆ. ಕಾರ್ಯಕರ್ತರು ನಮ್ಮ ಆಸ್ತಿ, ಅವರ ಹಿತಾಸಕ್ತಿ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದಿದ್ದಾರೆ. ಈ ಲೋಕಸಭೆ ಚುನಾವಣೆ ಭಾರತದ ಮುಂದಿನ ಭವಿಷ್ಯಕ್ಕೆ ಬಹಳ ಮಹತ್ವದಾದದ್ದು. ಅಭ್ಯರ್ಥಿ ಯಾರೇ ಆದರೂ ಮೋದಿಯವರನ್ನು ಗೆಲ್ಲಿಸುವುದು ನಮ್ಮೆಲ್ಲರ ಹೊಣೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಮೋದಿಯವರ ಕಾರಣಕ್ಕೆ 28 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತದೆ. ನಮಗಾಗಿ ಮೋದಿ- ಮೋದಿಯವರಿಗಾಗಿ ನಾವು ಎಂಬಂತೆ ಕೆಲಸ ಮಾಡಬೇಕೆಂದು ಕರೆ ಕೊಟ್ಟಿದ್ದಾರೆ.