Friday, May 3, 2024
Homeರಾಷ್ಟ್ರೀಯವೀರಪ್ಪನ್ ಪುತ್ರಿ ಲೋಕಸಭೆ ಸಮರಕ್ಕೆ..?

ವೀರಪ್ಪನ್ ಪುತ್ರಿ ಲೋಕಸಭೆ ಸಮರಕ್ಕೆ..?

ನವದೆಹಲಿ,ಮಾ.11- ಹಿಂದೊಮ್ಮೆ ಕರ್ನಾಟಕ ಮತ್ತು ತಮಿಳುನಾಡಿಗೆ ಸಿಂಹ ಸ್ವಪ್ನವಾಗಿ ಕಾಡಿದ್ದ ದಂತಚೋರ ಕಾಡುಗಳ್ಳ ವೀರಪ್ಪನ್ ಪುತ್ರಿ ಲೋಕಸಭೆ ಸಮರಕ್ಕೆ ಧುಮುಕುವ ಸಾಧ್ಯತೆ ಇದೆ. ಕಳೆದ ಹಲವು ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಕೊಂಡಿರುವ ವೀರಪ್ಪನ್ ಪುತ್ರಿ ವಿದ್ಯಾರಾಣಿ ಅವರನ್ನು ತಮಿಳುನಾಡು ಇಲ್ಲವೇ ಪಾಂಡಿಚೇರಿಯ ಯಾವುದಾದರೊಂದು ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಬಿಜೆಪಿ ಒಲವು ತೋರಿದೆ.

ಬಿಜೆಪಿ ಯುವ ಮೋರ್ಚಾದಲ್ಲಿ ಗುರುತಿಸಿಕೊಂಡು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ವಿದ್ಯಾರಾಣಿ ರಾಜಕೀಯಕ್ಕೆ ಬರಬೇಕೆಂಬ ಒಲವನ್ನು ಈ ಹಿಂದೆಯೇ ವ್ಯಕ್ತಪಡಿಸಿದ್ದರು. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಜೊತೆ ರಾಜ್ಯಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಅವರಿಗೆ ಸಾರ್ವಜನಿಕ ವಲಯದಲ್ಲೂ ಒಳ್ಳೆಯ ಅಭಿಪ್ರಾಯವಿದೆ. ಇದನ್ನು ಮತಗಳನ್ನಾಗಿ ಪರಿವರ್ತಿಸಲು ಮುಂದಾಗಿರುವ ಬಿಜೆಪಿ ಅಭ್ಯರ್ಥಿ ಮಾಡುವ ಚಿಂತನೆಯಲ್ಲಿದೆ ಎಂದು ತಿಳಿದುಬಂದಿದೆ.

2020ರ ಫೆಬ್ರವರಿ 23ರಲ್ಲಿ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಾವ್ ಮತ್ತು ಮಾಜಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರು ವಿದ್ಯಾರಾಣಿ ಅವರನ್ನು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿದ್ದರು. ವೀರಪ್ಪನ್‍ನನ್ನು ಹೊಡೆದುರುಳಿಸಿದ ನಂತರ ಸಮಾಜದಲ್ಲಿ ಎದುರಾದ ಅವಮಾನವನ್ನು ಮೆಟ್ಟಿನಿಂತು ವಕೀಲ ವೃತ್ತಿಯಲ್ಲಿ ಪದವೀಧರರಾಗಿರುವ ವಿದ್ಯಾರಾಣಿಯನ್ನು ಬಿಜೆಪಿ, ತಮಿಳುನಾಡು ಘಟಕದ ಹಿಂದುಳಿದ ವರ್ಗದ ಉಪಾಧ್ಯಕ್ಷರನ್ನಾಗಿ ನೇಮಿಸಿತ್ತು.

2021ರಲ್ಲಿ ತಮಿಳುನಾಡು ಅಸೆಂಬ್ಲಿ ಚುನಾವಣೆಯಲ್ಲಿ ಸ್ರ್ಪಸಲು ವಿದ್ಯಾರಾಣಿಗೆ ಅವಕಾಶವಿದ್ದರೂ, ಅದನ್ನು ಒಪ್ಪಿಕೊಳ್ಳದ ಅವರು, ಈಗ ಸಾರ್ವತ್ರಿಕ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಯಾವ ಕ್ಷೇತ್ರದಿಂದ ಇವರಿಗೆ ಟಿಕೆಟ್ ಸಿಗುತ್ತದೆ ಅಥವಾ ಟಿಕೆಟ್ ನೀಡುವ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಂಡಿದೆಯೇ ಎಂಬ ಬಗ್ಗೆ ಇನ್ನು ಸ್ಪಷ್ಟತೆಯಿಲ್ಲ. ವಕೀಲ ವೃತ್ತಿ ಜೊತೆಗೆ ಬಿಜೆಪಿ ನಾಯಕಿಯಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದ ವಿದ್ಯಾರಾಣಿ ತಮ್ಮ ಸಾಮಾಜಿಕ ಕಳಕಳಿಯ ಕೆಲಸದ ಮೂಲಕ, ತನ್ನ ಕುಟುಂಬದ ಮೇಲಿರುವ ಕಪ್ಪುಚುಕ್ಕೆಯನ್ನು ಅಳಿಸುವ ಪ್ರಯತ್ನ ಮಾಡಿದ್ದರು.

ಸಮಾಜಮುಖಿ ಕೆಲಸ ಮಾಡಲು ನನ್ನ ತಂದೆಯೇ ನನಗೆ ಹೀರೋ ಎಂದು ಹಿಂದೊಮ್ಮೆ ಹೇಳಿದ್ದ ವಿದ್ಯಾರಾಣಿ, ತನ್ನ ಜೀವನದಲ್ಲಿ ತಂದೆಯನ್ನು ನೋಡಿದ್ದು, ಮಾತನಾಡಿದ್ದು ಕೇವಲ ಮೂವತ್ತು ನಿಮಿಷ ಎಂದು ಹೇಳಿದ್ದಾರೆ. ನನ್ನ ಆ ಭೇಟಿ ಅದೇ ಮೊದಲ ಮತ್ತು ಕೊನೆಯ ಭೇಟಿಯಾಗಿತ್ತು ಎಂದು ಹೇಳಿರುವ ಅವರು, ತಮಗೆ ಬಿಜೆಪಿ ಟಿಕೆಟ್ ಸಿಗುವ ಆಶಾಭಾವನೆಯಲ್ಲಿದ್ದಾರೆ.

RELATED ARTICLES

Latest News