ಭಿಂಡ್, ಆ.18- ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಪಿಕಪ್ ವಾಹನಕ್ಕೆ ಡಂಪರ್ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 8 ಕಾರ್ಮಿಕರು ಮೃತಪಟ್ಟಿದ್ದು, 32 ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ.
ಭಿಂಡ್-ಗ್ವಾಲಿಯರ್ ರಾಷ್ಟ್ರೀಯ ಹೆದ್ದಾರಿಯ ಛಿಮ್ಕಾ ಗ್ರಾಮದ ಬಳಿ ಮುಂಜಾನೆ ಸುಮಾರು 1 ಗಂಟೆಗೆ ಅಪಘಾತ ಸಂಭವಿಸಿದೆ. ಮೃತರು ಹಾಗೂ ಗಾಯಗೊಂಡವರು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯವರು. ಗ್ವಾಲಿಯರ್‌ನಲ್ಲಿ ಭತ್ತ ನಾಟಿ ಕೆಲಸ ಮುಗಿಸಿಕೊಂಡು ತಮ್ಮ ಗ್ರಾಮಕ್ಕೆ ಹಿಂದಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆದ್ದಾರಿಯಲ್ಲಿ ಕುಳಿತಿದ್ದ ಜಾನುವಾರುಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಏಕಾಏಕಿ ವಾಹನದ ನಿಯಂತ್ರಣ ಕಳೆದುಕೊಂಡಿದ್ದಾನೆ. ಪರಿಣಾಮ ಪಿಕಪ್ ವಾಹನ ತಪ್ಪು ದಿಕ್ಕಿಗೆ ತೆರಳಿ ಎದುರಿನಿಂದ ಬರುತ್ತಿದ್ದ ಡಂಪರ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಗೋಹದ್ ಚೌರಾಹಾ ಠಾಣೆಯ ರಾಮನರೇಶ್ ಯಾದವ್ ತಿಳಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಪಿಕಪ್ ವಾಹನ ಸಂಪೂರ್ಣ ಜಖಂಗೊಂಡಿದ್ದು, ಹಲವು ಕಾರ್ಮಿಕರು ಅದರೊಳಗೆ ಸಿಲುಕಿಕೊಂಡಿದ್ದರು. ಐವರು ಸ್ಥಳದಲ್ಲೇ ಮೃತಪಟ್ಟರೆ, ಮೂವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. 32 ಮಂದಿ ಗಾಯಗೊಂಡಿದ್ದಾರೆ.
ಮಾಹಿತಿ ದೊರೆತ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಸ್ಥಳೀಯರ ಸಹಾಯದಿಂದ ವಾಹನದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಹೊರತೆಗೆದಿದ್ದಾರೆ. ಗಾಯಾಳುಗಳನ್ನು ಗೋಹದ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗ್ವಾಲಿಯರ್‌ಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
