ಬೆಂಗಳೂರು,ಆ.18- ಬಿಡದಿ ಉಪನಗರ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಿರುವ ಜೆಡಿಎಸ್ ಇಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿತು.
ಸಂಸದ ಮಲ್ಲೇಶ್ಬಾಬು, ಜೆಡಿಎಸ್ ಕೋರ್ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ, ಮಾಜಿ ಸಚಿವರಾದ ಲೀಲಾದೇವಿ ಆರ್.ಪ್ರಸಾದ್, ಬಂಡೆಪ್ಪ ಕಾಶಂಪೂರ್, ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ, ಜವರಾಯಿಗೌಡ, ಎಸ್.ಎಲ್.ಬೋಜೇಗೌಡ, ಮಾಜಿ ಶಾಸಕರಾದ ರಮೇಶ್ಗೌಡ, ಚೌಡರೆಡ್ಡಿ, ತಿಪ್ಪೇಸ್ವಾಮಿ, ಡಾ.ಅನ್ನದಾನಿ, ಜೆಡಿಎಸ್ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ಕುಮಾರಸ್ವಾಮಿ ಮೊದಲಾದವರ ನೇತೃತ್ವದಲ್ಲಿ ಬಿಡದಿ ಟೌನ್ಶಿಪ್ ವಿರೋಧಿಸುವ ಬಹಿರಂಗ ಸಭೆ ನಡೆಯಿತು.
ಹಸಿರು ಶಾಲು ಪ್ರದರ್ಶಿಸಿ, ರೈತ ಗೀತೆ ಹಾಡುವ ಮೂಲಕ ಬಹಿರಂಗ ಭೆಯನ್ನು ಆರಂಭಿಸಲಾಯಿತು. ರಾಜ್ಯ ಸರ್ಕಾರದ ವಿರುದ್ಧ ಫಲಕಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿ ಬಿಡದಿ ಉಪನಗರ ಯೋಜನೆಯನ್ನು ರದ್ದುಪಡಿಸುವಂತೆ ಆಗ್ರಹಿಸಲಾಯಿತು. ಬಿಡದಿ ಭಾಗದ ಅಪಾರ ಸಂಖ್ಯೆಯ ರೈತರು ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿದ್ದರು.ರೈತರ ವಿರೋಧದ ನಡುವೆಯೂ ಬಿಡದಿ ಉಪನಗರ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ರೈತರ ವಿರೋಧಿ ಧೋರಣೆ ಅನುಸರಿಸುತ್ತಿದೆ. ಕೂಡಲೇ ಬಿಡದಿ ಉಪನಗರ ಯೋಜನೆಯನ್ನು ಕೈಬಿಟ್ಟು ರೈತರ ಹಿತ ಕಾಪಾಡಬೇಕೆಂದು ಬಹಿರಂಗ ಸಭೆಯಲ್ಲಿ ರಾಜ್ಯ ಸರ್ಕಾರವನ್ನು ಆಗ್ರಹಿಸಲಾಯಿತು.
ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಬಿಡದಿ ಉಪನಗರ ಯೋಜನೆ ಅನುಷ್ಠಾನಗೊಳಿಸುವುದರಿಂದ ಬಡವರಿಗೆ ಏನೂ ಲಾಭವಿಲ್ಲ. ಈ ಯೋಜನೆಯ ಫಲಾನುಭವಿಗಳು, ರೈತರು, ಬಡವರು, ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಯಾರೂ ಅಲ್ಲ. ಶ್ರೀಮಂತರು ಮತ್ತು ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲು ಈ ಯೋಜನೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಫಲವತ್ತಾದ ಕೃಷಿ ಭೂಮಿಯನ್ನು ಸ್ವಾದೀನಪಡಿಸಿಕೊಂಡು ರೈತರಿಗೆ ಬೀದಿಗೆ ತಳ್ಳುವ ಹುನ್ನಾರ ನಡೆಸಲಾಗುತ್ತಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆ ಮಾಡಲು ಮುಂದಾಗಿದ್ದರು. ಆಗ ರೈತರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಉಪನಗರ ಯೋಜನೆಯನ್ನು ರದ್ದುಪಡಿಸಿದ್ದರು. ಆದರೂ ಸರ್ಕಾರ ಉಪನಗರ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದೆ. ಈ ಯೋಜನೆ ಕೈ ಬಿಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಅವರು ಹೇಳಿದರು.
ಮಾಜಿ ಶಾಸಕ ಎ.ಮಂಜು ಮಾತನಾಡಿ, ಆ.9 ರಂದು ಬೈರಮಂಗಲದಿಂದ ಪಾದಯಾತ್ರೆಯನ್ನು ಪ್ರಾರಂಭಿಸಲಾಗಿತ್ತು. ಆದರೆ ಮಾರ್ಗಮಧ್ಯೆ ತಡೆಯಲಾಯಿತು. ಆ.11 ರಂದು ನಡೆಯಬೇಕಾಗಿದ್ದ ಈ ಪ್ರತಿಭಟನಾ ಸಮಾವೇಶ ಇಂದು ನಡೆಸಲಾಗುತ್ತಿದೆ. ಬಿಡದಿ ಟೌನ್ಶಿಪ್ ವ್ಯಾಪ್ತಿಯ ರೈತರಿಗೆ ಬೆದರಿಕೆ ಹಾಕಲಾಗುತ್ತಿದೆ. ರೈತರ ಪರ ಎಂದು ಹೇಳಿ ಅಂತಿಮ ಅಧಿಸೂಚನೆಯನ್ನು ಹೊರಡಿಸುತ್ತಾರೆ. ಸ್ಥಳೀಯ ರೈತರ್ಯಾರೂ ಪರಿಹಾರವನ್ನು ಪಡೆಯುತ್ತಿಲ್ಲ. ಹಠಕ್ಕೆ ಬಿದ್ದು ಸರ್ಕಾರ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಜಿಲ್ಲಾಧಿಕಾರಿಗಳು ರೈತರ ಜೊತೆ ಸಮಾಲೋಚನೆಯನ್ನು ನಡೆಸುತ್ತಿಲ್ಲ ಎಂದು ಆರೋಪಿಸಿದರು.
ಹೊಟ್ಟೆಕಿಚ್ಚಿಲ್ಲ :
ನಿಖಿಲ್ ಕುಮಾರಸ್ವಾಮಿ ಮಾತನಾಡಿ, ನಾವು ಅಭಿವೃದ್ಧಿ ವಿರೋಧಿಗಳಲ್ಲ. ಉಪನಗರ ಯೋಜನೆ ಮಾಡಲೇಬೇಕೆಂದಿದ್ದರೆ ಕೆಐಎಡಿಬಿಯಲ್ಲಿ ಲಭ್ಯವಿರುವ ಭೂಮಿಯನ್ನು ಬಳಸಿಕೊಳ್ಳಿ. ಡಿ.ಕೆ.ಶಿವಕುಮಾರ್ರವರು ಮುಖ್ಯಮಂತ್ರಿಯಾಗಿರುವುದಕ್ಕೆ ಹೊಟ್ಟೆಕಿಚ್ಚಿಲ್ಲ ಎಂದು ಸ್ಪಷ್ಟಪಡಿಸಿದರು.
ನೀವು ಮುಖ್ಯಮಂತ್ರಿಯಾಗುವುದಕ್ಕೂ ಮುಂಚಿನಿಂದಲೂ ಅಂದರೆ 526 ದಿನದಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೂ ಅವರ ಅಹವಾಲನ್ನು ಕೇಳಿಲ್ಲ. ಒಕ್ಕಲುತನ ಮಾಡುವ ರೈತರ ರಕ್ಷಣೆಗಾಗಿ ನಮ ಕುಟುಂಬ ಒತ್ತು ನೀಡಿ ಪ್ರತಿಭಟನೆಗೆ ಬೆಂಬಲ ನೀಡಿದೆ ಎಂದರು. ಒತ್ತಾಯಪೂರ್ವಕವಾಗಿ ರೈತರಿಂದ ಭೂಸ್ವಾಧೀನ ಮಾಡಿಕೊಳ್ಳುವುದನ್ನು ಕೈಬಿಡಬೇಕು. ಕಾಂಗ್ರೆಸ್ನ ಸತ್ಯ ಶೋಧನಾ ಸಮಿತಿ ವರದಿಯಲ್ಲಿ ಟೌನ್ಶಿಪ್ ವಿರೋಧ ಮಾಡಿತ್ತು. ಆ ವರದಿಗೆ ಬೆಲೆಯೇ ಇಲ್ಲವೇ? ಮತ್ತೇಕೆ ಪರಿಶೀಲನಾ ಸಮಿತಿ ಬೇಕು? ಒತ್ತಾಯಪೂರ್ವಕವಾಗಿ ಭೂ ಸ್ವಾಧೀನಕ್ಕೆ ಅಧಿಕಾರ ಕೊಟ್ಟಿದ್ದಾರೆಯೇ? ಎಂದು ರಾಜ್ಯಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
