ಇಸ್ಲಾಮಾಬಾದ್, ಆ.21- ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಇಸ್ಲಾಮಾಬಾದ್‌ನ ಶಿಫಾ ಅಂತರರಾಷ್ಟ್ರೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಅವರು ಜೈಲಿನಲ್ಲಿರಲು ಸುರಕ್ಷಿತ ಎಂದು ಪರಿಗಣಿಸಿದ ನಂತರ ಅವರನ್ನು ಮತ್ತೆ ಬಿಗಿ ಭದ್ರತೆಯಲ್ಲಿ ಅಡಿಯಾಲ ಜೈಲಿಗೆ ವರ್ಗಾಯಿಸಲಾಗಿದೆ.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ, 73 ವರ್ಷದ ಪಿಟಿಐ ಸಂಸ್ಥಾಪಕರನ್ನು ವೈದ್ಯಕೀಯ ಮೌಲ್ಯಮಾಪನಕ್ಕಾಗಿ ಮಧ್ಯರಾತ್ರಿಯ ಸುಮಾರಿಗೆ ಜೈಲಿನಿಂದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆರು ತಜ್ಞ ವೈದ್ಯರ ತಂಡವು ಅವರನ್ನು ಪರಿಶೀಲಿಸಿತ್ತು.
ಜನವರಿಯಿಂದ ಖಾನ್ ಅವರ ಕಣ್ಣಿನ ಆರೋಗ್ಯ (ಬಲ ಕೇಂದ್ರ ರೆಟಿನಾದ ರಕ್ತನಾಳದ ಅಡಚಣೆ) ಮತ್ತು ಒಟ್ಟಾರೆ ಆರೋಗ್ಯದ ಬಗ್ಗೆ ಅವರ ಕುಟುಂಬ ಹಾಗೂ ಪಕ್ಷದ ನಾಯಕರು ನಿರಂತರವಾಗಿ ಕಳವಳ ವ್ಯಕ್ತಪಡಿಸುತ್ತಿದ್ದು, ವಿಶೇಷ ವೈದ್ಯಕೀಯ ಆರೈಕೆಗೆ ಒತ್ತಾಯಿಸುತ್ತಿದ್ದಾರೆ.
ಇಮ್ರಾನ್ ಖಾನ್ ಅವರ ಆರೋಗ್ಯದ ಬಗ್ಗೆ ಅವರ ಕುಟುಂಬ, ವಕೀಲರು ಮತ್ತು ನಾಯಕರು ಹಲವು ತಿಂಗಳಿಂದ ಕಳವಳ ವ್ಯಕ್ತಪಡಿಸುತ್ತಿದ್ದರು. ವಿಶೇಷವಾಗಿ ಅವರ ಬಲ ಕಣ್ಣಿನ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆ ಗಂಭೀರವಾಗುತ್ತಿದೆ ಎಂದು ಅವರ ಕಾನೂನು ತಂಡ ಆರೋಪಿಸಿತ್ತು.
ಈ ಹಿನ್ನೆಲೆಯಲ್ಲಿ ಆಗಸ್ಟ್ 18ರಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ಪೀಠವು ಖಾನ್ ಅವರನ್ನು 48 ಗಂಟೆಗಳೊಳಗೆ ಶಿಫಾ ಇಂಟರ್‌ನ್ಯಾಷನಲ್ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಆದೇಶಿಸಿತ್ತು. ಆಸ್ಪತ್ರೆಯಲ್ಲಿ ಬಹುಶಿಸ್ತೀಯ ವೈದ್ಯಕೀಯ ತಂಡದಿಂದ ಪರೀಕ್ಷೆ ಮತ್ತು ಅಗತ್ಯ ಚಿಕಿತ್ಸೆ ನೀಡಬೇಕು, ಜೊತೆಗೆ ಖಾನ್ ಅವರ ವೈಯಕ್ತಿಕ ವೈದ್ಯರೂ ವೈದ್ಯಕೀಯ ಮೌಲ್ಯಮಾಪನದಲ್ಲಿ ಭಾಗವಹಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತ್ತು.
ನ್ಯಾಯಾಲಯದ ಆದೇಶದಲ್ಲಿ ಖಾನ್ ಅವರ ಕುಟುಂಬದವರ ಭೇಟಿಗೂ ಹೆಚ್ಚಿನ ಅವಕಾಶ ಕಲ್ಪಿಸುವಂತೆ ಸೂಚಿಸಲಾಗಿತ್ತು. ಆರೋಗ್ಯದ ವಿಚಾರದಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಇರಬಾರದು ಎಂಬ ಸಂದೇಶವನ್ನೂ ನ್ಯಾಯಾಂಗ ನೀಡಿದೆ.
ಕೆಲವೇ ಗಂಟೆಗಳಲ್ಲಿ ಮತ್ತೆ ಜೈಲಿಗೆ:
ಸುಪ್ರೀಂ ಕೋರ್ಟ್ ಆದೇಶದಂತೆ ಖಾನ್ ಅವರನ್ನು ಭಾರೀ ಭದ್ರತೆಯ ನಡುವೆ ಶಿಫಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ತಕ್ಷಣ ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ಮುಂದುವರಿಸುವ ಅಗತ್ಯವಿಲ್ಲ ಎಂದು ವೈದ್ಯರು ನಿರ್ಧರಿಸಿದರು. ಹೀಗಾಗಿ ಅವರನ್ನು ಮತ್ತೆ ಅಡಿಯಾಲ ಜೈಲಿಗೆ ಕರೆದೊಯ್ಯಲಾಯಿತು.
ಈ ಬೆಳವಣಿಗೆ ಖಾನ್ ಅವರ ಆರೋಗ್ಯದ ಕುರಿತು ನಡೆಯುತ್ತಿರುವ ವಿವಾದಕ್ಕೆ ತಾತ್ಕಾಲಿಕ ತಿರುವು ನೀಡಿದರೂ, ಅವರ ದೀರ್ಘಕಾಲೀನ ವೈದ್ಯಕೀಯ ಆರೈಕೆ ಮತ್ತು ಜೈಲಿನಲ್ಲಿನ ಚಿಕಿತ್ಸಾ ಸೌಲಭ್ಯಗಳ ಕುರಿತು ಪ್ರಶ್ನೆಗಳು ಮುಂದುವರಿಯುವ ಸಾಧ್ಯತೆಯಿದೆ.
2023ರ ಆಗಸ್ಟ್‌ನಿಂದ ಬಂಧನದಲ್ಲಿರುವ ಇಮ್ರಾನ್ ಖಾನ್ ತಮ ಮೇಲಿನ ಪ್ರಕರಣಗಳು ರಾಜಕೀಯ ಪ್ರೇರಿತವಾಗಿವೆ ಎಂದು ವಾದಿಸುತ್ತಿದ್ದಾರೆ. ಪಾಕಿಸ್ತಾನ ಸರ್ಕಾರ ಈ ಆರೋಪವನ್ನು ತಳ್ಳಿಹಾಕಿದೆ. ಪಿಟಿಐ ಪಕ್ಷವು ಅವರ ಬಿಡುಗಡೆ ಮತ್ತು ತ್ವರಿತ ವಿಚಾರಣೆಗಾಗಿ ನಿರಂತರವಾಗಿ ಒತ್ತಡ ಮುಂದುವರಿಸಿದೆ.
