Homeರಾಜ್ಯ50 ದಿನಗಳ ಗಡಿ ದಾಟುತ್ತಿಲ್ಲ ವಿಧಾನ ಮಂಡಲ ಅಧಿವೇಶನದ ವಾರ್ಷಿಕ ಕಲಾಪಗಳು

50 ದಿನಗಳ ಗಡಿ ದಾಟುತ್ತಿಲ್ಲ ವಿಧಾನ ಮಂಡಲ ಅಧಿವೇಶನದ ವಾರ್ಷಿಕ ಕಲಾಪಗಳು

ಬೆಂಗಳೂರು, ನ.22-ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ನಡೆಸಲು ಒಂದೆಡೆ ಸಿದ್ಧತೆಗಳು ಭರದಿಂದ ಸಾಗಿದ್ದರೆ, ಮತ್ತೊಂದೆಡೆ ಅಧಿವೇಶನದ ಕಲಾಪಗಳು ನಿಗದಿತ ಪ್ರಮಾಣಕ್ಕಿಂತ ಕಡಿಮೆಯಾಗುತ್ತಿವೆ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ.

ವಾರ್ಷಿಕ 60 ದಿನಗಳ ಕಾಲ ಅಧಿವೇಶನ ನಡೆಸಬೇಕು ಎಂಬ ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದು ಅಧಿವೇಶನಳು ನಡೆಯಬೇಕಾದ ದಿನಾಂಕವನ್ನು ನಿಗದಿ ಮಾಡಿದೆ. ಆದರೆ, ಕಾಯ್ದೆಯ ಪ್ರಕಾರ ನಿಗದಿಪಡಿಸಿದ ದಿನಾಂಕಗಳಲ್ಲಿ ಹಾಗೂ ಪ್ರಮಾಣದಲ್ಲಿ ಅಧಿವೇಶನ ನಡೆಯುತ್ತಿಲ್ಲ ಎಂಬ ಬೇಸರ ಸಾಮಾನ್ಯವಾಗಿ ಕೇಳಿಬರುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ವಾರ್ಷಿಕ 50ದಿನಗಳ ಕಾಲ ಅಧಿವೇಶನದ ಕಲಾಪಗಳು ನಡೆಯುತ್ತಿಲ್ಲ.

ವಿಧಾನಸಭೆ ಸಚಿವಾಲಯದ ಮಾಹಿತಿ ಪ್ರಕಾರ, ಪ್ರಸಕ್ತ 2026ರಲ್ಲಿ 9 ದಿನಗಳ ಕಾಲ ಜಂಟಿ ಅಧಿವೇಶನ, 13 ದಿನಗಳ ಕಾಲ ಬಜೆಟ್‌ ಅಧಿವೇಶನ, 8 ದಿನಗಳ ಕಾಲ ಮಳೆಗಾಲದ ಅಧಿವೇಶನ ಹಾಗೂ 4ದಿನಗಳ ವಿಶೇಷ ಅಧಿವೇಶನ ನಡೆದಿದ್ದು, ಇದುವರೆಗೆ 34 ದಿನಗಳ ಅಧಿವೇಶನ ನಡೆಸಲಾಗಿದೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್‌ 2ರಿಂದ 9 ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಅಂದರೆ ಈ ವರ್ಷ ಒಟ್ಟು 43 ದಿನಗಳ ಅಧಿವೇಶನ ನಡೆದಂತಾಗಲಿದೆ.

ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ವಿಸ್ತೃತ ಚರ್ಚೆಗಳು ನಡೆದು ಪರಿಹಾರೋಪಾಯಗಳು ದೊರೆಯಬೇಕು. ಅದಕ್ಕಾಗಿ ಹೆಚ್ಚು ದಿನ ಅಧಿವೇಶನಗಳು ನಡೆಯಬೇಕು ಎಂಬ ಅಭಿಪ್ರಾಯ ಪದೇ ಪದೇ ವ್ಯಕ್ತವಾಗುತ್ತಲೇ ಇದೆ. ಜೊತೆಗೆ ಅಧಿವೇಶನದಲ್ಲೂ 60 ದಿನಗಳಿಗೂ ಹೆಚ್ಚು ಕಾಲ ಸದನದ ಕಲಾಪಗಳನ್ನು ನಡೆಸುವ ಬಗ್ಗೆ ಚರ್ಚೆಯಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಾತ್ರ ಇದು ಕಾರ್ಯಗತವಾಗುತ್ತಿಲ್ಲ.

ಕಳೆದ 2000ರಲ್ಲಿ 67 ದಿನಗಳು, 2001ರಲ್ಲಿ54 ದಿನಗಳು, 2002ರಲ್ಲಿ 63 ದಿನಗಳ ಕಾಲ ವಿಧಾನಸಭೆ ಅಧಿವೇಶನಗಳು ನಡೆದಿವೆ. ಆದರೆ, ಅನಂತರ ಇಂದಿನವರೆಗೂ 60 ದಿನಗಳ ಕಾಲ ವಿಧಾನ ಮಂಡಲದ ಅಧಿವೇಶನ ನಡೆದ ನಿದರ್ಶನವಿಲ್ಲ.ವಿಧಾನಸಭೆ ಕಲಾಪಗಳ ವಿವರ: 2003-44ದಿನಗಳು, 2004-23, 2005- 52, 2006-56, 2007-59, 2008-17, 2009-42, 2010 ಮತ್ತು 2011ರಲ್ಲಿ 31ದಿನಗಳು, 2012ರಲ್ಲಿ 57 ದಿನಗಳ ಕಾಲ ಅಧಿವೇಶನ ನಡೆಸಲಾಗಿದೆ.

2013- 47ದಿನಗಳು, 2014-53, 2015- 58, 2016-35, 2017- 40, 2018- 11, 2018-22, 2019- 18, 2020-31, 2021- 40, 2022-45 , 2023-39, 2024-29 ಮತ್ತು 2025ರಲ್ಲಿ 34 ದಿನಗಳ ಕಾಲ ಅಧಿವೇಶನ ನಡೆಸಲಾಗಿದೆ.

RELATED ARTICLES

Latest News