Homeರಾಷ್ಟ್ರೀಯರಾಜ್ಯಸಭಾ ಸಂಸದ ರಾಮರಾವ್‌ ವಡ್ಕುಟೆ ಹೃದಯಾಘಾತದಿಂದ ನಿಧನ

ರಾಜ್ಯಸಭಾ ಸಂಸದ ರಾಮರಾವ್‌ ವಡ್ಕುಟೆ ಹೃದಯಾಘಾತದಿಂದ ನಿಧನ

ನವದೆಹಲಿ,ನ.22-ಬಿಜೆಪಿ ರಾಜ್ಯಸಭಾ ಸಂಸದ ಹಾಗೂ ಮಹಾರಾಷ್ಟ್ರದ ಹಿರಿಯ ರಾಜಕಾರಣಿ ರಾಮರಾವ್‌ ಸಖಾರಾಮ್‌ ವಡ್ಕುಟೆ (72) ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸೌ)ಗೆ ದಾಖಲಿಸಲಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಸುದ್ದಿ ಸಂಸ್ಥೆ ಪಿಟಿಐ ಮೂಲಗಳ ಪ್ರಕಾರ, ಶನಿವಾರ ಸಂಜೆ ಸುಮಾರು 6 ಗಂಟೆಗೆ ರಾಮರಾವ್‌ ವಡ್ಕುಟೆ ಅವರಿಗೆ ಹೃದಯಾಘಾತ ಸಂಭವಿಸಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ರಾತ್ರಿ 11.45ರ ಸುಮಾರಿಗೆ ಅವರು ಮೃತಪಟ್ಟಿದ್ದಾರೆ.

ಏಪ್ರಿಲ್‌ನಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ವಡ್ಕುಟೆ
ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ಪರ್ಭಾನಿ ಮೂಲದವರಾದ ರಾಮರಾವ್‌ ವಡ್ಕುಟೆ ಅವರನ್ನು ಬಿಜೆಪಿ ಸುಮಾರು ಎಂಟು ತಿಂಗಳ ಹಿಂದೆ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು. ಈ ವರ್ಷದ ಏಪ್ರಿಲ್‌ನಲ್ಲಿ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.

ಇದಕ್ಕೂ ಮೊದಲು 2014ರ ಜೂನ್‌ನಿಂದ 2019ರ ಅಕ್ಟೋಬರ್‌ವರೆಗೆ ಮಹಾರಾಷ್ಟ್ರ ವಿಧಾನ ಪರಿಷತ್‌ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅನುಭವಿ ರಾಜಕಾರಣಿ, ಉತ್ತಮ ವಾಗಿ ಹಾಗೂ ಕಳಂಕವಿಲ್ಲದ ರಾಜಕೀಯ ವ್ಯಕ್ತಿತ್ವ ಹೊಂದಿದ್ದ ನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.

ಎನ್‌ಸಿಪಿಯಿಂದ ಬಿಜೆಪಿಗೆ ಸೇರ್ಪಡೆ
ರಾಮರಾವ್‌ ವಡ್ಕುಟೆ ಅವರು ಆರಂಭದಲ್ಲಿ ಶರದ್‌ ಪವಾರ್‌ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್‌‍ ಪಕ್ಷದೊಂದಿಗೆ (ಎನ್‌ಸಿಪಿ) ಗುರುತಿಸಿಕೊಂಡಿದ್ದರು. ಶೆಲಿ-ಮೆಂಧಿ ಮಹಾಸಂಘದ (ಮೇಕೆ ಮತ್ತು ಕುರಿ ಸಾಕಣೆದಾರರ ಒಕ್ಕೂಟ) ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

2019ರ ಅಕ್ಟೋಬರ್‌ನಲ್ಲಿ ಎನ್‌ಸಿಪಿಯನ್ನು ತೊರೆದು ಬಿಜೆಪಿ ಸೇರ್ಪಡೆಯಾದರು. 2021ರಲ್ಲಿ ಅವರನ್ನು ಬಿಜೆಪಿಯ ಹಿಂಗೋಲಿ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಬಳಿಕ ಪಕ್ಷದ ಚುನಾವಣಾ ಮುಖ್ಯಸ್ಥರಾಗಿ ಹಾಗೂ ಹಿಂಗೋಲಿ ಲೋಕಸಭಾ ಕ್ಷೇತ್ರದ ಉಸ್ತುವಾರಿಯಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು.ಮಹಾರಾಷ್ಟ್ರದ ಧಾಂಗರ್‌ ಸಮುದಾಯದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ವಡ್ಕುಟೆ, ಸಮುದಾಯದ ಅಭಿವೃದ್ಧಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಲವು ವರ್ಷಗಳಿಂದ ಕೆಲಸ ಮಾಡಿದ್ದರು.

ಗಣ್ಯರಿಂದ ಸಂತಾಪ
ರಾಮರಾವ್‌ ವಡ್ಕುಟೆ ಅವರ ನಿಧನಕ್ಕೆ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿ ಸಿ.ಪಿ. ರಾಧಾಕೃಷ್ಣನ್‌ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಜೀವನ ಮತ್ತು ಜನಸೇವೆಗೆ ಅವರು ನೀಡಿದ ಕೊಡುಗೆಗಳನ್ನು ಸರಿಸಿರುವ ಅವರು, ಮೃತರ ಕುಟುಂಬ ಹಾಗೂ ಬೆಂಬಲಿಗರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಕೂಡ ಸಂತಾಪ ಸೂಚಿಸಿದ್ದು, ವಡ್ಕುಟೆ ಅವರ ನಿಧನದಿಂದ ತೀವ್ರ ದುಃಖವಾಗಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಅವರು, ರಾಜ್ಯಸಭಾ ಸದಸ್ಯರ ನಿಧನದ ಸುದ್ದಿ ಹೃದಯವಿದ್ರಾವಕವಾಗಿದೆ ಎಂದು ತಿಳಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌‍ ಅವರು ವಡ್ಕುಟೆ ಅವರ ನಿಧನಕ್ಕೆ ಸಂತಾಪ ಸೂಚಿಸಿ, ಸರಳ ಹಾಗೂ ಸಮರ್ಪಿತ ರಾಜಕೀಯ ವ್ಯಕ್ತಿತ್ವವನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಹಿಂಗೋಲಿ ಜಿಲ್ಲೆಯಲ್ಲಿ ಬಿಜೆಪಿಯ ಸಂಘಟನೆಯನ್ನು ಬಲಪಡಿಸುವುದರ ಜೊತೆಗೆ ಧಾಂಗರ್‌ ಸಮುದಾಯದ ಏಳಿಗೆಗಾಗಿ ಅವರು ಶ್ರಮಿಸಿದ್ದರು ಎಂದು ಸರಿಸಿದ್ದಾರೆ.

ಮಾಜಿ ರಾಜ್ಯಸಭಾ ಸದಸ್ಯ ಡಾ. ವಿಕಾಸ್‌‍ ಮಹಾತೆ ಅವರು ವಡ್ಕುಟೆ ಅವರ ನಿಧನವನ್ನು ವೈಯಕ್ತಿಕ ನಷ್ಟ ಎಂದು ಬಣ್ಣಿಸಿದ್ದಾರೆ. ಆತೀಯ ಸ್ನೇಹಿತ ಹಾಗೂ ಆಪ್ತ ಸಹಚರನನ್ನು ಕಳೆದುಕೊಂಡಿದ್ದೇನೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.ಮಹಾರಾಷ್ಟ್ರ ವಿಧಾನ ಪರಿಷತ್‌ ಸದಸ್ಯೆ ಡಾ. ಪ್ರಜ್ಞಾ ರಾಜೀವ್‌ ಸತವ್‌ ಸೇರಿದಂತೆ ಹಲವು ರಾಜಕೀಯ ನಾಯಕರು ಕೂಡ ಸಂತಾಪ ಸೂಚಿಸಿದ್ದಾರೆ. ಹಿರಿಯ ನಾಯಕನ ಅಕಾಲಿಕ ನಿಧನದಿಂದ ಬಿಜೆಪಿ ಹಾಗೂ ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ವಿಶೇಷವಾಗಿ ಧಾಂಗರ್‌ ಸಮುದಾಯಕ್ಕೆ ಇದು ತುಂಬಲಾರದ ನಷ್ಟವಾಗಿದೆ.

RELATED ARTICLES

Latest News