ಬೆಂಗಳೂರು,ನ.22- ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಯಾವುದೇ ವ್ಯಕ್ತಿಯಾಗಲೀ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರದ ಮುಖ್ಯ ಪೊಲೀಸ್ ಆಯುಕ್ತರಾದ ಆರ್. ಹಿತೇಂದ್ರ ಅವರು ಎಚ್ಚರಿಕೆ ನೀಡಿದ್ದಾರೆ.
ಈ ಸಂಜೆಗೆ ಮಾತನಾಡಿದ ಅವರು ಇಂದು ಮುಂಜಾನೆ ನಗರದ 130 ರೌಡಿಗಳ ಮನೆ ಮೇಲೆ ಪೊಲೀಸರು ಏಕಕಾಲದಲ್ಲಿ ದಾಳಿ ಮಾಡಿ ಪರಿಶೀಲಿಸಿದ್ದಾರೆಂದು ತಿಳಿಸಿದರು. ಸಾರ್ವಜನಿಕರಿಗೆ ತೊಂದರೆ ಕೊಡುವ ರೌಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದಲ್ಲದೇ ಗಡಿಪಾರು ಸಹ ಮಾಡಲಾಗುವುದು ಎಂದು ಅವರು ಹೇಳಿದರು.
ರಸ್ತೆಗಳಲ್ಲಿ ಮಚ್ಚು,ಲಾಂಗು ಹಿಡಿದುಕೊಂಡು ಓಡಾಡುವ ಸಮಾಜಘಾತುಕ ಶಕ್ತಿಗಳು ಕಂಡು ಬಂದಲ್ಲಿ ಅವರನ್ನು ಪತ್ತೆಹಚ್ಚಿ ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು. ಕಾನೂನು ಮತ್ತು ಸುವ್ಯವಸ್ಥೆಯನ್ನು ಗಟ್ಟಿಗೊಳಿಸಲು ಹಾಗೂ ಅಪರಾಧಗಳನ್ನು ನಿಯಂತ್ರಿಸಲು ಆಗಾಗ್ಗೆ ರೌಡಿಗಳ ಮನೆ ಮೇಲೆ ದಾಳಿ ನಡೆಯುತ್ತವೆ. ಮುಂದೆಯೂ ಸಹ ಇದೇ ರೀತಿ ದಾಳಿ ಮಾಡುತ್ತೇವೆ ಎಂದು ಮುಖ್ಯ ಆಯುಕ್ತರು ತಿಳಿಸಿದರು.
