ಬೆಂಗಳೂರು, ನ.22- ರಾಜಕೀಯ ಒತ್ತಡಕ್ಕೆ ಮಣಿಯದೆ ಆಶಾ ಕಾರ್ಯಕರ್ತರು ತಮ್ಮ ಧರಣಿಯನ್ನು ಕೈಬಿಡಬೇಕು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.ಜಪಾನ್ ಪ್ರವಾಸಕ್ಕೆ ತೆರಳುವ ಮುನ್ನ ನಗರದಲ್ಲಿ ಮಧ್ಯರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಶಾ ಕಾರ್ಯಕರ್ತರ ಧರಣಿಯ ಕುರಿತು ಪ್ರತಿಕ್ರಿಯೆಸಿದರು.
ಆಶಾ ಕಾರ್ಯಕರ್ತರ ಜೊತೆ ತಾವು ಜೊತೆ ಒಂದೂವರೆ ಗಂಟೆ ಚರ್ಚೆ ನಡೆದ ಬಳಿಕವೂ, ಯಾವುದೋ ಒಂದು ರಾಜಕೀಯ ಸಂಘಟನೆ ಒತ್ತಡ ಹಾಕುತ್ತಿದೆ ಎಂಬ ಕಾರಣಕ್ಕೆ ಧರಣಿಯನ್ನು ಮುಂದುವರೆಸುವುದಾದರೆ ನಾವು ಕೆಲಸ ಮಾಡುವುದು ಕಷ್ಟವಾಗುತ್ತದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ವಿಧಾನ ಮಂಡಲದ ಅಧಿವೇಶನಕ್ಕೂ ಮುನ್ನವೇ ನಾವು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ, ಸಚಿವ ಸಂಪುಟ ಸಭೆಯಲ್ಲಿ ಈಗಾಗಲೇ ಚರ್ಚೆ ಮಾಡಿದ್ದೇವೆ. ಅನಗತ್ಯವಾಗಿ ಧರಣಿ ಮುಂದುವರೆಸಬೇಡಿ. ನಿಮಗೆ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ ಎಂದರು.
ವೇತನ ಪರಿಷ್ಕರಣೆ ಒಂದು ಇಲಾಖೆಗೆ ಸೀಮಿತವಾಗಿಲ್ಲ. ಏಳೆಂಟು ಇಲಾಖೆಗಳು ಸಮೇಳಿತವಾಗಿದೆ. ಅತಿಥಿ ಶಿಕ್ಷಕರು-ಉಪನ್ಯಾಸಕರು, ಆರೋಗ್ಯ ಕಾರ್ಯಕರ್ತರು, ಅಂಗನವಾಡಿಯವರು, ಅಡುಗೆ ಸಹಾಯಕರು ಸೇರಿದಂತೆ ಎಂಟು ಇಲಾಖೆಗಳ ಸಿಬ್ಬಂದಿಗಳಿಗೂ ಇದು ಅನ್ವಯವಾಗುತ್ತದೆ. ಒಬ್ಬರಿಗೆ ಹೆಚ್ಚಳ ಮಾಡಿದರೆ ಅದನ್ನು ಬೇರೆ ಇಲಾಖೆಗಳಿಗೂ ಜಾರಿ ಮಾಡಬೇಕಾಗುತ್ತದೆ. ಹೀಗಾಗಿ ಸಹನೆಯಿಂದ ವರ್ತಿಸುವಂತೆ ಹೇಳಿದರು.
2025ರಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್ 10 ಸಾವಿರ ರೂಪಾಯಿ ವೇತನ ಹೆಚ್ಚಿಸುವುದಾಗಿ ಭರವಸೆ ನೀಡಿದ್ದರು ಎಂಬ ವಾದವನ್ನು ತಳ್ಳಿ ಹಾಕಿದ ಅವರು, ಈ ಹಿಂದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ರೊಂದಿಗೆ ಚರ್ಚೆ ಮಾಡಿದ್ದೆ, ಆಗ ಭರವಸೆ ನೀಡಿದಂತೆ ಖಂಡಿತ ಸಹಾಯ ಮಾಡುತ್ತೇವೆ. ಆದರೆ 10 ಸಾವಿರ ರೂಪಾಯಿ ನಿಗದಿ ಮಾಡುತ್ತೇವೆ ಎಂದು ಯಾವುದೇ ಸಂಖ್ಯೆಯನ್ನು ಉಲ್ಲೇಖಿಸಿ ಭರವಸೆ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಆಶಾ ಕಾರ್ಯಕರ್ತರು ನಮ ಮೇಲೆ ಭರವಸೆ ಇಡಲಿ. ಸಹೋದರಿಯರು, ತಾಯಂದಿರಿಗೆ ಖಂಡಿತ ಸಹಾಯ ಮಾಡುತ್ತೇವೆ ಎಂದು ಪುನರುಚ್ಚರಿಸಿದರು.ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಮತ್ತು ಏಳೆಂಟು ಮಂದಿ ಅಧಿಕಾರಿಗಳ ಜೊತೆ ತಾವು ಜಪಾನ್ ಪ್ರವಾಸ ಕೈಗೊಳ್ಳುತ್ತಿದ್ದೇವೆ. ಅಲ್ಲಿ ರಸ್ತೆ, ಸೇತುವೆ ಸೇರಿದಂತೆ ನಗರ ಅಭಿವೃದ್ಧಿ ವಿಚಾರವಾಗಿ ಬಳಕೆ ಮಾಡಲಾಗಿರುವ ಹೊಸ ತಂತ್ರಜ್ಞಾನಗಳನ್ನು ಅಧ್ಯಯನ ಮಾಡುತ್ತೇವೆ. ಅದನ್ನು ಇಲ್ಲಿ ಅಳವಡಿಸುವ ಕುರಿತು ಚಿಂತನೆ ಇದೆ ಎಂದರು.
ತಾವು ಮೂರು ದಿನ ಮಾತ್ರ ಜಪಾನ್ ಪ್ರವಾಸ ಕೈಗೊಳ್ಳುತ್ತಿದ್ದು ಆನಂತರ ವಾಪಸ್ ಬಂದು ಇಲ್ಲಿ ನ.25ರಂದು ನಡೆಯುವ ಸಂವಿಧಾನ ದಿನಾಚರಣೆಯಲ್ಲಿ ಭಾಗವಹಿಸುತ್ತೇನೆ ಮತ್ತು ವಿಧಾನ ಮಂಡಲದ ಅಧಿವೇಶನಕ್ಕೆ ಪೂರ್ವ ತಯಾರಿ ನಡೆಸಬೇಕಿದೆ ಎಂದರು. ಸಚಿವ ಎಂ.ಬಿ. ಪಾಟೀಲ್ ಮತ್ತು ಅಧಿಕಾರಿಗಳ ತಂಡ ಪ್ರವಾಸ ಮುಂದುವರೆಸಲಿದೆ. ಜಪಾನ್ ಹಾಗೂ ಸೋಲ್ ನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಬೆಂಗಳೂರಿನ ಬಿಡದಿ ಬಳಿಯ ಟೊಯೋಟಾ ಘಟಕ ಇದೆ. ಸಂಸ್ಥೆಯ ಮುಖ್ಯಸ್ಥರನ್ನು ಭೇಟಿ ಮಾಡಿ ಟೊಯೋಟಾದ ಮತ್ತೊಂದು ಘಟಕವನ್ನು ರಾಜ್ಯದಲ್ಲಿ ಆರಂಭಿಸುವಂತೆ ಮನವಿ ಮಾಡುತ್ತೇವೆ ಎಂದರು.
