ಆಕ್ಸ್ ಫರ್ಡ್, ನ.22-ಕೆಲವು ಉನ್ನತ ಸಾರ್ವಜನಿಕ ಹುದ್ದೆಗಳನ್ನು ಮಹಿಳೆಯರು ಅಲಂಕರಿಸಿದ್ದಾರೆ ಎಂಬ ಕಾರಣಕ್ಕೆ ಇಡೀ ಸಮಾಜದಲ್ಲಿ ಲಿಂಗ ಸಮಾನತೆಯನ್ನು ಸಾಧಿಸಲಾಗಿದೆ ಎಂದು ಭಾವಿಸುವುದು ತಪ್ಪು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅಭಿಪ್ರಾಯಪಟ್ಟಿದ್ದಾರೆ. ಬ್ರಿಟನ್ನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸೊಮರ್ವಿಲ್ಲೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ನೆಲಿಯಾ ಸೊರಾಬ್ಜಿ ಸ್ಮಾರಕ ಉಪನ್ಯಾಸ ನೀಡಿ ಅವರು ಮಾತನಾಡಿದರು.
2027ರ ಸೆಪ್ಟೆಂಬರ್ನಲ್ಲಿ ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ನ್ಯಾ. ನಾಗರತ್ನ ಅವರು, ಸಂವಿಧಾನದ ಆಶಯಗಳು ಕೇವಲ ಕಾಗದದ ಮೇಲೆ ಉಳಿಯದೆ ವಾಸ್ತವಿಕ ಸಮಾನತೆಯಾಗಿ ಜಾರಿಯಾಗಬೇಕು ಎಂದು ಪ್ರತಿಪಾದಿಸಿದರು.
ನನಗೆ ಶಿಕ್ಷಣ ಪಡೆಯುವ ಮತ್ತು ವೃತ್ತಿಜೀವನವನ್ನು ರೂಪಿಸಿಕೊಳ್ಳುವ ಅವಕಾಶ ಸಿಕ್ಕಿತು. ಆದರೆ, ಭಾರತದಲ್ಲಿ ಉತ್ತಮ ವಿದ್ಯಾರ್ಹತೆ ಹೊಂದಿದ್ದರೂ ಶಿಕ್ಷಣ ಮುಂದುವರಿಸಲು ಅಥವಾ ವೃತ್ತಿ ಮಾಡಲು ಕಷ್ಟಪಡುತ್ತಿರುವ ಅನೇಕ ಮಹಿಳೆಯರಿದ್ದಾರೆ. ಸಂವಿಧಾನದ ಆಶಯಗಳನ್ನು ಭಾರತದ ಮಹಿಳೆಯರು ಸಾಧಿಸಬೇಕಾದರೆ, ಭಾರತೀಯ ಸಮಾಜ ಮತ್ತು ವಿಶೇಷವಾಗಿ ಪುರುಷ ಸಮಾಜವು ಈ ನಿರ್ಣಾಯಕ ಅಂಶದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಮಹಿಳೆಯರ ಹಕ್ಕುಗಳ ಪ್ರಗತಿಯನ್ನು ಕೇವಲ ತಾರತಮ್ಯದ ಕಾನೂನುಗಳನ್ನು ರದ್ದುಗೊಳಿಸಿದ ಅಥವಾ ಹೊಸ ಕಾಯ್ದೆಗಳನ್ನು ಜಾರಿಗೆ ತಂದ ಸಂಖ್ಯೆಯಿಂದ ಅಳೆಯಲು ಸಾಧ್ಯವಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕೇವಲ ಹೆಚ್ಚಿನ ಕಾನೂನುಗಳನ್ನು ರೂಪಿಸುವ ಮೂಲಕ ತಡೆಯಲು ಸಾಧ್ಯವಿಲ್ಲ. ಕಾನೂನುಗಳು ಬದಲಾದಷ್ಟು ವೇಗವಾಗಿ ಸಮಾಜದ ನಂಬಿಕೆಗಳು ಮತ್ತು ಸಂಪ್ರದಾಯಗಳು ಬದಲಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಮಹಿಳೆಯರ ಮೇಲಿರುವ ಸಂಬಳವಿಲ್ಲದ ಮನೆಗೆಲಸ ಮತ್ತು ಕುಟುಂಬದ ಆರೈಕೆಯ ಹೊರೆಯು ಇಂದಿಗೂ ಅವರ ವೃತ್ತಿ ಮತ್ತು ಜೀವನದ ಆಯ್ಕೆಗಳನ್ನು ನಿರ್ಧರಿಸುತ್ತಿದೆ. ಅಲ್ಲದೆ, ಜಾತಿ, ವರ್ಗ, ಅಂಗವೈಕಲ್ಯ, ಧರ್ಮ ಮತ್ತು ಪ್ರದೇಶದ ಆಧಾರದ ಮೇಲೆ ಮಹಿಳೆಯರು ಎದುರಿಸುವ ಸವಾಲುಗಳು ಭಿನ್ನವಾಗಿವೆ. ಪ್ರತಿಯೊಬ್ಬ ಹೆಣ್ಣು ಮಗುವಿಗೂ ಹುಟ್ಟುವ ಹಕ್ಕು, ಶಿಕ್ಷಣ ಪಡೆಯುವ, ಆಸ್ತಿಯಲ್ಲಿ ಪಾಲು ಪಡೆಯುವ ಮತ್ತು ಸುರಕ್ಷಿತವಾಗಿ ಬದುಕುವ ಹಕ್ಕು ಸಿಕ್ಕಾಗ ಮಾತ್ರ ಸಂವಿಧಾನದ 14 ಮತ್ತು 15ನೇ ವಿಧಿಗಳು ಅರ್ಥಪೂರ್ಣವಾಗುತ್ತವೆ ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು.
ನ್ಯಾಯಾಂಗ ಮತ್ತು ವಕೀಲ ವೃತ್ತಿಯಲ್ಲಿ ಮಹಿಳೆಯರ ಪ್ರಾತಿನಿಧ್ಯದ ಕುರಿತು ಮಾತನಾಡಿದ ಅವರು, ಸರ್ಕಾರಿ ವಕೀಲರ ಸಮಿತಿಗಳು ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಕಾನೂನು ನೆರವು ವಿಭಾಗಗಳಲ್ಲಿ ಮಹಿಳಾ ವಕೀಲರಿಗೆ ಮೂರನೇ ಒಂದರಷ್ಟು ಮೀಸಲಾತಿ ನೀಡಬೇಕು ಎಂದು ಪ್ರತಿಪಾದಿಸಿದರು.
