ಹಾವೇರಿ (ಶಿಗ್ಗಾವಿ), ಆ.23- ಶಿಗ್ಗಾವಿಯ ಹನುಮಾನ್ ದೇವಸ್ಥಾನದಲ್ಲಿ ಅನ್ಯಕೋಮಿನ ವ್ಯಕ್ತಿಯೊಬ್ಬ ಉದ್ದೇಶಪೂರ್ವಕವಾಗಿ ಮೂತ್ರ ವಿಸರ್ಜನೆ ಮಾಡಿದ್ದು, ಆತ ಕೋಮು ಗಲಭೆ ಸೃಷ್ಟಿಸಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾನೆ. ಪೊಲೀಸರು ಆತನ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.
ಈ ಹಿನ್ನೆಲೆಯಲ್ಲಿ ಕರೆ ನೀಡಿರುವ ಶಿಗ್ಗಾವಿ ಬಂದ್‌ಗೆ ಎಲ್ಲ ಕೋಮಿನವರೂ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಅತ್ಯಂತ ಹೇಯ ಹಾಗೂ ಕ್ಷಮಿಸಲಾರದ ಕೃತ್ಯ. ಹನುಮಾನ್ ದೇವಸ್ಥಾನ ರಸ್ತೆಗಿಂತ ಎತ್ತರದಲ್ಲಿದ್ದು, ಅಲ್ಲಿ ಗೇಟ್ ಇದೆ. ಗೇಟ್ ತೆಗೆದು ಒಳಗೆ ಪ್ರವೇಶಿಸಿ ಸ್ಥಾಪಿತವಾಗಿರುವ ಹನುಮಂತ ದೇವರ ದೇವಸ್ಥಾನದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಆತ ಕುಡಿತದ ಮತ್ತಿನಲ್ಲಿ ಇದ್ದಂತೆ ಅನಿಸುವುದಿಲ್ಲ. ಉದ್ದೇಶಪೂರ್ವಕವಾಗಿಯೇ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಿದರು.
ಕುಡುಕರು ನಿಂತಲ್ಲೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಆದರೆ, ಪೊಲೀಸರು ಪ್ರಕರಣವನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಗಂಭೀರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಶಿಗ್ಗಾವಿ-ಸವಣೂರಿನಲ್ಲಿ ಕಳೆದ 20 ವರ್ಷಗಳಿಂದ ಯಾವುದೇ ಕೋಮು ಸಂಘರ್ಷ ನಡೆಯದಂತೆ ಶಾಂತಿ ಕಾಪಾಡುವ ಕೆಲಸ ಮಾಡಿದ್ದೇವೆ. ಆದರೆ, ಆತ ಕೋಮು ಗಲಭೆ ಸೃಷ್ಟಿಸಿ ಶಾಂತಿ ಕದಡುವ ಕೆಲಸ ಮಾಡಿದ್ದಾನೆ. ಇತ್ತೀಚಿನ ದಿನಗಳಲ್ಲಿ ಇಂತಹ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಿರುವುದರಿಂದ ಈ ರೀತಿಯ ಬೆಳವಣಿಗೆಗಳು ನಡೆಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೊಲೀಸರು ಕ್ರಮ ಕೈಗೊಂಡ ತಕ್ಷಣ ಪ್ರಕರಣ ಮುಗಿಯುವುದಿಲ್ಲ. ಆತ ಮತ್ತೆ ಜಾಮೀನಿನ ಮೇಲೆ ಬಂದು ಇಲ್ಲಿಯೇ ನಿಂತು ‘ನೀವೇನು ಮಾಡಿದ್ದೀರಿ’ ಎಂದು ಪ್ರಶ್ನಿಸುತ್ತಾನೆ. ಕೋಮು ದುಷ್ಟಶಕ್ತಿಗಳಿಗೆ ಕುಮ್ಮಕ್ಕು ನೀಡುವ ಕೆಲಸ ನಡೆಯುತ್ತಿದೆ. ಈಗಾಗಲೇ ಟ್ಯಾಕ್ಸಿ ಸ್ಟ್ಯಾಂಡ್‌ನವರು ಹಾಗೂ ಪ್ರಮೋದ್ ಮುತಾಲಿಕ್ ಬಂದ್‌ಗೆ ಕರೆ ನೀಡಿದ್ದಾರೆ. ಅವರಿಗೆ ನಮ್ಮ ಬೆಂಬಲವಿದೆ ಎಂದರು.
ಹಾವೇರಿ ಜಿಲ್ಲಾಡಳಿತ ಬಂದ್‌ಗೆ ಅವಕಾಶ ನೀಡುವುದಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಲ್ಲಿ ನಮ್ಮ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಅಪರಾಧಿಗಳಿಗೆ ಭಯವಿಲ್ಲ. ಹಳ್ಳಿಗಳಲ್ಲಿ ಇಸ್ಪೀಟ್ ಹಾಗೂ ಒಸಿ ದಂಧೆ ನಡೆಯುತ್ತಿದೆ. ಎಲ್ಲೆಡೆ ಡ್ರಗ್ಸ್ ಇದೆ. ನಮ್ಮ ಹೋರಾಟ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧವಾಗಿದೆ. ಆದ್ದರಿಂದ ಎಲ್ಲ ಕೋಮಿನವರು ಬೆಂಬಲ ನೀಡಬೇಕು ಎಂದು ಹೇಳಿದರು.
ಜನರು ಸ್ವಯಂಪ್ರೇರಿತರಾಗಿ ಬಂದ್ ಮಾಡಿದರೆ ಜಿಲ್ಲಾಡಳಿತ ಏನು ಮಾಡಲು ಸಾಧ್ಯ? ಎಲ್ಲೆಡೆ ನಂಬರ್ ಟು ದಂಧೆ ನಡೆಯುತ್ತಿದೆ. ಇಸ್ಪೀಟ್ ಆಡುವವರನ್ನು ಬಂಧಿಸುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಎಸ್‌ಪಿ ಅವರ ಗಮನಕ್ಕೆ ತಂದಿದ್ದೇವೆ. ಅವರು ದಾಳಿ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸರಾಸರಿ ಒಂದು ಗ್ರಾಮ ಪಂಚಾಯಿತಿಗೆ ಒಂದು ಕ್ಲಬ್ ನಡೆಯುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ, ಸರ್ಕಾರ, ಎಸ್‌ಪಿ ಹಾಗೂ ಹೆಚ್ಚುವರಿ ಎಸ್‌ಪಿ ಅವರನ್ನು ಪ್ರಶ್ನಿಸುತ್ತೇನೆ ಎಂದು ಹೇಳಿದರು.
ಅಧಿವೇಶನದಲ್ಲಿ ಬರಗಾಲದ ಕುರಿತು ಚರ್ಚಿಸುತ್ತಿಲ್ಲ ಎಂದು ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಮಾಡುತ್ತಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಒಂದು ತಿಂಗಳು ದೆಹಲಿಗೆ ಅಲೆದಾಡಿ ಕಾಲಹರಣ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಬರದ ಪರಿಸ್ಥಿತಿ ಇದೆ. ಈಗ ಮೋಡ ಬಿತ್ತನೆ ಮಾಡುವ ಮಾತನಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಬರ ಘೋಷಣೆ ಮಾಡಬೇಕಿತ್ತು. ಆದರೆ, ಇನ್ನೂ ಮೀನಮೇಷ ಎಣಿಸುತ್ತಿದೆ. ಬರಗಾಲದ ಬಗ್ಗೆ ರಾಜ್ಯ ಸರ್ಕಾರಕ್ಕೆ ಅಷ್ಟು ಕಾಳಜಿ ಇದ್ದರೆ ನಾಳೆಯೇ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಲಿ. ನಾವು ಬರಗಾಲದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಅವರು ಹೇಳಿದರು.
