Friday, November 22, 2024
Homeರಾಜಕೀಯ | Politicsಅತಂತ್ರ ಸ್ಥಿತಿಯಲ್ಲಿ ಸುಮಲತಾ ಅಂಬರೀಶ್ ರಾಜಕೀಯ ಭವಿಷ್ಯ

ಅತಂತ್ರ ಸ್ಥಿತಿಯಲ್ಲಿ ಸುಮಲತಾ ಅಂಬರೀಶ್ ರಾಜಕೀಯ ಭವಿಷ್ಯ

ಬೆಂಗಳೂರು,ಮಾ.14- ಪ್ರತಿಷ್ಠೆಯ ಕಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರ ಬಹುತೇಕ ಜೆಡಿಎಸ್ ಪಾಲಾಗಿದ್ದು, ಹಾಲಿ ಸಂಸದೆ ಸುಮಲತಾ ಅಂಬರೀಶ್ ರಾಜಕೀಯ ಭವಿಷ್ಯ ಡೋಲಾಯಮಾನ ಸ್ಥಿತಿಗೆ ಬಂದಿದೆ. ಮೈತ್ರಿ ಧರ್ಮವನ್ನು ಪಾಲನೆ ಮಾಡಬೇಕಾದ ಇಕ್ಕಟ್ಟಿಗೆ ಸಿಲುಕಿರುವುದರಿಂದ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಲು ಬಹುತೇಕ ತೀರ್ಮಾನಿಸಿದ್ದು, ಇದೇ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಸುಮಲತಾ ಅಂಬರೀಶ್ ರಾಜಕೀಯ ಭವಿಷ್ಯಕ್ಕೆ ಮಂಕು ಆವರಿಸಿದೆ.

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲೇಬಾಕಾದ ಅನಿವಾರ್ಯತೆ ಬಿಜೆಪಿಗೆ ಇದೆ. ಮಂಡ್ಯ ಕ್ಷೇತ್ರವನ್ನು ನಮಗೆ ನೀಡದಿದ್ದರೆ ಮೈತ್ರಿಗೆ ಅರ್ಥವೇ ಇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ನಾಯಕರಿಗೆ ಕಡ್ಡಿ ಮುರಿದಂತೆ ಹೇಳಿದ್ದರು.ಹೀಗಾಗಿ ಈ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಲು ಬಿಜೆಪಿ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಶ್ ರಾಜಕೀಯ ನಡೆ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಒಂದು ವೇಳೆ ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆಯೇ ಇಲ್ಲವೇ ಸ್ಪರ್ಧೆಯಿಂದ ಹಿಂದೆ ಸರಿಯಲಿದ್ದಾರೆಯೇ ಎಂಬುದು ಊಹೆಗೂ ನಿಲುಕದ ಪ್ರಶ್ನೆಯಾಗಿದೆ. ಸುಮಲತಾ ಅಂಬರೀಶ್ ಅವರನ್ನು ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಸಲು ಒಂದು ಹಂತದಲ್ಲಿ ಬಿಜೆಪಿ ಚಿಂತನೆ ನಡೆಸಿತ್ತು.

ನನ್ನ ರಾಜಕೀಯ ಕರ್ಮಭೂಮಿಯಾದ ಮಂಡ್ಯವನ್ನು ಬಿಟ್ಟು ನಾನು ಎಲ್ಲಿಗೂ ಬರುವುದಿಲ್ಲ ಎಂದು ಸುಮಲತಾ ಅಂಬರೀಶ್ ಹೇಳಿದ್ದರಿಂದ ಅನಿವಾರ್ಯವಾಗಿ ಶೋಭಾ ಕರಂದ್ಲಾಜೆಗೆ ಅದೃಷ್ಟ ಖುಲಾಯಿಸಿತು. ಈಗ ಮಂಡ್ಯ ಬಹುತೇಕ ಜೆಡಿಎಸ್‍ಗೆ ಬಿಟ್ಟುಕೊಡುವುದರಿಂದ ಸುಮಲತಾ ಅಂಬರೀಶ್ ಮುಂದಿನ ನಿರ್ಧಾರ ಸಹಜವಾಗಿ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಕಳೆದ ಬಾರಿಯಂತೆ ಸ್ವಾಭಿಮಾನ ಅಸ್ತ್ರ ಹೂಡಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೋ, ಇಲ್ಲವೇ ಸಕ್ರಿಯ ರಾಜಕಾರಣದಿಂದಲೇ ಹಿಂದೆ ಸರಿಯುತ್ತಾರೋ ಎಂಬುದನ್ನು ಕಾದು ನೋಡಬೇಕು.

RELATED ARTICLES

Latest News