ಮುಂಬೈ, ಆ.23- ದಕ್ಷಿಣ ಮುಂಬೈನಲ್ಲಿ ಕಳೆದ ರಾತ್ರಿ ನಡೆದ ಭುಲೇಶ್ವರಾಚಾ ರಾಜಾ ಗಣೇಶ ಮೂರ್ತಿ ತರುವ ಮೆರವಣಿಗೆಯ ವೇಳೆ ಮೂರ್ತಿ ಕುಸಿದು ಜನರ ಮೇಲೆ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಇಬ್ಬರು ಮಕ್ಕಳು ಸೇರಿದಂತೆ ಐವರು ಗಾಯಗೊಂಡಿದ್ದಾರೆ.
ಭುಲೇಶ್ವರದ ಜಯ ಅಂಬೆ ಚೌಕ್ನ ಕಬೂತರ್ಖಾನಾ ಸಮೀಪದ ಬಲರಾಮ್ ಮರ್ಚೆಂಟ್ ರಸ್ತೆಯಲ್ಲಿ ರಾತ್ರಿ 10ರ ಸುಮಾರಿಗೆ ಘಟನೆ ನಡೆದಿದೆಎಂದು ಬೃಹನುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಸಂಕೇತ್ ನೆವ್ಶೆ (33) ಮತ್ತು ಬೃಜೇಶ್ ಹೇಮಂತ್ ಜೋಶಿ (30) ಎಂದು ಗುರುತಿಸಲಾಗಿದೆ.
ಗಾಯಗೊಂಡವರನ್ನು ವೈಭವ್ ಘೇನಂದ್ (38), ಪವನ್ ಚೌರಾಸಿಯಾ (25), ಐದು ವರ್ಷದ ಲಾವಣ್ಯ ಗಣೇಶ್, ದಿವ್ಯಾ ಗಣೇರ್(7) ಹಾಗೂ ಕುನಾಲ್ ಕಾಶಿದ್ (26) ಎಂದು ಗುರುತಿಸಲಾಗಿದೆ. ಗಾಯಾಳುಗಳ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಮುಂಬೈ ಅಗ್ನಿಶಾಮಕ ದಳ, ಮುಂಬೈ ಪೊಲೀಸ್, ಸಂಚಾರ ಪೊಲೀಸರು, ಹಾಗೂ ಪಾಲಿಕೆ ಸಿಬ್ಬಂದಿ ಕುಡಲೆ ಕಾರ್ಯಾಚರಣೆ ನಡೆಸಿದರು.
ಮುಂಬೈ ಸೇರಿದಂತೆ ಮಹಾರಾಷ್ಟ್ರದಾದ್ಯಂತ 10 ದಿನಗಳ ಗಣೇಶೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗಣೇಶ ಮೂರ್ತಿಗಳನ್ನು ಮನೆಗಳು ಮತ್ತು ವಿವಿಧ ಪೆಂಡಾಲ್ಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.
ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಮುಂಬೈನಲ್ಲಿ ಗಣೇಶ ಮೂರ್ತಿಗಳ ಭವ್ಯ ಆಗಮನ ಮೆರವಣಿಗೆಗಳನ್ನು ಆಯೋಜಿಸಲಾಗುತ್ತಿದ್ದು, ಸಂಗೀತ, ಸಂಭ್ರಮ ಹಾಗೂ ಭಾರಿ ಜನಸಂದಣಿಯ ನಡುವೆ ಭಕ್ತರು ಮೂರ್ತಿಗಳನ್ನು ವಿವಿಧ ಪೆಂಡಾಲ್ಗಳಿಗೆ ಕೊಂಡೊಯ್ಯುತ್ತಾರೆ.
