ಪಾಲಕ್ಕಾಡ್,ಆ.23- ಬಸ್ ಪ್ರಯಾಣಿಕನೊಬ್ಬನಿಂದ 142 ಗ್ರಾಂ ಮೆಥಾಂಫೆಟಮೈನ್ ಮತ್ತು ಒಂದು ಗ್ರಾಂ ಗಾಂಜಾ ವಶಪಡಿಸಿಕೊಂಡ ಘಟನೆ ಇಂದು ಬೆಳಿಗ್ಗೆ ಇಲ್ಲಿ ನಡೆದಿದೆ. ತಡರಾತ್ರಿ ಅಬಕಾರಿ ಅಧಿಕಾರಿಗಳ ತಂಡ ತಪಾಸಣಾ ಕೇಂದ್ರದಲ್ಲಿ ವಾಹನಗಳ ಸಾಮಾನ್ಯ ತಪಾಸಣೆ ನಡೆಸುತ್ತಿದ್ದ ವೇಳೆ ಘಟನೆ ನಡೆದಿದೆ.
ಬೆಂಗಳೂರುದಿಂದ ಎರ್ನಾಕುಲಂಗೆ ತೆರಳುತ್ತಿದ್ದ ಬಸ್‌ಗೆ ಅಧಿಕಾರಿಗಳು ಹತ್ತಿದಾಗ, ಪ್ರಯಾಣಿಕನೊಬ್ಬನ ಅನುಮಾನಾಸ್ಪದ ವರ್ತನೆ ಗಮನಕ್ಕೆ ಬಂದಿದೆ. ಆತನ ಬ್ಯಾಗ್ ಪರಿಶೀಲಿಸಿದಾಗ ಕ್ರಿಯೇಟಿನ್ ಸಪ್ಲಿಮೆಂಟ್ ಡಬ್ಬಿಗಳಲ್ಲಿ ಪ್ಯಾಕ್ ಮಾಡಲಾಗಿದ್ದ 142 ಗ್ರಾಂ ಮೆಥಾಂಫೆಟಮೈನ್ ಹಾಗೂ ಒಂದು ಗ್ರಾಂ ಗಾಂಜಾ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತನನ್ನು ತ್ರಿಶೂರ್ ಜಿಲ್ಲೆಯ ಕುನ್ನಂಕುಳಂನ ವೆಲ್ಲಾರಕ್ಕಾಡ್ ನಿವಾಸಿ ಜಿತಿನ್ (35)ಎಂದು ಗುರುತಿಸಲಾಗಿದೆ.ಪ್ರಕರಣ ದಾಖಲಿಸಿ ಆರೋಪಿಯ ವಿಚಾರಣೆ ನಂತರ ಪ್ರಾಥಮಿಕ ತನಿಖೆಯ ಪ್ರಕಾರ, ಜಿತಿನ್ ಬೆಂಗಳೂರಿನಿಂದ ಸಗಟಾಗಿ ಮಾದಕ ವಸ್ತು ಖರೀದಿಸಿ ಕೇರಳದ ವಿವಿಧ ಭಾಗಗಳಲ್ಲಿ ಚಿಲ್ಲರೆ ಮಾರಾಟ ಮಾಡಲು ಅದನ್ನು ತಂದಿದ್ದಾನೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಈ ಮಾದಕ ವಸ್ತು ಸಾಗಣೆ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಹಾಗೂ ಆರೋಪಿ ಈ ಹಿಂದೆ ಇದೇ ರೀತಿಯ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆಯೇ ಎಂಬುದನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
