ಬೆಂಗಳೂರು,ಸೆ.9- ಪತ್ನಿಯನ್ನು ಕೊಲೆ ಮಾಡಿದ ಆಟೋ ಚಾಲಕನೊಬ್ಬ ಆತಹತ್ಯೆ ಮಾಡಿಕೊಂಡಿರುವ ಘಟನೆ ರಾತ್ರಿ ಹೆಚ್‌ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತನ್ನ ಪತ್ನಿ ಶ್ರುತಿ (35) ಯನ್ನು ಕೊಲೆ ಮಾಡಿದ ವಿಭೂತಿಪುರದ ನಿವಾಸಿ ಆಟೋ ಚಾಲಕ ರಾಘವೇಂದ್ರ (38) ಆತಹತ್ಯೆ ಮಾಡಿಕೊಂಡಿದ್ದಾನೆ.
ದಾವಣಗೆರೆ ಮೂಲದ ಶೃತಿ ಹಾಗೂ ರಾಘವೇಂದ್ರ ಅವರಿಗೆ 15 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.ಈ ಇಬ್ಬರು ಮಕ್ಕಳು ದಾವಣಗೆರೆಯಲ್ಲಿರುವ ಅಜ್ಜಿಯ ಮನೆಯಲ್ಲಿದ್ದಾರೆ. ಹಾಗಾಗಿ ರಾಘವೇಂದ್ರ ಮತ್ತು ಶೃತಿ ಇಬ್ಬರೇ ವಿಭೂತಿಪುರದಲ್ಲಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶೃತಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮನೆಕೆಲಸ ಮಾಡುತ್ತಿದ್ದರು. ಈ ನಡುವೆ ಪತಿ-ಪತ್ನಿ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ರಾತ್ರಿಯೂ ಸಹ ಜಗಳ ಉಂಟಾಗಿದೆ.
ಜಗಳದ ಒಂದು ಹಂತದಲ್ಲಿ ರಾಘವೇಂದ್ರ ಕೈಗೆ ಸಿಕ್ಕಿದ ಬಿಯರ್ ಬಾಟಲಿಯಿಂದ ಶೃತಿಯ ತಲೆಗೆ ಹೊಡೆದು ಕೊಲೆ ಮಾಡಿ ನಂತರ ಬೆಡ್‌ರೂಂಗೆ ಹೋಗಿ ಫ್ಯಾನ್‌ನ ಉಕ್ಕಿಗೆ ಸೀರೆಯಿಂದ ನೇಣು ಹಾಕಿಕೊಂಡು ಆತಹತ್ಯೆ ಮಾಡಿಕೊಂಡಿದ್ದಾನೆ.ಬೆಳಗ್ಗೆ ಇವರ ಮನೆಯ ಬಾಗಿಲು ತೆರೆಯದಿರುವುದರಿಂದ ಅಕ್ಕಪಕ್ಕದವರು ಅನುಮಾನಗೊಂಡು ಅವರ ಮನೆ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಸುದ್ದಿ ತಿಳಿದು ಹೆಚ್‌ಎಎಲ್ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶೃತಿಯ ನಡತೆಯ ಬಗ್ಗೆ ಅನುಮಾನಪಟ್ಟು ಈ ಕೊಲೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
