ಲಂಡನ್, ಸೆ.9- ಕಿಂಗ್‌ಫಿಷರ್ ಏರ್‌ಲೈನ್ಸ್ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಟೀಕೆಗೆ ಗುರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, ತಮ್ಮ ವಿರುದ್ಧದ ‘ವಂಚಕ’ ಮತ್ತು ‘ಭಗೋಡಾ’ ಆರೋಪಗಳಿಗೆ ಮತ್ತೆ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಂದು ಪೋಸ್ಟ್ ಮಾಡಿರುವ ಮಲ್ಯ, ತಮ್ಮ ಪ್ರಕರಣದಲ್ಲಿ ಬ್ಯಾಂಕ್‌ಗಳಿಗೆ ವಸೂಲಾಗಿರುವ ಹಣ ಹಾಗೂ ಆಸ್ತಿಗಳ ಮೌಲ್ಯವನ್ನು ನ್ಯಾಯಸಮ್ಮತವಾಗಿ ಲೆಕ್ಕಹಾಕಬೇಕು ಎಂದು ಆಗ್ರಹಿಸಿದ್ದಾರೆ.
‘ನ್ಯಾಯಯುತ ಮತ್ತು ಸರಿಯಾದ ಲೆಕ್ಕಾಚಾರದಲ್ಲಿ ನಂಬಿಕೆ ಇರುವ ಎಲ್ಲರೂ ಈ ಪಟ್ಟಿಯನ್ನು ಗಮನಿಸಬೇಕು. ಆರಂಭದಿಂದಲೂ ನನ್ನನ್ನು ವಂಚಕ ಎಂದು ಬಿಂಬಿಸುವುದು ಇನ್ನೂ ನ್ಯಾಯವೇ? ನನಗೆ ಬರಬೇಕಾಗಿರುವ ಹೆಚ್ಚುವರಿ ಮೊತ್ತವನ್ನು ಯಾವಾಗ ಮರುಪಾವತಿಸಲಾಗುತ್ತದೆ ಎಂಬ ಪ್ರಶ್ನೆಯನ್ನು ಏಕೆ ಕೇಳಬಾರದು?’ ಎಂದು ಮಲ್ಯ ಪ್ರಶ್ನಿಸಿದ್ದಾರೆ.
ಸಾಲದ ಮೊತ್ತ 10,230 ಕೋಟಿ ರೂ.ಗೆ ಏರಿಕೆ
ಮಲ್ಯ ಹಂಚಿಕೊಂಡಿರುವ ದಾಖಲೆಗಳ ಪ್ರಕಾರ, 2017ರ ಜನವರಿ 19ರಂದು ಸಾಲ ವಸೂಲಾತಿ ಮೇಲ್ಮನವಿ ನ್ಯಾಯಾಧಿಕರಣ (ಡಿಆರ್‌ಟಿ) ಆದೇಶದಂತೆ 6,203 ಕೋಟಿ ರೂ. ಮೊತ್ತ ನಿಗದಿಯಾಗಿತ್ತು. ವಾರ್ಷಿಕ ಶೇ.11ರ ಬಡ್ಡಿ ಲೆಕ್ಕದಲ್ಲಿ ಈ ಮೊತ್ತ ಏರಿಕೆಯಾಗಿದೆ ಎಂದು ಅವರು ವಿವರಿಸಿದ್ದಾರೆ.
2017ರ ಜನವರಿ 19ರಂದು 6,203 ಕೋಟಿ ರೂ. ಇದ್ದ ಮೊತ್ತವು ಬಡ್ಡಿ ಸೇರಿ 2018ರ ಜನವರಿ 18ರಂದು 6,916.35 ಕೋಟಿ ರೂ., 2019ರ ಜನವರಿ 17ರಂದು 7,711.73 ಕೋಟಿ ರೂ., 2020ರ ಜನವರಿ 16ರಂದು 8,598.58 ಕೋಟಿ ರೂ. ಹಾಗೂ 2021ರ ಜನವರಿ 15ರಂದು 9,587.42 ಕೋಟಿ ರೂ.ಗೆ ಏರಿಕೆಯಾಗಿದೆ. 2021ರ ಆಗಸ್ಟ್ 2ರ ವೇಳೆಗೆ ಈ ಮೊತ್ತ 10,230.58 ಕೋಟಿ ರೂ. ಆಗಿತ್ತು ಎಂದು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಇದೇ ದಾಖಲೆ ಪ್ರಕಾರ, 2021ರ ಆಗಸ್ಟ್ 2ರ ವೇಳೆಗೆ ಬ್ಯಾಂಕ್‌ಗಳ ಒಕ್ಕೂಟಕ್ಕೆ ಮರಳಿ ನೀಡಲಾದ ಚರ ಮತ್ತು ಸ್ಥಿರ ಆಸ್ತಿಗಳ ಒಟ್ಟು ಮೌಲ್ಯ 14,131.60 ಕೋಟಿ ರೂ. ಎಂದು ಜಾರಿ ನಿರ್ದೇಶನಾಲಯದ (ಇಡಿ) ಉತ್ತರದಲ್ಲೂ ಉಲ್ಲೇಖಿಸಲಾಗಿದೆ ಎಂದು ಮಲ್ಯ ಹೇಳಿದ್ದಾರೆ. ಈ ಲೆಕ್ಕಾಚಾರದ ಆಧಾರದ ಮೇಲೆ 3,901.02 ಕೋಟಿ ರೂ. ಹೆಚ್ಚುವರಿ ಮೊತ್ತ ಮರುಪಾವತಿಯಾಗಬೇಕಿದೆ ಎಂದು ಮಲ್ಯ ತಮ್ಮ ಪಟ್ಟಿಯಲ್ಲಿ ತಿಳಿಸಿದ್ದಾರೆ.
6,722 ಕೋಟಿ ರೂ.ಗೆ ಏರಿಕೆ?
ಮಲ್ಯ ಹಂಚಿಕೊಂಡಿರುವ ಮತ್ತೊಂದು ಪಟ್ಟಿಯಲ್ಲಿ, 2021ರ ಆಗಸ್ಟ್ 2ರಂದು ಹೆಚ್ಚುವರಿ ಮೊತ್ತವೆಂದು ಉಲ್ಲೇಖಿಸಿರುವ 3,901.02 ಕೋಟಿ ರೂ.ಗೆ ವಾರ್ಷಿಕ ಶೇ.11.5ರ ಬಡ್ಡಿ ಲೆಕ್ಕ ಹಾಕಲಾಗಿದೆ.ಅದರಂತೆ, 2022ರ ಆಗಸ್ಟ್ 1ರಂದು ಈ ಮೊತ್ತ 4,349.64 ಕೋಟಿ ರೂ., 2023ರ ಜುಲೈ 31ರಂದು 4,849.85 ಕೋಟಿ ರೂ., 2024ರ ಜುಲೈ 30ರಂದು 5,407.59 ಕೋಟಿ ರೂ. ಹಾಗೂ 2025ರ ಜುಲೈ 29ರಂದು 6,029.46 ಕೋಟಿ ರೂ.ಗೆ ಏರಿಕೆಯಾಗಿದೆ. 2026ರ ಜುಲೈ 28ರ ವೇಳೆಗೆ ಈ ಮೊತ್ತ 6,722.86 ಕೋಟಿ ರೂ. ಆಗಲಿದೆ ಎಂದು ಅವರು ಲೆಕ್ಕ ನೀಡಿದ್ದಾರೆ.
ತಮ್ಮ ಲೆಕ್ಕಾಚಾರದ ಪ್ರಕಾರ ಬ್ಯಾಂಕ್‌ಗಳ ಒಕ್ಕೂಟದಿಂದ 6,722.86 ಕೋಟಿ ರೂ. ಮರುಪಾವತಿಯಾಗಬೇಕಿದೆ. ‘ಈ ಹಣ ನನಗೆ ಯಾವಾಗ ಸಿಗಲಿದೆ?’ ಎಂದು ಮಲ್ಯ ಪ್ರಶ್ನಿಸಿದ್ದಾರೆ.
ಇಡಿ ಜಪ್ತಿಯಿಂದ ವೇತನ ಪಾವತಿಸಲು ಸಾಧ್ಯವಾಗಲಿಲ್ಲ
ತಮ್ಮ ಮತ್ತೊಂದು ಪ್ರಮುಖ ವಾದದಲ್ಲಿ, ಜಾರಿ ನಿರ್ದೇಶನಾಲಯವು ತಮ್ಮ ಆಸ್ತಿ ಹಾಗೂ ಹಣವನ್ನು ಜಪ್ತಿ ಮಾಡಿದ್ದರಿಂದಲೇ ಕಿಂಗ್‌ಫಿಷರ್ ಏರ್‌ಲೈನ್ಸ್ ಸಿಬ್ಬಂದಿಗೆ ಬಾಕಿ ವೇತನ ಪಾವತಿಸಲು ಸಾಧ್ಯವಾಗಲಿಲ್ಲ ಎಂದು ಮಲ್ಯ ಹೇಳಿದ್ದಾರೆ. ‘ಜಪ್ತಿ ಮಾಡಿದ್ದ ಹಣದಿಂದಲೇ ಜಾರಿ ನಿರ್ದೇಶನಾಲಯ ಕಿಂಗ್‌ಫಿಷರ್ ಏರ್‌ಲೈನ್ಸ್ ಉದ್ಯೋಗಿಗಳಿಗೆ 350 ಕೋಟಿ ರೂ. ವೇತನ ಬಿಡುಗಡೆ ಮಾಡಿದೆ. ಇಡಿ ನನ್ನ ಆಸ್ತಿ ಮತ್ತು ಹಣವನ್ನು ಜಪ್ತಿ ಮಾಡಿದ್ದರಿಂದ ನಾನು ಪಾವತಿಸಲು ಸಾಧ್ಯವಾಗಲಿಲ್ಲ’ ಎಂದು ಅವರು ಹೇಳಿದ್ದಾರೆ.
‘ನಾನು ಪರಾರಿಯಾದವನಲ್ಲ’
ತಮ್ಮನ್ನು ದೇಶ ಬಿಟ್ಟು ಪರಾರಿಯಾದ ‘ಭಗೋಡಾ’ ಎಂದು ಕರೆಯಬಾರದು ಎಂದು ಮಲ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.‘ನಾನು 1992ರಿಂದಲೇ ಯುನೈಟೆಡ್ ಕಿಂಗ್‌ಡಮ್‌ನ ಶಾಶ್ವತ ನಿವಾಸಿಯಾಗಿದ್ದೇನೆ. ಪ್ರಸ್ತುತ ಇರುವ ಕಾನೂನುಬದ್ಧ ನಿರ್ಬಂಧಗಳಿಂದಾಗಿ ನಾನು ಈ ದೇಶವನ್ನು ತೊರೆಯಲು ಸಾಧ್ಯವಿಲ್ಲ. ಭಾರತ ಸರ್ಕಾರ ಕೈಗೊಂಡ ಕ್ರಮಗಳಿಂದಲೇ ಈ ಸಂಪೂರ್ಣ ವಿಚಾರ ಆರಂಭವಾಯಿತು. ನನ್ನ ಪ್ರಕರಣದಲ್ಲಿ ಸರ್ಕಾರ ಅತ್ಯಂತ ಅನ್ಯಾಯವಾಗಿ ನಡೆದುಕೊಂಡಿದೆ’ ಎಂದು ಮಲ್ಯ ಆರೋಪಿಸಿದ್ದಾರೆ.
ಹಿನ್ನೆಲೆ
ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ಸಂಬಂಧಿಸಿದ ಬ್ಯಾಂಕ್ ಸಾಲ ಪ್ರಕರಣದಲ್ಲಿ ವಿಜಯ್ ಮಲ್ಯ ವಿರುದ್ಧ ಹಲವು ವರ್ಷಗಳಿಂದ ಕಾನೂನು ಹೋರಾಟ ನಡೆಯುತ್ತಿದೆ. ಇದೀಗ 2021ರ ಲೆಕ್ಕಾಚಾರದಲ್ಲಿ ಡಿಆರ್‌ಟಿ ಆದೇಶದ ಮೊತ್ತಕ್ಕಿಂತ ಆಸ್ತಿಗಳ ಮೌಲ್ಯ ಹೆಚ್ಚಾಗಿದ್ದು, ಬ್ಯಾಂಕ್‌ಗಳಿಗೆ ಪಾವತಿಸಬೇಕಾದ ಮೊತ್ತಕ್ಕಿಂತ ಹೆಚ್ಚಿನ ಆಸ್ತಿ ವಸೂಲಾಗಿದೆ ಎಂಬ ವಾದವನ್ನು ಮಲ್ಯ ಮುಂದಿಟ್ಟಿದ್ದಾರೆ. ಹೀಗಾಗಿ ಹೆಚ್ಚುವರಿಯಾಗಿ ವಸೂಲಾಗಿರುವ ಹಣವನ್ನು ತಮಗೆ ಯಾವಾಗ ಮರುಪಾವತಿಸಲಾಗುತ್ತದೆ ಎಂಬ ಪ್ರಶ್ನೆಯನ್ನು ಅವರು ಇದೀಗ ಮತ್ತೆ ಎತ್ತಿದ್ದಾರೆ.
