ಬೆಂಗಳೂರು, ಸೆ.9- ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಉಂಟಾದ ಕಾಗುಣಿತ ವ್ಯತ್ಯಾಸದಿಂದಾಗಿ ಭಾರತ ರತ್ನ ಪುರಸ್ಕೃತ ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.
ಹಳೆಯ ಮತದಾರರ ಪಟ್ಟಿ ಹಾಗೂ ಪ್ರಸ್ತುತ ಕರಡು ಪಟ್ಟಿಯಲ್ಲಿರುವ ಹೆಸರಿನ ಕಾಗುಣಿತದಲ್ಲಿ ವ್ಯತ್ಯಾಸ ಕಂಡುಬಂದಿರುವುದೇ ಸ್ವಯಂ ಹೆಸರು ಹೊಂದಾಣಿಕೆಯಾಗದಿರಲು ಕಾರಣ ಎಂದು ಗುರುತಿಸಲಾಗಿದೆ. ಹೆಸರಿನಲ್ಲಿ ಹೆಚ್ಚುವರಿ ‘ಎಫ್’ ಅಕ್ಷರ ಸೇರ್ಪಡೆಯಾಗಿರುವುದರಿಂದ ಈ ವ್ಯತ್ಯಾಸ ಉಂಟಾಗಿದೆ ಎಂದು ತಿಳಿದುಬಂದಿದೆ.ಈ ಹಿನ್ನೆಲೆಯಲ್ಲಿ ಮಲ್ಲೇಶ್ವರಂನಲ್ಲಿ ನಿಗದಿಪಡಿಸಿರುವ ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ 92 ವರ್ಷದ ಹಿರಿಯ ವಿಜ್ಞಾನಿ ಸಿ.ಎನ್.ಆರ್. ರಾವ್ ಅವರಿಗೆ ಸೂಚಿಸಲಾಗಿದೆ.
ಲಕ್ಷಾಂತರ ಮತದಾರರ ವಿವರಗಳ ಪರಿಶೀಲನೆ
ಚುನಾವಣಾ ಆಯೋಗದ ಎಸ್‌ಐಆರ್ ಪ್ರಕ್ರಿಯೆಯಡಿ ಹಿಂದಿನ ಮತದಾರರ ಪಟ್ಟಿಯಲ್ಲಿನ ವಿವರಗಳನ್ನು ಪ್ರಸ್ತುತ ದಾಖಲೆಗಳೊಂದಿಗೆ ಹೊಂದಾಣಿಕೆ ಮಾಡಲಾಗುತ್ತಿದೆ. ಹಳೆಯ ದಾಖಲೆಗಳು ಹಾಗೂ ಪ್ರಸ್ತುತ ಮಾಹಿತಿಯಲ್ಲಿ ಹೆಸರು ಅಥವಾ ಇತರ ವಿವರಗಳಲ್ಲಿ ವ್ಯತ್ಯಾಸ ಕಂಡುಬಂದರೆ, ಅಂತಹ ಮತದಾರರಿಗೆ ಸ್ಪಷ್ಟೀಕರಣ ನೀಡುವಂತೆ ನೋಟಿಸ್ ಜಾರಿಗೊಳಿಸಲಾಗುತ್ತಿದೆ.ಚುನಾವಣಾ ಆಯೋಗದ ಎಸ್‌ಐಆರ್ ಪೋರ್ಟಲ್‌ನಲ್ಲಿಯೂ ಹಳೆಯ ಎಸ್‌ಐಆರ್ ವಿವರಗಳು ಹಾಗೂ ಪ್ರಸ್ತುತ ವಿವರಗಳ ನಡುವೆ ಹೆಸರಿನ ಕಾಗುಣಿತದಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆಯನ್ನು ಉಲ್ಲೇಖಿಸಲಾಗಿದೆ.
ಕರ್ನಾಟಕದಲ್ಲಿ ಈ ಪ್ರಕ್ರಿಯೆಯಡಿ ಮ್ಯಾಪಿಂಗ್ ಆಗದಿರುವುದು ಸೇರಿದಂತೆ ವಿವಿಧ ಅಸಂಗತತೆಗಳಿಗಾಗಿ ಲಕ್ಷಾಂತರ ಮತದಾರರ ವಿವರಗಳನ್ನು ಪರಿಶೀಲಿಸಲಾಗುತ್ತಿದೆ. ರಾಜ್ಯದ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಪ್ರಕಾರ, ಇಂತಹ ಪ್ರಕರಣಗಳಲ್ಲಿ ಒಟ್ಟು 43,81,141 ನೋಟಿಸ್‌ಗಳನ್ನು ಸೃಷ್ಟಿಸಲಾಗಿದೆ.
ಪ್ರೊ. ಸಿ.ಎನ್.ಆರ್. ರಾವ್ ಯಾರು?
ಪ್ರೊ. ಸಿ.ಎನ್.ಆರ್. ರಾವ್ ಅವರು ಘನ-ಸ್ಥಿತಿ ಹಾಗೂ ರಚನಾತ್ಮಕ ರಸಾಯನಶಾಸ್ತ್ರ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಸಂಶೋಧನೆ ನಡೆಸಿ ವಿಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಅವರು, ಜಕ್ಕೂರಿನಲ್ಲಿ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್‌ಡ್ ಸೈಂಟಿಫಿಕ್ ರಿಸರ್ಚ್ (ಜೆಎನ್‌ಸಿಎಎಸ್‌ಆರ್) ಸಂಸ್ಥೆಯನ್ನು ಸ್ಥಾಪಿಸಿ, ಅದರ ಸ್ಥಾಪಕ ಅಧ್ಯಕ್ಷರಾಗಿದ್ದರು.
ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಎಚ್.ಡಿ. ದೇವೇಗೌಡ, ಐ.ಕೆ. ಗುಜ್ರಾಲ್ ಹಾಗೂ ಮನಮೋಹನ್ ಸಿಂಗ್ ಸೇರಿದಂತೆ ಐವರು ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ನೇತೃತ್ವ ವಹಿಸಿದ್ದ ಅವರು, ದೇಶದ ವಿಜ್ಞಾನ ನೀತಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ಪಡೆದ ಮೂರನೇ ವಿಜ್ಞಾನಿಯಾಗಿರುವ ಸಿ.ಎನ್.ಆರ್. ರಾವ್, ಪದ್ಮವಿಭೂಷಣ, ಪದ್ಮಶ್ರೀ ಹಾಗೂ ‘ಕರ್ನಾಟಕ ರತ್ನ’ ಸೇರಿದಂತೆ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕೇವಲ ಹೆಸರಿನ ಕಾಗುಣಿತ ವ್ಯತ್ಯಾಸದಿಂದ ದೇಶದ ಗಣ್ಯ ವಿಜ್ಞಾನಿಯೊಬ್ಬರಿಗೆ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
