Homeಬೆಂಗಳೂರುಇಬ್ಬರು ಕುಖ್ಯಾತ ಮನೆಗಳ್ಳರ ಸೆರೆ : ಒಬ್ಬನ ಮೇಲೆ 60, ಮತ್ತೊಬ್ಬನ ಮೇಲೆ 33 ಕೇಸ್

ಇಬ್ಬರು ಕುಖ್ಯಾತ ಮನೆಗಳ್ಳರ ಸೆರೆ : ಒಬ್ಬನ ಮೇಲೆ 60, ಮತ್ತೊಬ್ಬನ ಮೇಲೆ 33 ಕೇಸ್

ಬೆಂಗಳೂರು,ಸೆ.9- ಕುಖ್ಯಾತ ಇಬ್ಬರು ಮನೆಗಳ್ಳರನ್ನು ಬಾಣಸ ವಾಡಿ ಠಾಣೆ ಪೊಲೀಸರು ಬರೋಬ್ಬರಿ 300 ಕಿ.ಮೀ. ಚೇಸ್‌‍ ಮಾಡಿಕೊಂಡು ಹೋಗಿ ಬಂಧಿಸುವಲ್ಲಿ ಯಶಸ್ವಿಯಾಗಿ ದ್ದಾರೆ.ದೊಡ್ಡಬಳ್ಳಾಪುರದ ಗಂಗಾಧರ್‌ (40) ಹಾಗೂ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಬಸವರಾಜು (35) ಬಂಧಿತ ಮನೆಗಳ್ಳರು.

ಈ ಇಬ್ಬರು ಆರೋಪಿಗಳಿಂದ 77.50 ಲಕ್ಷ ರೂ. ಮೌಲ್ಯದ 470 ಗ್ರಾಂ ಚಿನ್ನಾಭರಣ, 886 ಗ್ರಾಂ ಬೆಳ್ಳಿ ವಸ್ತುಗಳು, 3 ಲಕ್ಷ ನಗದು, ಕಾರನ್ನು ವಶಪಡಿಸಿಕೊಂಡಿದ್ದಾರೆ.ಪ್ರಮುಖ ಆರೋಪಿ ಗಂಗಾಧರ್‌ ಮೇಲೆ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಬರೋಬ್ಬರಿ 60 ಪ್ರಕರಣಗಳು ದಾಖಲಾಗಿದ್ದರೆ, ಬಸವರಾಜು ವಿರುದ್ಧ 33 ಪ್ರಕರಣಗಳು ದಾಖಲಾಗಿವೆ. ಇವರಿಬ್ಬರದು ಕಾಯಕವೇ ಮನೆಗಳ್ಳತನ. ಇವರಿಬ್ಬರೂ ರಾತ್ರಿ ವೇಳೆ ಕಾರಿನಲ್ಲಿ ಜಾಲಿಯಾಗಿ ಸುತ್ತಾಡುತ್ತಾ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕನ್ನ ಹಾಕಿ ಹಣ, ಆಭರಣಗಳನ್ನು ದೋಚಿ ಮತ್ತೊಂದು ಸ್ಥಳಕ್ಕೆ ಪರಾರಿಯಾಗುತ್ತಿದ್ದರು.

ಬಾಣಸವಾಡಿಯ ಎಚ್‌ಬಿಆರ್‌ ಲೇಔಟ್‌ನ ನಿವಾಸಿಯೊಬ್ಬರು ಕುಟುಂಬ ಸಮೇತರಾಗಿ ಊಟ ಮಾಡಲು ಹೊರಗೆ ಹೋಗಿದ್ದರು. ವಾಪಸ್ಸು ಬರುವಷ್ಟರಲ್ಲಿ ಅವರ ಮನೆಯ ಮುಂಬಾಗಿಲು ಮುರಿದಿದ್ದು ಕಂಡುಬಂದಿದೆ.ಒಳಗೆ ಹೋಗಿ ನೋಡಿದಾಗ ಕೊಠಡಿಯ ವಾರ್ಡ್‌ರೂಬ್‌ ತೆರೆದಿದ್ದು, 14 ಲಕ್ಷ ಹಣವಿದ್ದ ಬ್ಯಾಗ್‌ ಇರಲಿಲ್ಲ. ಈ ಬಗ್ಗೆ ಅವರು ತಕ್ಷಣ ಬಾಣಸವಾಡಿ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ.


ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆಹಾಕಿ, ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿ ಖಚಿತ ಮಾಹಿತಿ ಮೇರೆಗೆ ಕಲ್ಯಾಣನಗರ ಸರ್ವೀಸ್‌‍ ರಸ್ತೆ ಬಳಿ 34 ಸಾವಿರ ಹಣ ಹಾಗೂ ಕಾರಿನ ಸಮೇತ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ನಂತರ ಅವರಿಬ್ಬರನ್ನೂ ವಿಚಾರಣೆಗೊಳಪಡಿಸಿದಾಗ ಆಂಧ್ರಪ್ರದೇಶ ಹಾಗೂ ತಮಿಳುನಾಡು ಮತ್ತು ನಗರದ ವಿವಿಧ ಕಡೆಗಳಲ್ಲಿ ಚಿನ್ನಾಭರಣ ಹಾಗೂ ಬೆಳ್ಳಿವಸ್ತುಗಳು, ಹಣ ಕಳವು ಮಾಡಿರುವುದಾಗಿ ಬಾಯ್ಬಿಟ್ಟಿ ದ್ದಾರೆ.

ಕಳವು ಮಾಡಿದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಜ್ಯುವೆಲ್ಲರಿ ಅಂಗಡಿಗಳಲ್ಲಿ ಮಾರಾಟ ಮಾಡಿರುವುದಾಗಿ ಹಾಗೂ ಹಣವನ್ನು ತನ್ನ ವಾಸದ ಮನೆಯಲ್ಲಿ ಇಟ್ಟಿರುವುದಾಗಿ ಆರೋಪಿ ತಿಳಿಸಿದ್ದಾನೆ.ಆರೋಪಿಗಳ ಮಾಹಿತಿಯಂತೆ ಜ್ಯುವೆಲ್ಲರಿ ಅಂಗಡಿಗಳಿಂದ ಹಾಗೂ ಆತನ ವಾಸದ ಮನೆಯಿಂದ ಒಟ್ಟು 470 ಗ್ರಾಂ ಚಿನ್ನಾಭರಣ, 886 ಗ್ರಾಂ ಬೆಳ್ಳಿವಸ್ತುಗಳು 3 ಲಕ್ಷ ಹಣ ಹಾಗೂ ಕಾರನ್ನು ವಶಪಡಿಸಿಕೊಳ್ಳುವಲ್ಲಿ ಇನ್‌ಸ್ಪೆಕ್ಟರ್‌ ಸುದರ್ಶನ್‌ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.

ಆರೋಪಿಗಳಿಬ್ಬರ ಬಂಧನದಿಂದ ಬಾಣಸವಾಡಿ ಹಾಗೂ ಹೆಣ್ಣೂರು ಪೊಲೀಸ್‌‍ ಠಾಣೆಯ ತಲಾ 2 ಪ್ರಕರಣ, ಮೈಕೋ ಲೇಔಟ್‌, ಮಾದನಾಯಕನಹಳ್ಳಿ ಹಾಗೂ ಕೊಳ್ಳೇಗಾಲ ಟೌನ್‌ ಪೊಲೀಸ್‌‍ ಠಾಣೆಯ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು 7 ಪ್ರಕರಣಗಳು ಪತ್ತೆಯಾಗಿವೆ.

RELATED ARTICLES
spot_img

Latest News