ಹಾಸನ,ಆ.23- ಹ್ಯಾಂಡ್‌ಬ್ರೀಕ್ ಹಾಕದೆ ಹಾಗೂ ಕೀ ತೆಗೆಯದೆ ರಸ್ತೆಯಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್‌ನ ಕೀ ಅನ್ನು ಬಾಲಕನೊಬ್ಬ ಆಕಸಿಕವಾಗಿ ತಿರುಗಿಸಿದ ಪರಿಣಾಮ ಟ್ರ್ಯಾಕ್ಟರ್ ಮುಂದಕ್ಕೆ ಚಲಿಸಿ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಹೊಳೆನರಸೀಪುರದಲ್ಲಿ ನಡೆದಿದೆ. ನಗರದ ಗೌಡರ ಬೀದಿಯ ಯಶವಂತ್ ಮೃತಪಟ್ಟ ದುರ್ದೈವಿ.
ಮನೆ ನಿರ್ಮಾಣ ಕಾಮಗಾರಿಗೆ ಸೆಂಟರಿಂಗ್ ಸಾಮಗ್ರಿ ತಂದು ಮನೆಯ ಮುಂಭಾಗದ ರಸ್ತೆಯಲ್ಲಿ ಟ್ರ್ಯಾಕ್ಟರ್ ನಿಲ್ಲಿಸಿ ಚಾಲಕ ಹ್ಯಾಂಡ್‌ಬ್ರೀಕ್ ಹಾಕದೆ ಹಾಗೂ ಕೀ ತೆಗೆಯದೆ ಟ್ರ್ಯಾಕ್ಟರ್‌ನಿಂದ ಇಳಿದು ಹೋಗಿದ್ದ ಎನ್ನಲಾಗಿದೆ.
ಈ ವೇಳೆ ಬಾಲಕನೊಬ್ಬ ಟ್ರ್ಯಾಕ್ಟರ್ ಮೇಲೆ ಹತ್ತಿ ಆಟವಾಡುತ್ತಿದ್ದಾಗ ಆಕಸಿಕವಾಗಿ ಕೀ ತಿರುಗಿಸಿದಾಗ ಟ್ರ್ಯಾಕ್ಟರ್ ಮುಂದಕ್ಕೆ ಚಲಿಸಿ ಅಲ್ಲಿದ್ದ ಯಶವಂತ್ ಅವರಿಗೆ ಡಿಕ್ಕಿ ಹೊಡೆದಿದೆ. ತಲೆ ಹಾಗೂ ಎದೆಗೆ ಗಾಯಗೊಂಡ ಅವರನ್ನು ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.ಈ ಸಂಬಂಧ ಹೊಳೆನರಸೀಪುರ ನಗರ ಠಾಣೆಯಲ್ಲಿ ಟ್ರ್ಯಾಕ್ಟರ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
