Friday, November 22, 2024
Homeರಾಷ್ಟ್ರೀಯ | National'ಒಂದು ದೇಶ, ಒಂದು ಚುನಾವಣೆ' ಕುರಿತ ಅಧ್ಯಯನ ವರದಿ ರಾಷ್ಟ್ರಪತಿಗಳಿಗೆ ಸಲ್ಲಿಕೆ

‘ಒಂದು ದೇಶ, ಒಂದು ಚುನಾವಣೆ’ ಕುರಿತ ಅಧ್ಯಯನ ವರದಿ ರಾಷ್ಟ್ರಪತಿಗಳಿಗೆ ಸಲ್ಲಿಕೆ

ನವದೆಹಲಿ,ಮಾ.14- ಒಂದು ದೇಶ, ಒಂದು ಚುನಾವಣೆ ಧ್ಯೇಯಕ್ಕೆ ಸಂಬಂಧಪಟ್ಟಂತೆ ಅಧ್ಯಯನ ನಡೆಸಿದ, ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತನ್ನ ವರದಿ ಸಲ್ಲಿಸಿದೆ. 191 ದಿನಗಳ ಕಾಲ ತಜ್ಞರು ಬಾಧ್ಯಸ್ಥರೊಂದಿಗೆ ಚರ್ಚೆ ನಡೆಸಿ, ವಿವಿಧ ಸಂಶೋಧನೆಗಳನ್ನು ನಡೆಸಿದ ಸಮಿತಿ ಕೊನೆಗೆ 18,626 ಪುಟಗಳ ಸಮಗ್ರ ವರದಿಯನ್ನು ರಾಷ್ಟ್ರಪತಿ ಭವನದಲ್ಲಿಂದು ರಾಷ್ಟ್ರಪತಿಯವರಿಗೆ ಸಲ್ಲಿಸಿದೆ.

ಸಮಿತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ, ರಾಜ್ಯಸಭೆಯ ವಿರೋಧಪಕ್ಷದ ಮಾಜಿ ನಾಯಕ ಗುಲಾಮ್ ನಬಿ ಆಜಾದ್, ಕೇಂದ್ರ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎನ್.ಕೆ.ಸಿಂಗ್, ಲೋಕಸಭೆಯ ಮಾಜಿ ಕಾರ್ಯದರ್ಶಿ ಸುಭಾಷ್ ಕಶ್ಯಪ್, ಹಿರಿಯ ವಕೀಲ ಹರೀಶ್ ಸಾಳ್ವೆ ಸದಸ್ಯರಾಗಿದ್ದು, ಕೇಂದ್ರದ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್‍ವಾಲ್ ವಿಶೇಷ ಆಹ್ವಾನಿತರಾಗಿದ್ದರು.

ಸಮಿತಿಯಲ್ಲಿ ಸದಸ್ಯರಾಗಿದ್ದ ಲೋಕಸಭೆಯ ಕಾಂಗ್ರೆಸ್ ನಾಯಕ ಅೀಧಿರ್ ರಂಜನ್ ಚೌಧರಿ ಸಮಿತಿಯನ್ನು ಬಹಿಷ್ಕರಿಸಿದ್ದರು. ಕಳೆದ ವರ್ಷದ ಸೆ.2 ರಂದು ಕೇಂದ್ರ ಸರ್ಕಾರ ಉನ್ನತ ಸಮಿತಿಯನ್ನು ರಚಿಸಿತ್ತು. ಇದನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿತ್ತು. ಈಗಾಗಲೇ ಒಂದು ದೇಶ, ಒಂದು ಚುನಾವಣೆ ಎಂಬ ಸೈದ್ಧಾಂತಿಕ ನಿಲುವಿಗೆ ಪೂರಕವಾಗಿ ಶಿಫಾರಸ್ಸುಗಳು ಕ್ರೂಢೀಕರಣಗೊಂಡಿವೆ ಮತ್ತು ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ಚಾಲನೆಗೊಂಡಿವೆ. ಉನ್ನತ ಸಮಿತಿಯ ರಚನೆ ಕಣ್ಣೊರೆಸುವ ತಂತ್ರ ಮಾತ್ರ ಎಂದು ಅೀಧಿರ್ ರಂಜನ್ ಚೌಧರಿ ಟೀಕಿಸಿ ಸಭೆಯನ್ನು ಬಹಿಷ್ಕರಿಸಿದ್ದರು.

ಅದರ ಹೊರತಾಗಿ ಉಳಿದ ಸದಸ್ಯರು ಸಮಿತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕೆಲಸ ಮಾಡಿದ್ದಾರೆ. 22ನೇ ಕಾನೂನು ಆಯೋಗ ಒಂದು ದೇಶ, ಒಂದು ಚುನಾವಣೆ ವಿಚಾರವನ್ನು ಸವಿಸ್ತಾರವಾಗಿ ಪರಿಶೀಲನೆ ನಡೆಸಿದೆ. 2029 ರ ವೇಳೆಗೆ ಲೋಕಸಭೆ ಹಾಗೂ ಎಲ್ಲಾ ರಾಜ್ಯಗಳಿಗೂ ಏಕಕಾಲಕ್ಕೆ ಸಾರ್ವತ್ರಿಕ ಚುನಾವಣೆ ನಡೆಸಬಹುದು ಎಂದು ಕಾನೂನು ಆಯೋಗ ಈ ಮೊದಲು ಶಿಫಾರಸ್ಸು ಮಾಡಿತ್ತು.

ತನ್ನ ಸಲಹೆಯನ್ನು ಕಾನೂನು ಆಯೋಗ ರಾಮನಾಥ್ ಕೋವಿಂದ್‍ರ ಸಮಿತಿ ಮುಂದೆಯೂ ಪ್ರತಿಪಾದಿಸಿದೆ. ಇಂದು ಸಲ್ಲಿಕೆಯಾಗಿರುವ ಅಂತಿಮ ವರದಿ ಕಾನೂನು ಸಚಿವಾಲಯಕ್ಕೆ ಶೀಘ್ರವಾಗಿ ರವಾನೆಯಾಗುವ ನಿರೀಕ್ಷೆಗಳಿವೆ.

RELATED ARTICLES

Latest News