ಬೆಂಗಳೂರು, ಮಾ.14-ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಹಗರಣದ ತನಿಖೆಯನ್ನು ವಿಶೇಷ ತನಿಖಾ ದಳ(ಎಸ್ ಐಟಿ)ಕ್ಕೆ ವಹಿಸಲು ಇಂದು ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಪಿಎಸ್‍ಐ ನೇಮಕಾತಿ ಹಗರಣದ ತನಿಖೆ ನಡೆಸಿದ ನ್ಯಾ.ಬಿ.ವೀರಪ್ಪ ನೇತೃತ್ವದ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಮತ್ತೊಂದು ತನಿಖೆ ನಡೆಸಲು ಶಿಫಾರಸ್ಸು ಮಾಡಲಾಗಿದೆ. ಅದರಂತೆ ಎಸ್‍ಐಟಿ ತನಿಖೆ ನಡೆಸಲು ಸಂಪುಟ ಸಭೆ ತೀರ್ಮಾನಿಸಿದೆ ಎಂದು ಹೇಳಿದರು.
ಪಿಎಸ್‍ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದ ಕೆಲವರು ಸಮಿತಿ ನೀಡಿದ್ದ ಸಮನ್ಸ್‍ಗೆ ಹಾಜರಾಗಿ ತಮ್ಮ ಹೇಳಿಕೆ ನೀಡಿಲ್ಲ. ಸಮಿತಿಯು 113 ಜನ ಆರೋಪಿಗಳನ್ನು ಗುರುತಿಸಿದೆ. ಖಾಸಗಿ ವ್ಯಕ್ತಿಗಳು, ಮಧ್ಯವರ್ತಿಗಳು, ಸರ್ಕಾರಿ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾದ ಆರೋಪವಿದೆ. ಭ್ರಷ್ಟಾಚಾರ, ಕ್ರಿಮಿನಲ್ ಆರೋಪವೂ ಇದೆ. ಈಗಾಗಿ ಎಸ್‍ಐಟಿ ತನಿಖೆ ಸೂಕ್ತ ಎಂಬ ನಿರ್ಧಾರ ಮಾಡಲಾಯಿತು. ಸಿಐಡಿ ಕೂಡ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ 17 ಪ್ರಕರಣಗಳ ತನಿಖೆಯನ್ನು ನಡೆಸುತ್ತಿದೆ ಎಂದರು.
ಕೆಂಪೇಗೌಡ ಬಡಾವಣೆ ಸೇರಿದಂತೆ 2016ರಿಂದ 2018ರ ನಡುವೆ ಬಿಡಿಎನಿಂದ ನಿವೇಶನ ಹಂಚಿಕೆಯಾಗಿ ಕಂತು ಪಾವತಿಸಲಾಗದವರಿಗೆ ಮೂರು ತಿಂಗಳ ಕಾಲಾವಕಾಶ ನೀಡಿ ಶೇ.12ರ ಬಡ್ಡಿದರದಲ್ಲಿ ಕಂತು ಪಾವತಿಸಿ ಲೀಸ್ ಕಂ ಸೇಲ್ ಡೀಡ್ ಮಾಡಿಕೊಳ್ಳಲು ಅವಕಾಶ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಬೆಂಗಳೂರು ಅರಮನೆ ಮೈದಾನದ ಎರಡೂ ಕಡೆಯ ರಸ್ತೆ ಅಗಲೀಕರಣಕ್ಕೆ 2006-07ರಲ್ಲಿ ಭೂಸ್ವಾಧೀನ ಮಾಡಿಕೊಂಡಿದ್ದು, ಸುಮಾರು ಹದಿನೈದುವರೆ ಎಕರೆಗೆ ಟಿಡಿಆರ್ ನೀಡಲು ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಟಿಡಿಆರ್ ನೀಡಿಲ್ಲ ಎಂಬ ವಿಚಾರದ ಸುಪ್ರೀಂಕೋರ್ಟ್‍ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಮುಂದಿನ ವಾರ ವಿಚಾರಣೆಗೆ ಬರಲಿದ್ದು, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಖುದ್ದು ಹಾಜರಿಗೆ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.
ಭುವನೇಶ್ವರಿ ಪ್ರತಿಮೆ:
ವಿಧಾನಸೌಧದ ಪಶ್ಚಿಮ ದ್ವಾರದ ಮುಂಭಾಗದ ರಸ್ತೆಯ ಎಡಭಾಗದಲ್ಲಿ ನಾಡದೇವತೆ ಭುನೇಶ್ವರಿ ಕೈಯಲ್ಲಿ ಹಳದಿ-ಕೆಂಪು ಧ್ವಜ ಹಿಡಿದಿರುವ ಪ್ರತಿಮೆ ನಿರ್ಮಾಣ ಮಾಡಲಾಗುವುದು. ಇದಕ್ಕೆ 23 ಕೋಟಿ ರೂ. ವೆಚ್ಚವಾಗಲಿದೆ. ತಕ್ಷಣಕ್ಕೆ ಕಾಮಗಾರಿ ಆರಂಭಿಸಲು ತೀರ್ಮಾನಿಸಲಾಗಿದೆ ಎಂದರು.
ಹೆಬ್ಬಾಳದಿಂದ ಜೆಪಿನಗರದ ವರಗೆ ಇರುವ ಹೊರ ವರ್ತುಲ ರಸ್ತೆಯಲ್ಲಿ ಅಂದರೆ, ಹೆಬ್ಬಾಳ-ತುಮಕೂರು ರಸ್ತೆ- ಮಾಗಡಿ ರಸ್ತೆ- ಮೈಸೂರು ರಸ್ತೆ ಮಾರ್ಗವಾಘಿ 32.15 ಕಿ.ಮೀ. ಮೆಟ್ರೋ ಮೂರನೇ ಹಂತದ ಮಾರ್ಗ ನಿರ್ಮಾಣ ಮಾಡಲು ತೀರ್ಮಾನಿಸಲಾಯಿತು. ಇದಕ್ಕೆ 15, 611 ಕೋಟಿ ರೂ. ವೆಚ್ಚವಾಗಲಿದೆ. ಅಲ್ಲದೆ, ವಿಜಯನಗರದ ಹೊಸಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆವರೆಗೆ ಹನ್ನೆರಡುವರೆ ಕಿ.ಮೀ. ಉದ್ದದ ಮತ್ತೊಂದು ಮೆಟ್ರೋ ಮಾರ್ಗ ನಿರ್ಮಿಸಲು ಸಮ್ಮಿತಿಸಲಾಗಿದೆ. ಇದಕ್ಕೆ ಶೇ.80-85ರಷ್ಟು ರಾಜ್ಯ ಸರ್ಕಾರ ಅನುದಾನ ನೀಡಲಿದ್ದು, ಉಳಿದ ಹಣವನ್ನು ಕೇಂದ್ರ ಸರ್ಕಾರ ನೀಡಲಿದೆ. ಈ ಯೋಜನೆಯನ್ನು 2028ರ ವೇಳೆಗೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಎನ್ ಜಿಎಫ್‍ನ ಸುಮಾರು 65 ಎಕರೆ ಪ್ರದೇಶದಲ್ಲಿ ಟ್ರೀ ಪಾರ್ಕ್ ನಿರ್ಮಿಸಲಾಗುವುದು. ಅಲ್ಲಿ ವಾಕಿಂಗ್ ಪಥ, ಸೈಕಲ್ ಪಥ, ಆಟದ ಮೈದಾನ ನಿರ್ಮಿಸಲಾಗುವುದು ಇದಕ್ಕೆ 11 ಕೋಟಿ ರೂ. ವೆಚ್ಚವಾಗಲಿದೆ ಎಂದು ಹೇಳಿದರು.ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಸದಾಗಿ 33 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 132 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವುದು ಹಾಗೂ 40 ಕೋಟಿ ರೂ. ವೆಚ್ಚದಲ್ಲಿ ಪ್ರಾಥಮಿ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಮೈಸೂರಿನ ಮಹರಾಣಿ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರಿಗೆ 170 ಕೋಟಿ ರೂ. ವೆಚ್ಚದಲ್ಲಿ ಹೊಸ ಹಾಸ್ಟೆಲ್ ನಿರ್ಮಿಸಲಾಗುವುದು. ಕೃಷಿ ಕ್ಷೇತ್ರದ ನವೋದ್ಯಮಕ್ಕೆ ಉತ್ತೇಜನ ನೀಡಲು 67.5 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಅಗ್ರಿಇನೋವೇಷನ್ ಸೆಂಟರ್ ಸ್ಥಾಪಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಅವರು ವಿವರಿಸಿದರು.