Saturday, April 27, 2024
Homeರಾಜ್ಯಚುನಾವಣೆ ನಂತರ ಬೆಂಗಳೂರಿಗರಿಗೆ ಕಾದಿದೆ 'ವಾಟರ್ ಶಾಕ್" : ಡಿಕೆಶಿ ಸುಳಿವು

ಚುನಾವಣೆ ನಂತರ ಬೆಂಗಳೂರಿಗರಿಗೆ ಕಾದಿದೆ ‘ವಾಟರ್ ಶಾಕ್” : ಡಿಕೆಶಿ ಸುಳಿವು

ಬೆಂಗಳೂರು,ಮಾ.14- ಬಿಡಬ್ಲ್ಯೂಎಸ್ಎಸ್ಬಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಲೋಕಸಭೆ ಚುನಾವಣೆ ಬಳಿಕ ನೀರಿನ ದರ ಏರಿಕೆಗೆ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ವಿಧಾನಸೌಧದ ಮೆಟ್ಟಿಲುಗಳ ಬಳಿ ನೀರು ಉಳಿಸಿ, ಬೆಂಗಳೂರು ಬೆಳೆಸಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜಕೀಯ ಕಾರಣಗಳಿಗಾಗಿ ಕಳೆದ 10-11 ವರ್ಷಗಳಿಂದಲೂ ನೀರಿನ ದರ ಪರಿಷ್ಕರಣೆಯಾಗಿಲ್ಲ.

ಬಿಡಬ್ಲ್ಯೂಎಸ್ಎಸ್ಬಿಯಲ್ಲಿ ವೇತನ ಹೆಚ್ಚಳ ಸೇರಿದಂತೆ ಹಲವು ಕಾರಣಗಳಿಗಾಗಿ ಖರ್ಚುಗಳು ಜಾಸ್ತಿಯಾಗಿವೆ. ಅದನ್ನು ಸಾರ್ವಜನಿಕರಿಂದ ನಾವು ಪಡೆದುಕೊಳ್ಳುತ್ತಿಲ್ಲ. ಕೆಎಸ್ಆರ್ಟಿಸಿಯಲ್ಲಿ ಡೀಸೆಲ್ ದರ ಹೆಚ್ಚಾಗುತ್ತಿದ್ದಂತೆ ಪ್ರಯಾಣ ದರ ಏರಿಕೆಯಾಗಿದೆ. ಆದರೆ ನೀರಿನ ವಿಚಾರದಲ್ಲಿ ಖರ್ಚು ಹೆಚ್ಚಾದರೂ ದರ ಪರಿಷ್ಕರಣೆಯಾಗುತ್ತಿಲ್ಲ. ಲೋಕಸಭೆ ಚುನಾವಣೆ ಬಳಿಕ ಈ ನಿಟ್ಟಿನಲ್ಲಿ ತಾವು ಮಹತ್ವದ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಇಂದು ಬಿಡಬ್ಲ್ಯೂಎಸ್ಎಸ್ಬಿಯಿಂದ 4 ಆ್ಯಪ್ಗಳನ್ನು ಸಾರ್ವಜನಿಕರಿಗೆ ಸಮರ್ಪಣೆ ಮಾಡಲಾಗಿದೆ. ಅಂತರ್ಜಲವನ್ನು ಆಧರಿಸಿ ಹೊಸ ಬೋರ್ವೆಲ್ಗಳಿಗೆ ಅನುಮತಿ ನೀಡುವ ಅಂತರ್ಜಲ , ನೀರಿನ ಸೋರಿಕೆಯನ್ನು ತಪ್ಪಿಸಲು ಜಲಮಿತ್ರ, ಸಂಸ್ಕರಿಸಿದ ನೀರಿನ ಹಂಚಿಕೆಗಾಗಿ ಜಲಸ್ನೇಹಿ, ನೀರಿನ ಮಿತವ್ಯಯಕ್ಕೆ ಜಲಸಂರಕ್ಷಕ ಎಂಬ ನಾಲ್ಕು ಆ್ಯಪ್ಗಳನ್ನು ಲೋಕಾರ್ಪಣೆ ಮಾಡಲಾಗಿದೆ.

ಬಿಡಬ್ಲ್ಯೂಎಸ್ಎಸ್ಬಿಯಿಂದ ಭೀಕರ ಬರ ಪರಿಸ್ಥಿತಿ ನಡುವೆಯೂ ಬೆಂಗಳೂರು ನಾಗರಿಕರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. 6,900 ಬೋರ್ವೆಲ್ಗಳು ಬತ್ತಿ ಹೋಗಿವೆ. ಇರುವ 7,000 ಬೋರ್ವೆಲ್ಗಳನ್ನು ಬಳಸಿಕೊಂಡು ನೀರು ಪೂರೈಸುತ್ತಿದ್ದೇವೆ. ಟ್ಯಾಂಕರ್ಗಳನ್ನು ವಶಕ್ಕೆ ತೆಗೆದುಕೊಂಡು ದಂಧೆಗೆ ಕಡಿವಾಣ ಹಾಕಲಾಗಿದೆ. ಆದರೂ ಕೆಲವರು ಚೇಷ್ಟೆಗಳನ್ನು ಮಾಡುತ್ತಿರುವುದು ಕಂಡುಬಂದಿದೆ ಎಂದು ಹೇಳಿದರು.

ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳ ಜವಾಬ್ದಾರಿ ನಿರ್ವಹಣೆ ತಮಗೆ ಸಮಾಧಾನ ತಂದಿದೆ. ದೂರದೃಷ್ಟಿಯಲ್ಲಿದ್ದುಕೊಂಡು ನೀರನ್ನು ಮುಂದಿನ ಪೀಳಿಗೆಗೂ ಉಳಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು.
ಚುನಾವಣೆ ಕಾಲವಾಗಿರುವುದರಿಂದ ರಾಜಕೀಯಕ್ಕಾಗಿ ವಿರೋಧಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ತಮಿಳುನಾಡಿಗೆ ಕಾವೇರಿ ನೀರು ಬಿಡಲಾಗಿದೆ ಎಂಬ ವದಂತಿಯನ್ನು ಹರಡುತ್ತಿದ್ದಾರೆ. ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.

RELATED ARTICLES

Latest News