Friday, May 24, 2024
Homeಬೆಂಗಳೂರುಜ್ಯುವೆಲರಿ ಅಂಗಡಿಗೆ ನುಗ್ಗಿ ಫೈರಿಂಗ್, ಹಾಡಹಗಲೇ ಸಿನಿಮಾ ಸ್ಟೈಲ್ ನಲ್ಲಿ ದರೋಡೆ ಯತ್ನ

ಜ್ಯುವೆಲರಿ ಅಂಗಡಿಗೆ ನುಗ್ಗಿ ಫೈರಿಂಗ್, ಹಾಡಹಗಲೇ ಸಿನಿಮಾ ಸ್ಟೈಲ್ ನಲ್ಲಿ ದರೋಡೆ ಯತ್ನ

ಬೆಂಗಳೂರು, ಮಾ.14- ಹಾಡಹಗಲೇ ನಾಲ್ವರು ದರೋಡೆಕೋರರು ಜ್ಯುವೆಲರಿ ಅಂಗಡಿಗೆ ನುಗ್ಗಿ ದರೋಡೆಗೆ ವಿಫಲ ಯತ್ನ ನಡೆಸಿ ಮಾಲೀಕ ಸೇರಿದಂತೆ ಇಬ್ಬರ ಮೇಲೆ ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜ್ಯವೆಲರಿ ಅಂಗಡಿ ಮಾಲೀಕ ಅಪ್ಪುರಾಮ್ ಮತ್ತು ಸಂಬಂಧಿ ಅಂದಾರಾಮ್ ಗಾಯಗೊಂಡಿದ್ದಾರೆ.

ಇಲ್ಲಿನ ದೇವಿ ನಗರದಲ್ಲಿರುವ ಲಕ್ಷ್ಮೀ ಬ್ಯಾಂಕರ್ಸ್ ಅ್ಯಂಡ್ ಜ್ಯವೆಲರ್ಸ್ ಅಂಗಡಿ ಬಾಗಿಲು ತೆಗೆದು ಇಂದು ಬೆಳಗ್ಗೆ ಎಂದಿನಂತೆ ಮಾಲೀಕ ಹಾಗೂ ಮತ್ತಿಬ್ಬರು ಅಂಗಡಿಯಲ್ಲಿದ್ದರು. ಬೆಳಗ್ಗೆ 11.15ರ ಸುಮಾರನಲ್ಲಿ ನಾಲ್ವರು ದರೋಡೆಕೋರರು ಎರಡು ಬೈಕ್ಗಳಲ್ಲಿ ಈ ಜ್ಯವೆಲರಿ ಅಂಗಡಿಗೆ ಬಂದಿದ್ದು. ಇಬ್ಬರು ಹೊರಗೆ ಕಾವಲು ಕಾಯುತ್ತಾ ನಿಂತರೆ, ಮತ್ತಿಬ್ಬರು ಅಂಗಡಿ ಒಳಗೆ ನುಗ್ಗಿ ಪಿಸ್ತೂಲು ತೋರಿಸಿ ಬೆದರಿಸಿ ಚಿನ್ನಾಭರಣ ದರೋಡೆಗೆ ಯತ್ನಿಸಿದ್ದಾರೆ.

ಅಂಗಡಿಯಲ್ಲಿದ್ದ ಮಾಲೀಕ ಹಾಗೂ ಅವರ ಸಂಬಂಧಿ ಕಿರುಚಾಡಿ ಪ್ರತಿರೋಧ ವ್ಯಕ್ತಪಡಿಸಿದಾಗ ಯಾರಾದರೂ ಬರಬಹುದೆಂಬ ಗಾಬರಿಯಿಂದ ದರೋಡೆಕೋರರು ಪಿಸ್ತೂಲಿನಿಂದ ಇಬ್ಬರ ಮೇಲೆಯೂ ಮೂರ್ನಾಲ್ಕು ಸುತ್ತು ಗುಂಡು ಹಾರಿಸಿ ಪಿಸ್ತೂಲನ್ನು ಸ್ಥಳದಲ್ಲೇ ಎಸೆದು ಪರಾರಿಯಾಗಿದ್ದಾರೆ. ಗುಂಡೇಟು ಒಬ್ಬರ ಹೊಟ್ಟೆಗೆ ತಾಗಿದರೆ, ಮತ್ತೊಂದು ಗುಂಡು ಮತ್ತೊಬ್ಬರ ಕಾಲಿಗೆ ತಗುಲಿದ ಪರಿಣಾಮ ಗಂಭೀರ ಗಾಯಗೊಂಡಿದ್ದಾರೆ.

ತಕ್ಷಣ ಅಕ್ಕಪಕ್ಕದ ಅಂಗಡಿಯವರು ನೆರವಿಗೆ ಧಾವಿಸಿ ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸುದ್ದಿ ತಿಳಿದು ಕೊಡಿಗೇಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ನೆರೆಹೊರೆಯ ಅಂಗಡಿಯ ವರಿಂದ ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಆಗಮಿಸಿ ಪರಿಶೀಲಿಸಿವೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಜ್ಯುವೆಲರಿ ಅಂಗಡಿ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಟಿವಿಗಳನ್ನು ಪರಿಶೀಲಿಸಿ, ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ. ಹಾಡಹಗಲೇ ಪಿಸ್ತೂಲಿನಿಂದ ದಾಳಿಮಾಡಿರುವುದರಿಂದ ಅಕ್ಕಪಕ್ಕದ ಅಂಗಡಿಯವರು, ಸ್ಥಳೀಯರು ಆತಂಕಗೊಂಡಿದ್ದಾರೆ.

RELATED ARTICLES

Latest News