Sunday, April 28, 2024
Homeರಾಜಕೀಯದಿನಾಂಕ ಘೋಷಣೆ ಮುನ್ನವೇ ರಂಗೇರಿದ ಲೋಕಸಭಾ ರಣಕಣ

ದಿನಾಂಕ ಘೋಷಣೆ ಮುನ್ನವೇ ರಂಗೇರಿದ ಲೋಕಸಭಾ ರಣಕಣ

ಬೆಂಗಳೂರು,ಮಾ.14- ಲೋಕಸಭಾ ಚುನಾವಣೆ ವೇಳಾಪಟ್ಟಿ ಘೋಷಣೆಗೂ ಮುನ್ನವೇ ಅಭ್ಯರ್ಥಿಗಳ ಹೆಸರುಗಳು ಅಧಿಕೃತವಾಗಿ ಪ್ರಕಟಗೊಳ್ಳುವ ಮೂಲಕ ಪ್ರಜಾಪ್ರಭುತ್ವದ ಸಮರಾಂಗಣ ಕಾವೇರಲಾರಂಭಿಸಿದೆ. ಕಾಂಗ್ರೆಸ್ ಮಾ.8 ರಂದು 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ರಾಜ್ಯದಲ್ಲಿ ಮೊದಲ ಬಾರಿಗೆ ಅಖಾಡಕ್ಕೆ ಹೆಜ್ಜೆ ಇಟ್ಟಿತ್ತು. ಬಿಜೆಪಿ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ನಿನ್ನೆ 20 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿ ರಣಕಹಳೆ ಊದಿದೆ. ಕಾಂಗ್ರೆಸ್ನ 7 ಮಂದಿ ಪ್ರಕಟಿತ ಹುರಿಯಾಳುಗಳಿಗೆ ಬಿಜೆಪಿ ಠಕ್ಕರ್ ನೀಡಿದೆ. ತುಮಕೂರು ಕ್ಷೇತ್ರದಿಂದ ಕಾಂಗ್ರೆಸ್ ಎಸ್.ಪಿ. ಮುದ್ದಹನುಮೇಗೌಡರನ್ನು ಕಣಕ್ಕಿಳಿಸಿದರೆ, ಬಿಜೆಪಿ ಮಾಜಿ ಸಚಿವ ವಿ.ಸೋಮಣ್ಣರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ.

ಕಲ್ಪತರು ನಾಡಿನಲ್ಲಿ ಮತ್ತೆ ಹೊರಗಿ ನಿಂದ ಅಭ್ಯರ್ಥಿಯೊಬ್ಬರು ಜಿಲ್ಲಾ ಅಖಾಡ ಪ್ರವೇಶಿಸಿದ್ದಾರೆ. ಸೋಮಣ್ಣ ಸಿದ್ದಗಂಗಾ ಮಠದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಕ್ರಿಯವಾಗಿ ಭಾಗವಹಿಸುವ ಮೂಲಕ ಜನಪ್ರಿಯಗೊಂಡಿದ್ದರು.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರ ಮತ್ತು ಮೈಸೂರಿನ ವರುಣ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಸೋಮಣ್ಣ ಎರಡೂ ಕಡೆ ಹಿನ್ನಡೆ ಅನುಭವಿಸಿದ್ದರಿಂದಾಗಿ ಈ ಬಾರಿ ತುಮಕೂರು ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಬಿಜೆಪಿ ಹೈಕಮಾಂಡ್ ಅವಕಾಶ ಮಾಡಿಕೊಟ್ಟಿದೆ.

ಬಿಜಾಪುರದಲ್ಲಿ ಕಾಂಗ್ರೆಸ್ ರಾಜು ಅಲಗೂರು ಅವರಿಗೆ ಟಿಕೆಟ್ ನೀಡಿದರೆ ಬಿಜೆಪಿ ಹಾಲಿ ಸಂಸದ ರಮೇಶ್ ಜಿಗಜಿಣಗಿ ಅವರಿಗೆ ಟಿಕೆಟ್ ನೀಡಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ನ ಹಾಲಿ ಸಂಸದ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರಿಗೆ ಠಕ್ಕರ್ ನೀಡಲು ಬಿಜೆಪಿ ಜಯದೇವ ಆಸ್ಪತ್ರೆಯ ಮಾಜಿ ನಿರ್ದೆಶಕ ಡಾ.ಸಿ.ಎನ್.ಮಂಜುನಾಥ್ರವರನ್ನು ಕಣಕ್ಕಿಳಿಸಿದೆ.

ಒಂದು ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಳಿಯ ಎಂಬ ಪ್ರಭಾವದ ನಂಟು ಮತ್ತೊಂದೆಡೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಮಂಜುನಾಥ್ ಅವರು ಸಲ್ಲಿಸಿದ ಜನಪರವಾದ ಸೇವೆಯ ಖ್ಯಾತಿ ಎರಡ ಯಶಸ್ಸನ್ನೂ ಮತಗಳನ್ನಾಗಿ ಪರಿವರ್ತಿಸಲು ಅಳೆದು ತೂಗಿ ರಾಜಕೀಯ ತಂತ್ರಗಾರಿಕೆ ಬಳಸಲಾಗಿದೆ. ಬಿಜೆಪಿ ಅಭ್ಯರ್ಥಿಯಾಗಿರುವುದು ಮತ್ತು ಜೆಡಿಎಸ್ನ ಸಾಂಪ್ರದಾಯಿಕ ಮತಗಳು ಬೆಂಬಲಕ್ಕಿರುವುದರಿಂದ ಡಿ.ಕೆ.ಸುರೇಶ್ ಅವರಿಗೆ ಪ್ರಬಲ ಪೈಪೊಟಿ ಎದುರಾಗುವ ಸಾಧ್ಯತೆಯಿದೆ.

ಹಾವೇರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಕ್ಷೇತ್ರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಪುತ್ರ ಕಾಂತೇಶ್ ಅವರು ಪ್ರಬಲ ಆಕಾಂಕ್ಷಿಯಾಗಿದ್ದರು. ಕಾಂಗ್ರೆಸ್ ಸಾಮಾನ್ಯ ಕಾರ್ಯಕರ್ತ ಆನಂದಸ್ವಾಮಿ ದಡ್ಡದೇವರ ಮಠ ಅವರನ್ನು ಕಣಕ್ಕಿಳಿಸಿದೆ.

ಇನ್ನು ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಮರು ಸ್ರ್ಪಧಿಸುತ್ತಿದ್ದು, ಹ್ಯಾಟ್ರಿಕ್ ಹೀರೊ ಶಿವರಾಜ್ಕುಮಾರ್ರ ಪತ್ನಿ, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರಿ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರ ಸಹೋದರಿ ಗೀತಾ ಶಿವರಾಜ್ಕುಮಾರ್ ಕಾಂಗ್ರೆಸ್ನಿಂದ ಸ್ರ್ಪಧಿಸುತ್ತಿದ್ದಾರೆ.

ಹಾವೇರಿಯಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ಕೈತಪ್ಪಿದ ಸಿಟ್ಟಿನಲ್ಲಿರುವ ಈಶ್ವರಪ್ಪ ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗುವ ಮುನ್ಸೂಚನೆ ನೀಡಿದ್ದಾರೆ. ಹೀಗಾಗಿ ಮಲೆನಾಡಿನ ಶಿವಮೊಗ್ಗ ಮತ್ತೊಂದು ಹೈ ವೋಲ್ಟೇಜ್ ಕ್ಷೇತ್ರವಾಗಲಿದೆ. ಬಿಜೆಪಿ-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿಯ ಭಾಗವಾಗಿ ಸ್ಥಾನ ಹಂಚಿಕೆ ಸೂತ್ರಗಳು ಚಾಲ್ತಿಯಲ್ಲಿದ್ದು, ಹಾಸನದಲ್ಲಿ ಜೆಡಿಎಸ್ನ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಮರು ಸ್ರ್ಪಧಿಸುವ ಸಾಧ್ಯತೆಯಿದೆ. ಈ ಕ್ಷೇತ್ರಕ್ಕೆ ಕಾಂಗ್ರೆಸ್ ಈಗಾಗಲೇ ಎಂ.ಶ್ರೇಯಸ್ ಪಟೇಲ್ರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.

ಮತ್ತೊಂದು ಹೈ ವೋಲ್ಟೇಜ್ ಕ್ಷೇತ್ರ ಮಂಡ್ಯಕ್ಕೆ ಕಾಂಗ್ರೆಸ್ನ ವೆಂಕಟರಾಮೇಗೌಡ (ಸ್ಟಾರ್ ಚಂದ್ರು) ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟಿದ್ದಾರೆ. ಈ ಕ್ಷೇತ್ರದಲ್ಲಿ ಹಾಲಿ ಸಂಸದೆ ಸುಮಲತಾ ಕಳೆದ ಬಾರಿ ಪಕ್ಷೇತರರಾಗಿ ಚುನಾಯಿತರಾಗಿದ್ದರು. ಈ ಬಾರಿ ಮಂಡ್ಯ ಮೈತ್ರಿ ಪಕ್ಷಗಳಾದ ಜೆಡಿಎಸ್ನಲ್ಲಿಯೇ ಉಳಿಯಲಿದೆಯೇ ಅಥವಾ ಬಿಜೆಪಿಯ ಪಾಲಾಗಲಿದೆಯೇ ಎಂಬುದು ಕುತೂಹಲ ಕೆರಳಿಸಿದೆ.

ಬಿಜೆಪಿ ಅಭ್ಯರ್ಥಿಗಳನ್ನು ಅಂದಾಜಿಸಿ ಕಾಂಗ್ರೆಸ್ ತನ್ನ ಹುರಿಯಾಳುಗಳನ್ನು ಕಣಕ್ಕಿಳಿಸಲು ತಯಾರಿ ನಡೆಸಿದೆ. ಬಿಜೆಪಿಯಲ್ಲಿ ಟಿಕೆಟ್ ವಂಚಿತ ಹಾಲಿ ಸಂಸದರು ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದು, ಇಲ್ಲಿ ಟಿಕೆಟ್ ಸಿಕ್ಕರೆ ಮತ್ತೊಮ್ಮೆ ಅದೃಷ್ಟ ಪರೀಕ್ಷೆ ನಡೆಸುವ ಪ್ರಯತ್ನದಲ್ಲಿದ್ದಾರೆ. ಆದರೆ ರಾಜಕಾರಣ ಯಾವ ರೀತಿ ಬದಲಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ.

RELATED ARTICLES

Latest News