ಬೆಂಗಳೂರು,ಮಾ.15- ಎರಡು ಕಾರುಗಳಲ್ಲಿ ಮಾರಕಾಸ್ತ್ರಗಳನ್ನು ಹೊಂದಿದ್ದ 10 ಮಂದಿಯನ್ನು ವೈಟ್‍ಫೀಲ್ಡ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಲ್ಕು ದಿನಗಳ ಹಿಂದೆ ಹತ್ತು ಮಂದಿಯ ಗುಂಪು ಎರಡು ಕಾರುಗಳಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ತಿರುಗಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ಪೈಕಿ ಒಬ್ಬನ ವಿರುದ್ಧ ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಂಭತ್ತು ಪ್ರಕರಣಗಳು ದಾಖಲಾಗಿದ್ದು, ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ತೆರೆದಿರುವುದು ವಿಚಾರಣೆಯಿಂದ ಗೊತ್ತಾಗಿದೆ. ಮತ್ತೊಬ್ಬನ ವಿರುದ್ಧ ಆಂಧ್ರಪ್ರದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದು, ಮುಡಿವೇಡು ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿರುತ್ತದೆ.
ವಶದಲ್ಲಿರುವ ವ್ಯಕ್ತಿಗಳಿಂದ ಆರು ಕಬ್ಬಿಣದ ಲಾಂಗುಗಳು, ಎರಡು ಮಚ್ಚುಗಳು, ಎರಡು ಪಟ್ಟಿಗಳು, ಎರಡು ರಾಡುಗಳು, 5 ಪೆಪ್ಪರ್ ಸ್ಪ್ರೇ, 12 ಮೊಬೈಲ್ ಫೋನ್, ಎರಡು ಫಾರ್ಚುನರ್ ಕಾರುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ವೈಟ್‍ಫೀಲ್ಡ್ ವಿಭಾಗದ ಉಪಪೊಲೀಸ್ ಆಯುಕ್ತರಾದ ಡಾ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತರಾದ ಪ್ರಿಯದರ್ಶಿನಿ ಈಶ್ವರ್ ಸಾಣೆಕೊಪ್ಪ ಹಾಗೂ ಇನ್‍ಸ್ಪೆಕ್ಟರ್ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡಿದ್ದರು.