–ಆಶಾ ಹರೀಶ್
ಸಾರ್ಟ್ಫೋನ್ ಇಂದು ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಿದೆ. ಕೈಯಲ್ಲೊಂದು ಮೊಬೈಲ್ ಇದ್ದರೆ ಜಗತ್ತೇ ಕೈಗೆ ಸಿಕ್ಕಂತಾಗಿದೆ. ಮಾಹಿತಿ, ಶಿಕ್ಷಣ, ಉದ್ಯೋಗ, ವ್ಯಾಪಾರ, ಮನರಂಜನೆ, ಬ್ಯಾಂಕಿಂಗ್, ಸಂವಹನ ಸೇರಿದಂತೆ ಬದುಕಿನ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಮೊಬೈಲ್ ತನ್ನ ಪ್ರಭಾವವನ್ನು ಬೀರಿದೆ.
ಆದರೆ, ಇದೇ ಸಾರ್ಟ್ಫೋನ್ ಮನುಷ್ಯನನ್ನು ಮನುಷ್ಯರಿಂದಲೇ ದೂರ ಮಾಡುತ್ತಿದೆಯೇ ಎಂಬ ಪ್ರಶ್ನೆ ಆಧುನಿಕ ನಾಗರಿಕ ಸಮಾಜದ ಮುಂದೆ ಗಂಭೀರವಾಗಿ ನಿಂತಿದೆ. ಒಂದೇ ಮನೆಯಲ್ಲಿ ನಾಲ್ಕು ಜನರಿದ್ದರೂ ನಾಲ್ಕು ಮೊಬೈಲ್ಗಳು ನಾಲ್ಕು ಪ್ರತ್ಯೇಕ ಜಗತ್ತುಗಳನ್ನು ಸೃಷ್ಟಿಸಿರುವ ದೃಶ್ಯ ಸಾಮಾನ್ಯವಾಗಿಬಿಟ್ಟಿದೆ. ಕುಟುಂಬ ಸದಸ್ಯರು ಒಂದೊಂದು ಕೋಣೆಯಲ್ಲಿ ತಮದೇ ಆದ ಮೊಬೈಲ್ನಲ್ಲಿ ಮುಳುಗಿಹೋಗುತ್ತಿದ್ದಾರೆ.
ಅಪ್ಪ-ಅಮ ಮಕ್ಕಳೊಂದಿಗೆ ಮಾತನಾಡಲು ಸಮಯ ಹುಡುಕು ತ್ತಿದ್ದರೆ, ಮಕ್ಕಳು ಮೊಬೈಲ್ಗಳನ್ನು ಹುಡಕುವಂತಹ ಕಾಲ ಬಂದಿದೆ. ಮನೆಯೊಳಗೆ ಕುಟುಂಬ ಸದಸ್ಯರಿದ್ದರೂ ಒಬ್ಬರಿಗೊಬ್ಬರ ನಡುವೆ ಮಾತಿಲ್ಲ ಕಥೆ ಇಲ್ಲದಂತಾಗಿದೆ. ಹಿಂದೆ ಮಾತಿನ ಮನೆಗಳಿದ್ದವು. ಇಂದು ಮೊಬೈಲ್ಗಳ ಮನೆಯಾಗಿ ಪರಿವರ್ತನೆಯಾಗುತ್ತಿರುವುದು ವಿಪರ್ಯಾಸವೇ ಸರಿ. ಈ ಹಿಂದೆ ಪೋಷಕರು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಯಾರಿಗಾದರೂ ಕಷ್ಟ ಬಂದರೆ ಮನೆಯವರು ಮಾತ್ರವಲ್ಲ, ಸಂಬಂಧಿಕರೂ ಸ್ಪಂದಿಸುತ್ತಿದ್ದರು. ನೆರೆಮನೆಯವರೊಂದಿಗೆ ಆತೀಯತೆ ಇತ್ತು. ಬಂಧುಗಳ ಮನೆಗೆ ಭೇಟಿ ನೀಡುವುದು ಸಾಮಾನ್ಯವಾಗಿತ್ತು. ಮದುವೆ, ಹಬ್ಬ, ಹಬ್ಬದ ಊಟ, ಕುಟುಂಬ ಸಮಾರಂಭಗಳು ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದ್ದವು.
ಆದರೆ ಈಗ ತಂತ್ರಜ್ಞಾನ ಬೆಳೆದಂತೆ ಮುಖಾಮುಖಿ ಮಾತುಕತೆ ಕಡಿಮೆಯಾಗುತ್ತಿದೆ. ಮೊಬೈಲ್ ಸಂಪರ್ಕ ಹೆಚ್ಚಾಗಿದೆ. ಇಂದು ಸಾಮಾಜಿಕ ಜಾಲತಾಣಗಳಲ್ಲಿ ನೂರಾರು, ಸಾವಿರಾರು ಸ್ನೇಹಿತರನ್ನು ಹೊಂದಿರುವ ವ್ಯಕ್ತಿಗೆ ತನ್ನ ಪಕ್ಕದಲ್ಲೇ ಕುಳಿತಿರುವ ವ್ಯಕ್ತಿಯೊಂದಿಗೆ ಮಾತನಾಡಲು ಸಮಯವಿಲ್ಲದಿರುವುದು ಆಧುನಿಕ ಸಮಾಜದ ವಿಚಿತ್ರ ವಾಸ್ತವ.
ಆದರೆ ಅದೇ ಮೊಬೈಲ್ ನಮ ಪಕ್ಕದಲ್ಲಿರುವ ವ್ಯಕ್ತಿಯಿಂದ ನಮ ಗಮನವನ್ನು ಕಸಿದುಕೊಳ್ಳಬಹುದು. ಒಬ್ಬರ ಮುಖವನ್ನು ನೋಡುತ್ತಾ ಮಾತನಾಡುವುದಕ್ಕೂ, ಪರದೆಯ ಸ್ಕ್ರೀನ್ ಮೇಲೆ ಸಂದೇಶ ಕಳುಹಿಸುವುದಕ್ಕೂ ದೊಡ್ಡ ವ್ಯತ್ಯಾಸವಿದೆ. ಮುಖಾಮುಖಿ ಸಂಭಾಷಣೆಯಲ್ಲಿ ಧ್ವನಿಯ ಏರಿಳಿತ, ಮುಖಭಾವ, ಕಣ್ಣಿನ ಸಂಪರ್ಕ, ಮೌನ, ಕಾಳಜಿ ಮತ್ತು ಸಾಂತ್ವನ ಇವೆಲ್ಲವೂ ಇರುತ್ತವೆ. ಇವು ಮಾನವ ಸಂಬಂಧಗಳ ಆಳವನ್ನು ತೋರಿಸುತ್ತವೆ. ಪರದೆಯ ಮೇಲಿನ ಕೆಲವು ಪದಗಳು ಆ ಭಾವನೆಗಳನ್ನೆಲ್ಲ ಹೊತ್ತೊಯ್ಯಲು ಸಾಧ್ಯವಿಲ್ಲ.
ಕುಟುಂಬ ಸಂಬಂಧಗಳ ಮೇಲೆ ಪರಿಣಾಮ ಅಧಿಕ. ಮೊಬೈಲ್ನ ಅತಿಯಾದ ಬಳಕೆಯ ಪರಿಣಾಮ ಹೆಚ್ಚು ಪ್ರಭಾವ ಉಂಟಾಗಿ ಕುಟುಂಬ ಸಂಬಂಧಗಳು ಮುರಿದಿವೆ. ಮಕ್ಕಳೊಂದಿಗೆ ಮಾತನಾಡಲು ಬಯಸುವ ತಂದೆ-ತಾಯಿಗೆ ಸಮಯ ಸಿಗುವುದಿಲ್ಲ. ಮತ್ತೊಂದೆಡೆ ಮಕ್ಕಳೊಂ ದಿಗೆ ಕಳೆಯಬೇಕಾದ ಸಮಯವನ್ನು ಪೋಷಕರೇ ಮೊಬೈಲ್ನಲ್ಲಿ ಕಳೆಯುತ್ತಿರುವ ಸಂದರ್ಭಗಳೂ ಇವೆ. ಮಗುವಿನ ಶಾಲಾ ಅನುಭವವನ್ನು ಕೇಳಲು ಕೆಲವೇ ನಿಮಿಷಗಳು ಮಾತ್ರ ಸಾಕಾಗಬಹುದು.
ಕುಟುಂಬದಲ್ಲಿರುವ ಅಜ್ಜ-ಅಜ್ಜಿ ಹಾಗೂ ಪೋಷಕರಿಗೆ ಕೆಲವೊಮೆ ನಾಲ್ಕು ಆತೀಯ ಮಾತುಗಳೇ ಹೆಚ್ಚು ಅಗತ್ಯವಾಗಿರುತ್ತವೆ. ಆದರೆ ಆ ಮಾತುಗಳ ಜಾಗವನ್ನು ಮೊಬೈಲ್ ಪರದೆ ಆಕ್ರಮಿಸಿಕೊಂಡರೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ ಭಾವನಾತಕ ಅಂತರ ಹೆಚ್ಚಾಗಬಹುದು. ಸಂಬಂಧವನ್ನು ಉಳಿಸುವ ಮೊದಲ ಹೆಜ್ಜೆ ಮಾತುಕತೆಯೇ ಆಗಬೇಕು.
ಸ್ಕ್ರೀನ್ ಒಳಗೆ ಸೀಮಿತವಾಗಬಾರದು. ಸ್ನೇಹ ಎಂದರೆ ಕೇವಲ ಚಾಟ್ ಮಾಡುವುದು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಪೋಸ್ಟ್ಗಳಿಗೆ ಪ್ರತಿಕ್ರಿಯಿಸುವುದಲ್ಲ. ನಿಜವಾದ ಸ್ನೇಹಿತ ಎಂದರೆ ಕಷ್ಟ ಬಂದಾಗ ಜೊತೆಯಾಗುವವನು, ಸಂತೋಷದಲ್ಲಿ ಭಾಗಿಯಾಗುವವನು, ತಪ್ಪು ಮಾಡಿದಾಗ ತಿದ್ದುವವನು ಮತ್ತು ಮನಸ್ಸು ಕುಗ್ಗಿದಾಗ ಧೈರ್ಯ ತುಂಬುವವನು.
ಸಾವಿರಾರು ಫಾಲೋವರ್ಸ್ ಇದ್ದರೂ ನಿಜವಾದ ಸಮಸ್ಯೆಯ ಸಮಯದಲ್ಲಿ ಕರೆ ಮಾಡಿ ಮಾತನಾಡುವ ಒಬ್ಬ ಸ್ನೇಹಿತನ ಕೊರತೆ ಇದ್ದರೆ, ಆ ಸಂಖ್ಯೆಗಳ ಅರ್ಥವೇನು ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು.
ಮೊಬೈಲ್ ದಾಸರಾಗಬೇಡಿ
ಕೆಲವು ಸರಳ ಬದಲಾವಣೆಗಳು ದೊಡ್ಡ ಪರಿಣಾಮ ತರಬಹುದು. ಈ ಆಧುನಿಕ ಯುಗದಲ್ಲಿ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಲಾಗುವುದಿಲ್ಲ. ಆದರೆ ಅದರ ಬಳಕೆಗೆ ಮಿತಿ ಇರಬೇಕು. ಊಟದ ಸಮಯದಲ್ಲಿ ಮೊಬೈಲ್ ಬದಿಗಿಡುವುದು, ರಾತ್ರಿ ನಿಗದಿತ ಸಮಯದ ನಂತರ ಫೋನ್ ಬಳಕೆಯನ್ನು ಕಡಿಮೆ ಮಾಡುವುದು, ವಾರಕ್ಕೆ ಒಂದು ದಿನ ಕುಟುಂಬದವರೆಲ್ಲರೂ ಒಟ್ಟಾಗಿ ಸಮಯ ಕಳೆಯುವುದು, ತಿಂಗಳಿಗೆ ಕನಿಷ್ಠ ಒಂದು ಬಾರಿ ಬಂಧು-ಬಳಗದವರನ್ನು ಮುಖಾಮುಖಿಯಾಗಿ ಭೇಟಿ ಮಾಡುವುದು, ಮಕ್ಕಳೊಂದಿಗೆ ಮಾತನಾಡುವಾಗ ಪೋಷಕರು ಮೊಬೈಲ್ ಬದಿಗಿಡುವುದು, ಪೋಷಕರೊಂದಿಗೆ ಮಾತನಾಡುವಾಗ ಮಕ್ಕಳು ಪರದೆಗೆ ಗಮನ ಕೊಡದಿರುವುದು ಇಂತಹ ಸಣ್ಣ ಅಭ್ಯಾಸಗಳು ಕುಟುಂಬದ ವಾತಾವರಣವನ್ನೇ ಬದಲಾಯಿಸಬಹುದು. ಮನುಷ್ಯನಿಗೆ ಮನುಷ್ಯನೇ ಬೇಕು. ಎಷ್ಟೇ ತಂತ್ರಜ್ಞಾನ ಬಂದರೂ ಮನುಷ್ಯನ ಭಾವನಾತಕ ಅಗತ್ಯಗಳನ್ನು ಯಂತ್ರಗಳು ಸಂಪೂರ್ಣವಾಗಿ ತುಂಬಲು ಸಾಧ್ಯವಿಲ್ಲ.
ಮೊಬೈಲ್ ಸಂಪರ್ಕ ಸಾಧನವಾಗಿರಲಿ; ಸಂಬಂಧಗಳನ್ನು ಕಿತ್ತುಹಾಕದಿರಲಿ. ಪರದೆ ಬೆಳಗಲಿ; ಆದರೆ ಮಾನವೀಯತೆ ಕತ್ತಲಾಗದಿರಲಿ.
ಮೊಬೈಲ್ ಶತ್ರುವೇ?
ಮೊಬೈಲ್ ಸ್ವತಃ ಮನುಷ್ಯತ್ವದ ಶತ್ರುವಲ್ಲ. ಅದು ಒಂದು ಸಾಧನ. ಅದರ ಬಳಕೆಯ ರೀತಿಯೇ ಅದರ ಪರಿಣಾಮವನ್ನು ನಿರ್ಧರಿಸುತ್ತದೆ. ತುರ್ತು ಸಂದರ್ಭದಲ್ಲಿ ಮೊಬೈಲ್ ಜೀವ ಉಳಿಸಬಹುದು. ದೂರದಲ್ಲಿರುವ ಕುಟುಂಬ ಸದಸ್ಯರನ್ನು ಹತ್ತಿರಕ್ಕೆ ತರಬಹುದು. ಶಿಕ್ಷಣದ ಅವಕಾಶಗಳನ್ನು ಒದಗಿಸಬಹುದು. ಉದ್ಯೋಗ, ವೈದ್ಯಕೀಯ ನೆರವು, ಬ್ಯಾಂಕಿಂಗ್, ಸರ್ಕಾರಿ ಸೇವೆ ಮತ್ತು ಮಾಹಿತಿಯನ್ನು ಸುಲಭವಾಗಿ ತಲುಪಿಸಬಹುದು. ಸಮಸ್ಯೆ ಮೊಬೈಲ್ ಇರುವುದಲ್ಲ; ಮೊಬೈಲ್ ನಮ ಜೀವನವನ್ನು ನಿಯಂತ್ರಿಸಲು ಆರಂಭಿಸುವುದೇ ಸಮಸ್ಯೆ.
