ಬೆಂಗಳೂರು, ಸೆ.11- ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ಶಂಕಿತ ನಕ್ಸಲ್ ಚಟುವಟಿಕೆಗಳು ಕಂಡು ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲು ಮುಂದಾಗಿದೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು, ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಕ್ಸಲರ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಡುವ ಪತ್ರವೊಂದು ಪತ್ತೆಯಾಗಿರುವುದು ನನ್ನ ಗಮನದಲ್ಲಿದೆ. ಇಂದು ತಾವು ತುಮಕೂರಿಗೆ ಭೇಟಿ ನೀಡುತ್ತಿದ್ದು, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಜೊತೆ ಚರ್ಚೆ ಮಾಡುತ್ತೇನೆ.
ಒಂದು ವೇಳೆ ಪತ್ರದಲ್ಲಿರುವ ಬೆದರಿಕೆ ನಿಜವಾಗಿದ್ದರೆ ಹೆಚ್ಚಿನ ಪೊಲೀಸ್ ಬಂದೋಬಸ್ತನ್ನು ವ್ಯವಸ್ಥೆ ಮಾಡುವುದಾಗಿ ಹೇಳಿದರು.ಈ ಹಿಂದೆ ತಾವು ಗೃಹಸಚಿವರಾಗಿದ್ದಾಗ ನಕ್ಸಲರ ಶರಣಾಗತಿಯಾಗಿತ್ತು. ರಾಜ್ಯವನ್ನು ನಕ್ಸಲ್ ಮುಕ್ತ ಎಂದು ಘೋಷಿಸಲಾಗಿದೆ. ಈ ಮೊದಲು ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ನಕ್ಸಲ್ ನಿಗ್ರಹ ಪಡೆಯಲ್ಲಿ ಅರ್ಧದಷ್ಟು ಬಲವನ್ನು ಹಿಂಪಡೆದು, ವಿಶೇಷ ಕ್ರಿಯಾಪಡೆ (ಎಸ್‌ಎಎಫ್) ಎಂದು ರಚಿಸಿ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಶಾಂತಿ ಪಾಲನೆಗೆ ನಿಯೋಜಿಸಲಾಗಿದೆ.
ಇನ್ನೂ ಅರ್ಧದಷ್ಟು ನಕ್ಸಲ್ ನಿಗ್ರಹ ಪಡೆಯ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕಾರ್ಕಳದಲ್ಲೇ ಇರಿಸಿದ್ದು, ತರಬೇತಿ ಮುಂದುವರೆಸಲಾಗಿದೆ. ಒಂದು ವೇಳೆ ಪಾವಗಡದಲ್ಲಿ ಪತ್ತೆಯಾಗಿರುವ ಪತ್ರದಲ್ಲಿ ನೈಜತೆ ಇದ್ದರೆ, ನಕ್ಸಲ್ ನಿಗ್ರಹ ಚಟುವಟಿಕೆಗಳನ್ನು ಹತ್ತಿಕ್ಕಲು ಕಾರ್ಕಳದ ಪಡೆಯನ್ನು ಪಾವಗಡದ ಕಡೆಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.
ಹಿನ್ನೆಲೆ:
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಗಂಗಾಸಾಗರ ಗ್ರಾಮದಲ್ಲಿನ ಕುಂಡ್ಲಭೂಷಪ್ಪ ಅವರ ಜಮೀನಿನಲ್ಲಿ ಕಾಮ್ರೆಡ್ ದೇವನ್ನ ದಳಂ ಹೆಸರಿನಲ್ಲಿ ಪತ್ರವೊಂದು ಪತ್ತೆಯಾಗಿದೆ. ಪೀಪಲ್‌್ಸವಾರ್ ಜನಶಕ್ತಿ ಪಕ್ಷದ ಹೆಸರನ್ನು ಬಳಸಿಕೊಳ್ಳಲಾಗಿದ್ದು, ಕನಕಲ ಬಂಡೆಯ ಉಪ್ಪಾರ ವೆಂಕಟೇಶ ಎಂಬುವರ ವಿರುದ್ಧ ರಾಜಕೀಯ ಪಿತೂರಿ ಮತ್ತು ದೌರ್ಜನ್ಯಗಳು ನಡೆಯುತ್ತಿವೆ. ಇದರ ಬಗ್ಗೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳಿಂದ ಬಿಡುಗಡೆ ಪಡೆಯಲು ವಕೀಲರಿಗೆ 5 ಲಕ್ಷ ರೂ.ಗಳನ್ನು ನೀಡಬೇಕು ಎಂದು ತಿಳಿಸಲಾಗಿದೆ.
ಇದೇ ತಿಂಗಳ 16ರ ಒಳಗೆ ಹಣವನ್ನು ವಕೀಲರಿಗೆ ತಲುಪಿಸಬೇಕೆಂದು ಪತ್ರದಲ್ಲಿ ಸೂಚಿಸಲಾಗಿದ್ದು, ಇಲ್ಲವಾದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ. ಈ ಪತ್ರ ಸಂಚಲನ ಮೂಡಿಸಿದ್ದು ನಕ್ಸಲ್ ಮುಕ್ತ ಕರ್ನಾಟಕಕ್ಕೆ ಸವಾಲೊಡ್ಡುವಂತಿದೆ. ಒಂದು ವೇಳೆ ಕಿಡಿಗೇಡಿಗಳು ದುರುದ್ದೇಶಪೂರ್ವಕವಾಗಿ ಈ ರೀತಿ ಪತ್ರವನ್ನು ಸೃಷ್ಟಿಸಿ ಬೆದರಿಸುವ ತಂತ್ರ ಮಾಡಿರಬಹುದೇ ಎಂಬ ಅನುಮಾನಗಳು ಕೇಳಿಬರುತ್ತವೆ.
