Homeರಾಜ್ಯನಂಜಾವಧೂತ ಶ್ರೀಗಳನ್ನು ಭೇಟಿ ಮಾಡಿದ ಸಭಾಪತಿ ಸಲೀಂ ಅಹಮದ್‌

ನಂಜಾವಧೂತ ಶ್ರೀಗಳನ್ನು ಭೇಟಿ ಮಾಡಿದ ಸಭಾಪತಿ ಸಲೀಂ ಅಹಮದ್‌

ಯಶವಂತಪುರ, ಆ.28- ಪಟ್ಟನಾಯಕನಹಳ್ಳಿ ಶ್ರೀ ಸ್ಪಟಿಕಪುರಿ ಮಹಾಸಂಸ್ಥಾನದ ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಶಾಖಾ ಮಠಕ್ಕೆ ವಿಧಾನಪರಿಷತ್‌ ಸಭಾಪತಿ ಸಲೀಂ ಅಹಮದ್‌ ಭೇಟಿ ನೀಡಿ, ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಮಹಾಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ಈ ವೇಳೆ ಮಾತನಾಡಿದ ಶ್ರೀ ನಂಜಾವಧೂತ ಮಹಾಸ್ವಾಮೀಜಿ, ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ನೂರಾರು ತಾಲೂಕುಗಳಲ್ಲಿ ಕುಡಿಯುವ ನೀರು ಹಾಗೂ ಮೇವಿಗೆ ಹಾಹಾಕಾರ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ವಿಧಾನಮಂಡಲದ ಅಧಿವೇಶನದಲ್ಲಿ ರೈತರ ಸಮಸ್ಯೆಗಳು, ನೀರಾವರಿ ಯೋಜನೆಗಳು ಹಾಗೂ ಜನಸಾಮಾನ್ಯರ ಜ್ವಲಂತ ಸಮಸ್ಯೆಗಳ ಕುರಿತು ಗಂಭೀರ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರೆನ್ನದೆ ಪಕ್ಷಾತೀತವಾಗಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಎಲ್ಲ ಜನಪ್ರತಿನಿಧಿಗಳಿಗೂ ಸದನದಲ್ಲಿ ಸಮಾನ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್‌ ಸಭಾಪತಿ ಸಲೀಂ ಅಹಮದ್‌, ಹಲವು ದಶಕಗಳ ಪ್ರಾಮಾಣಿಕ ಜನಸೇವೆಯ ಫಲವಾಗಿ ಪ್ರತಿಷ್ಠಿತ ಸಾಂವಿಧಾನಿಕ ಹುದ್ದೆ ದೊರೆತಿರುವುದು ತಮ್ಮ ಸೌಭಾಗ್ಯ ಎಂದರು.

ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ವಿಧಾನಪರಿಷತ್‌ ಸದನವನ್ನು ಜನಪ್ರತಿನಿಧಿಗಳ ಸ್ನೇಹಿಯಾಗಿಸುವ ಸಂಕಲ್ಪ ಮಾಡಿದ್ದೇನೆ. ಜನಪ್ರತಿನಿಧಿಗಳು ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗೊತ್ತಿ ರಾಜ್ಯ ಹಾಗೂ ಜನರ ಸರ್ವತೋಮುಖ ಅಭಿವೃದ್ಧಿಗೆ ಮುಕ್ತವಾಗಿ ಚರ್ಚೆ ನಡೆಸಲು ಅಗತ್ಯ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಆಡಿಟರ್‌ ನಾಗರಾಜ್‌ ಯಲಚವಾಡಿ, ಪಾಲಿಕೆಯ ಮಾಜಿ ಸದಸ್ಯ ಮೋಹನ್‌ ಕುಮಾರ್‌ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

RELATED ARTICLES
spot_img

Latest News