Homeರಾಜ್ಯಮುಡಾ ನಿವೇಶನ ಪಡೆದವರಿಗೆ ಶುರುವಾಯ್ತು ಆತಂಕ..!

ಮುಡಾ ನಿವೇಶನ ಪಡೆದವರಿಗೆ ಶುರುವಾಯ್ತು ಆತಂಕ..!

ಮೈಸೂರು, ಆ.28- ಅರಮನೆ ನಗರಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) 50:50 ಅನುಪಾತದ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣ ಇದೀಗ ಮತ್ತೊಂದು ಹಂತಕ್ಕೆ ತಲುಪಿದ್ದು, ನಿವೇಶನ ಪಡೆದವರು, ಮಾರಾಟ ಮಾಡಿದವರು ಹಾಗೂ ಖರೀದಿಸಿದವರಲ್ಲಿ ಆತಂಕ ಹೆಚ್ಚಾಗಿದೆ.

ಅಕ್ರಮವಾಗಿ ಮಂಜೂರಾಗಿರುವ ಬದಲಿ ಹಾಗೂ ಪ್ರೋತ್ಸಾಹದಾಯಕ ನಿವೇಶನಗಳನ್ನು ವಾಪಸ್‌ ಪಡೆಯುವ ಪ್ರಕ್ರಿಯೆಗೆ ಮುಡಾ ಚಾಲನೆ ನೀಡಿದೆ. ಪ್ರಭಾರ ಆಯುಕ್ತ ಬಿ.ಆರ್‌. ಮಹೇಶ್‌ ನೇತೃತ್ವದಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಹಾಗೂ ಮಾಹಿತಿ ಸಂಗ್ರಹ ಕಾರ್ಯವನ್ನು ತ್ವರಿತಗೊಳಿಸಿದ್ದಾರೆ.

ಮುಡಾದಿಂದ ಈವರೆಗೆ ಮಂಜೂರಾಗಿರುವ ನಿವೇಶನಗಳ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಈ ಸಂಬಂಧ ಸಂಬಂಧಪಟ್ಟ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಿಗೆ ಮೂರು ದಿನಗಳೊಳಗಾಗಿ ಅಗತ್ಯ ದಾಖಲೆಗಳು ಹಾಗೂ ಮಾಹಿತಿಯನ್ನು ಒದಗಿಸುವಂತೆ ಗಡುವು ನೀಡಲಾಗಿದೆ.ನಿವೇಶನ ಹಂಚಿಕೆಗೆ ಸಂಬಂಧಿಸಿದ ಮೂಲ ದಾಖಲೆಗಳು ಹಾಗೂ ನೋಂದಣಿ ದಾಖಲೆಗಳನ್ನು ಪರಸ್ಪರ ತಾಳೆ ಮಾಡುವ ಮೂಲಕ ಅಕ್ರಮ ಮಂಜೂರಾತಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ.

ಮುಡಾದಿಂದ ನಿವೇಶನ ಪಡೆದ ಬಳಿಕ ಅವುಗಳನ್ನು ಮಾರಾಟ ಮಾಡಲಾಗಿದೆಯೇ, ಮರುಮಾರಾಟವಾಗಿದೆಯೇ ಎಂಬುದನ್ನು ಎನ್‌ಕಂಬರೆನ್ಸ್‌ ಸರ್ಟಿಫಿಕೇಟ್‌ (ಇಸಿ) ಮೂಲಕ ಪತ್ತೆಹಚ್ಚುವ ಕಾರ್ಯವೂ ನಡೆಯುತ್ತಿದೆ. ಹೀಗಾಗಿ ನಿವೇಶನ ಪಡೆದವರಷ್ಟೇ ಅಲ್ಲದೆ, ಮಾರಾಟ ಮಾಡಿದವರು ಹಾಗೂ ಖರೀದಿಸಿದವರ ಮೇಲೂ ಅಧಿಕಾರಿಗಳ ಪರಿಶೀಲನೆ ಮುಂದುವರಿದಿದೆ.

ಈಗಾಗಲೇ ಕೆಲವು ನಿವೇಶನಗಳಲ್ಲಿ ಮನೆ ಹಾಗೂ ಇತರ ಕಟ್ಟಡಗಳು ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ಅಂತಹ ನಿವೇಶನಗಳನ್ನು ವಾಪಸ್‌ ಪಡೆಯುವ ಸಂದರ್ಭದಲ್ಲಿ ಎದುರಾಗಬಹುದಾದ ಕಾನೂನು ತೊಡಕುಗಳ ಕುರಿತು ಮುಡಾ ಕಾನೂನು ತಜ್ಞರ ಸಲಹೆ ಪಡೆಯಲು ಮುಂದಾಗಿದೆ.

ನಿವೇಶನ ರದ್ದುಪಡಿಸುವಿಕೆ ಹಾಗೂ ವಾಪಸ್‌ ಪಡೆಯುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಲವು ತಾಂತ್ರಿಕ ಮತ್ತು ಆಡಳಿತಾತ್ಮಕ ಸ್ಪಷ್ಟನೆಗಳನ್ನು ನೀಡುವಂತೆ ಸರ್ಕಾರಕ್ಕೆ ಮುಡಾದಿಂದ ಪತ್ರ ಬರೆಯಲಾಗಿದೆ. ಸರ್ಕಾರದಿಂದ ಸ್ಪಷ್ಟನೆ ದೊರೆತ ಬಳಿಕ ಮುಂದಿನ ಕ್ರಮ ಮತ್ತಷ್ಟು ವೇಗ ಪಡೆಯುವ ಸಾಧ್ಯತೆಯಿದೆ.

ಯಾವ ನಿವೇಶನ ಅಕ್ರಮವಾಗಿ ಮಂಜೂರಾಗಿದೆ, ಯಾರ ಹೆಸರಿಗೆ ಹಂಚಿಕೆಯಾಗಿದೆ, ನಂತರ ಯಾರಿಗೆ ಮಾರಾಟವಾಗಿದೆ ಹಾಗೂ ಪ್ರಸ್ತುತ ಯಾರ ಹೆಸರಿನಲ್ಲಿದೆ ಎಂಬುದನ್ನು ದಾಖಲೆಗಳ ಆಧಾರದ ಮೇಲೆ ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ. ಮುಡಾದ ಈ ಪರಿಶೀಲನಾ ಕಾರ್ಯದಿಂದ 50:50 ಅನುಪಾತದಡಿ ನಿವೇಶನ ಪಡೆದವರಲ್ಲಿ ಆತಂಕ ಹೆಚ್ಚಾಗಿದೆ.

RELATED ARTICLES
spot_img

Latest News