Homeರಾಜಕೀಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಬಿ.ನಾಗೇಂದ್ರ ನಾನಾ ಕಸರತ್ತು

ಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಬಿ.ನಾಗೇಂದ್ರ ನಾನಾ ಕಸರತ್ತು

ಬೆಂಗಳೂರು, ಆ.28- ಸಚಿವ ಸಂಪುಟದಿಂದ ಬಿ. ನಾಗೇಂದ್ರ ಅವರನ್ನು ಕೈಬಿಡುವ ಕುರಿತು ಕಾಂಗ್ರೆಸ್‌ನಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದು, ಸಚಿವ ಸ್ಥಾನ ಉಳಿಸಿಕೊಳ್ಳಲು ನಾಗೇಂದ್ರ ಅವರು ದೆಹಲಿಯಲ್ಲಿ ಅಂತಿಮ ಹಂತದ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಗುರುವಾರ ದೆಹಲಿಗೆ ತೆರಳಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ವೇಳೆ ನಾಗೇಂದ್ರ ಅವರ ರಾಜೀನಾಮೆ, ಸಂಪುಟಕ್ಕೆ ಹೊಸ ಮುಖಗಳ ಸೇರ್ಪಡೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆದಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ರಾಜ್ಯ ರಾಜಕಾರಣದ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ನಿರ್ಧಾರ ಕೈಗೊಳ್ಳಲು ರಾಹುಲ್‌ ಗಾಂಧಿ ಅವರು ಡಿ.ಕೆ. ಶಿವಕುಮಾರ್‌ ಅವರಿಗೆ ಅಧಿಕಾರ ನೀಡಿದ್ದಾರೆ ಎನ್ನಲಾಗಿದೆ. ಮುಂದಿನ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗದಂತೆ ಎಚ್ಚರಿಕೆಯ ಹೆಜ್ಜೆ ಇಡುವಂತೆ ಅವರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ರಾಹುಲ್‌ ಗಾಂಧಿ ಅವರ ಒಪ್ಪಿಗೆಯ ಬಳಿಕ ಸಂಪುಟ ಪುನಾರಚನೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ನಾಗೇಂದ್ರ ಅವರಿಂದ ರಾಜೀನಾಮೆ ಪಡೆದು, ತೆರವಾಗುವ ಸ್ಥಾನಕ್ಕೆ ಅದೇ ಸಮುದಾಯದ ಮತ್ತೊಬ್ಬರಿಗೆ ಅವಕಾಶ ನೀಡುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.

ಅನ್ನಪೂರ್ಣ ತುಕಾರಾಂಗೆ ಅವಕಾಶ?

ಸಂಡೂರು ಕ್ಷೇತ್ರದ ಶಾಸಕಿ ಅನ್ನಪೂರ್ಣ ತುಕಾರಾಂ ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಮಹಿಳೆ, ಪರಿಶಿಷ್ಟ ಪಂಗಡ ಹಾಗೂ ಬಳ್ಳಾರಿ ಜಿಲ್ಲೆಗೆ ಏಕಕಾಲದಲ್ಲಿ ಪ್ರಾತಿನಿಧ್ಯ ನೀಡಿದಂತಾಗುತ್ತದೆ ಎಂಬ ಲೆಕ್ಕಾಚಾರ ಕಾಂಗ್ರೆಸ್‌ ವಲಯದಲ್ಲಿದೆ.

ಈಗಾಗಲೇ ಖಾಲಿಯಿರುವ ಒಂದು ಸಚಿವ ಸ್ಥಾನಕ್ಕೆ ಮಹಿಳೆಯರನ್ನು ನೇಮಿಸುವ ಬಗ್ಗೆ ಚರ್ಚೆ ನಡೆದಿದ್ದು, ನಾಗೇಂದ್ರ ಅವರ ಸ್ಥಾನ ತೆರವಾದರೆ ಅದಕ್ಕೂ ಮಹಿಳೆಯರಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಹಿಳಾ ಕೋಟಾದಲ್ಲಿ ತೀವ್ರ ಪೈಪೋಟಿ

ಮಹಿಳಾ ಕೋಟಾದಡಿ ಸಚಿವ ಸ್ಥಾನ ಪಡೆಯಲು ಆರತಿ ಕೃಷ್ಣ, ಗಾಯತ್ರಿ ಶಾಂತೇಗೌಡ, ಲಕ್ಷ್ಮೀ ಹೆಬ್ಬಾಳ್ಕರ್‌, ನಯನಾ ಮೋಟಮ್ಮ ಹಾಗೂ ಖನೀಜ್‌ ಫಾತಿಮಾ ಸೇರಿದಂತೆ ಹಲವು ನಾಯಕಿಯರ ಹೆಸರುಗಳು ಕೇಳಿಬರುತ್ತಿವೆ.

ಸಂಪುಟದಲ್ಲಿ ಅವಕಾಶ ಸಿಗದಿರುವುದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್‌ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿದ್ದ ಅವರು, ಅಧಿಕಾರ ಹಂಚಿಕೆ ವಿಚಾರದಲ್ಲಿ ಡಿ.ಕೆ. ಶಿವಕುಮಾರ್‌ ಪರವಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದರು.

ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ‘ಮುಂದಿನ ಮುಖ್ಯಮಂತ್ರಿಗೆ ಸ್ವಾಗತ’ ಎಂಬ ಪೋಸ್ಟರ್‌ಗಳನ್ನು ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಬೆಂಬಲಿಗರು ಹಾಕಿದ್ದು, ನಾಯಕತ್ವ ಬದಲಾವಣೆಯ ಚರ್ಚೆಗೆ ಮತ್ತಷ್ಟು ಬಲ ನೀಡಿತ್ತು.

ನಯನಾ ಮೋಟಮ್ಮ ಕಾಂಗ್ರೆಸ್‌ನ ಮೊದಲ ಬಾರಿಗೆ ಶಾಸಕರಾಗಿರುವ ಮಹಿಳಾ ನಾಯಕಿಯಾಗಿದ್ದು, ಖನೀಜ್‌ ಫಾತಿಮಾ ಕಲಬುರಗಿಯನ್ನು ಪ್ರತಿನಿಧಿಸುತ್ತಿದ್ದಾರೆ. ಈಗಾಗಲೇ ಕಲಬುರಗಿ ಜಿಲ್ಲೆಗೆ ಮೂವರು ಸಚಿವ ಸ್ಥಾನಗಳು ದೊರೆತಿರುವುದರಿಂದ ನಾಲ್ಕನೇ ಸಚಿವ ಸ್ಥಾನ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ರೂಪಕಲಾ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರೂ, ಅವರ ತಂದೆ ಕೆ.ಎಚ್‌. ಮುನಿಯಪ್ಪ ಈಗಾಗಲೇ ಸಚಿವರಾಗಿರುವುದರಿಂದ ಒಂದೇ ಕುಟುಂಬಕ್ಕೆ ಎರಡು ಸಚಿವ ಸ್ಥಾನ ನೀಡುವ ಸಾಧ್ಯತೆ ಕಡಿಮೆ ಎಂಬ ಅಭಿಪ್ರಾಯವಿದೆ.

ಬೆಳಗಾವಿ ಜಿಲ್ಲೆಯಿಂದ ಲಕ್ಷ್ಮೀ ಹೆಬ್ಬಾಳ್ಕರ್‌ ಬದಲಿಗೆ ಲಕ್ಷ್ಮಣ ಸವದಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಈ ನಡುವೆ ವಿಧಾನಪರಿಷತ್‌ ಸದಸ್ಯತ್ವದ ಪ್ರಮಾಣವಚನವನ್ನೂ ಸ್ವೀಕರಿಸದ ಗಾಯತ್ರಿ ಶಾಂತೇಗೌಡ ಅವರ ಹೆಸರು ಸಚಿವ ಸ್ಥಾನದ ಸಂಭಾವ್ಯ ಪಟ್ಟಿಯಲ್ಲಿ ಕೇಳಿಬಂದಿರುವುದು ಅಚ್ಚರಿ ಮೂಡಿಸಿದೆ. ನಯನಾ ಮೋಟಮ್ಮ ಅವರೊಂದಿಗೆ ಆರತಿ ಕೃಷ್ಣ ಅವರ ಹೆಸರೂ ಪೈಪೋಟಿಯಲ್ಲಿದೆ ಎನ್ನಲಾಗಿದೆ.

ವಿಧಾನಪರಿಷತ್‌ ಸದಸ್ಯೆ ಬಲ್ಕೀಸ್‌ ಬಾನು ಅವರ ಹೆಸರೂ ಚರ್ಚೆಯಲ್ಲಿದ್ದರೂ, ಮುಸ್ಲಿಂ ಸಮುದಾಯಕ್ಕೆ ಈಗಾಗಲೇ ಸಂಪುಟದಲ್ಲಿ ಮೂವರಿಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಅವರನ್ನು ಪರಿಗಣಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಮತ್ತೆ ಅವಕಾಶ?

ಈ ಎಲ್ಲ ಬೆಳವಣಿಗೆಗಳ ನಡುವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ಸಂಪುಟಕ್ಕೆ ಸೇರಿಸುವ ಸಾಧ್ಯತೆಯ ಬಗ್ಗೆ ಕಾಂಗ್ರೆಸ್‌ ವಲಯದಲ್ಲಿ ಚರ್ಚೆ ತೀವ್ರಗೊಂಡಿದೆ.ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಟ್ಟು, ಪರಿಶಿಷ್ಟ ಪಂಗಡದ ಕೋಟಾದಡಿ ಅನ್ನಪೂರ್ಣ ತುಕಾರಾಂ ಅವರಿಗೆ ಅವಕಾಶ ನೀಡುವುದರ ಜತೆಗೆ ಮಹಿಳಾ ಕೋಟಾದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ಪರಿಗಣಿಸುವ ಕುರಿತು ಡಿ.ಕೆ. ಶಿವಕುಮಾರ್‌ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ದೆಹಲಿಯಲ್ಲಿದ್ದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ರಾಜೇಂದ್ರ ರಾಜಣ್ಣ ಅಥವಾ ಜೆ.ಎನ್‌. ಗಣೇಶ್‌ ಅವರ ಹೆಸರುಗಳನ್ನು ಸಚಿವ ಸ್ಥಾನಕ್ಕೆ ಪರಿಗಣಿಸುವಂತೆ ಒತ್ತಡ ಹೇರಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

RELATED ARTICLES
spot_img

Latest News