ಬೆಂಗಳೂರು, ಆ.28- ಬಿಎಂಐಸಿ ಯೋಜನೆ ಅನುಷ್ಠಾನದಲ್ಲಿ ನೈಸ್ ಸಂಸ್ಥೆ ನಿಯಮ ಉಲ್ಲಂಘಿಸಿರುವುದು, ಸ್ವಾಧೀನಪಡಿಸಿಕೊಂಡ ರೈತರ ಜಮೀನಿಗೆ ಪರಿಹಾರ ನೀಡದಿರುವುದು ಸೇರಿದಂತೆ ಯೋಜನೆಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸುವ ಉದ್ದೇಶದಿಂದ ಜೆಡಿಎಸ್ ‘ನಥಿಂಗ್ ನೈಸ್’ ಅಭಿಯಾನ ಆರಂಭಿಸಿದೆ.
ಸುದ್ದಿಗೋಷ್ಠಿಯಲ್ಲಿ ‘ನಥಿಂಗ್ ನೈಸ್’ ವೆಬ್‌ಸೈಟ್‌ನ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಈ ಅಭಿಯಾನ ಜನಪರವಾಗಿದ್ದು, ಮುಂದಿನ ದಿನಗಳಲ್ಲಿ ಜನಾಂದೋಲನವಾಗಿ ರೂಪುಗೊಳ್ಳಬೇಕು ಎಂದರು.
‘ನಥಿಂಗ್ ನೈಸ್’ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ Nothingnice.net ವೆಬ್‌ಸೈಟ್‌ನಲ್ಲಿರುವ ಮಾಹಿತಿಯನ್ನು ಪಡೆಯಬಹುದು. ನೈಸ್ ರಸ್ತೆಯಲ್ಲಿ ಟೋಲ್ ಏಕೆ ಪಾವತಿಸಬಾರದು ಎಂಬುದಕ್ಕೆ ಸಂಬಂಧಿಸಿದ ಮಾಹಿತಿಯನ್ನೂ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ. ಈ ಕುರಿತು ಸಾರ್ವಜನಿಕರಲ್ಲಿ ಗೊಂದಲವಿದ್ದು, ಹಲವರು ಸ್ಪಷ್ಟನೆ ಕೇಳಿದ್ದರಿಂದ ವೆಬ್‌ಸೈಟ್ ಮೂಲಕ ಮಾಹಿತಿ ಒದಗಿಸಲಾಗಿದೆ ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೈಸ್ ಸಂಸ್ಥೆಯೊಂದಿಗೆ ಬಿಎಂಐಸಿ ಯೋಜನೆಗೆ ಸಂಬಂಧಿಸಿದ ಮೂಲ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ ಬೆಂಗಳೂರು-ಮೈಸೂರು ನಡುವೆ 111 ಕಿ.ಮೀ. ಎಕ್ಸ್‌ಪ್ರೆಸ್ ಹೆದ್ದಾರಿ, 41 ಕಿ.ಮೀ. ಪೆರಿಫೆರಲ್ ರಿಂಗ್ ರಸ್ತೆ ಹಾಗೂ 9.8 ಕಿ.ಮೀ. ಲಿಂಕ್ ರಸ್ತೆ ನಿರ್ಮಿಸಬೇಕಾಗಿತ್ತು. ಆದರೆ, 26 ವರ್ಷ ಕಳೆದರೂ ಯೋಜನೆ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು.
ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ದೊರೆತಿಲ್ಲ. ಪೆರಿಫೆರಲ್ ರಸ್ತೆಗೆ 554 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಕಾಂಕ್ರೀಟ್ ರಸ್ತೆ ನಿರ್ಮಿಸಬೇಕಿದ್ದರೂ ಡಾಂಬರ್ ರಸ್ತೆ ನಿರ್ಮಿಸಲಾಗಿದೆ. ಸದನ ಸಮಿತಿಯು ನೈಸ್ ಸಂಸ್ಥೆ 22 ಷರತ್ತುಗಳ ಪೈಕಿ 16 ಷರತ್ತುಗಳನ್ನು ಉಲ್ಲಂಘಿಸಿರುವುದಾಗಿ ತಿಳಿಸಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಹೈಕೋರ್ಟ್ ಆದೇಶದಂತೆ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ರೈತರಿಗೆ ವಾಪಸ್ ನೀಡಬೇಕು. ಇಲ್ಲವೇ ಭೂಮಿಗೆ ಬಡ್ಡಿ ಸಹಿತ ಪರಿಹಾರ ನೀಡಬೇಕು. ಜತೆಗೆ ಬಿಎಂಐಸಿ ಯೋಜನೆಯನ್ನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಬಿಡದಿ ಉಪನಗರ ಯೋಜನೆ, ಬಿಎಂಐಸಿ ಯೋಜನೆ ಹಾಗೂ ಪಾರ್ಕ್‌ಗಳಲ್ಲಿ ಶೇ.5ರಷ್ಟು ವಾಣಿಜ್ಯ ಬಳಕೆಗೆ ಅವಕಾಶ ಕಲ್ಪಿಸಲು ಕಾನೂನು ರೂಪಿಸುವ ಕ್ರಮಗಳನ್ನು ಉಲ್ಲೇಖಿಸಿದ ಅವರು, ರಾಜ್ಯ ಸರ್ಕಾರ ರಿಯಲ್ ಎಸ್ಟೇಟ್ ಪರವಾಗಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ರಿಯಲ್ ಎಸ್ಟೇಟ್ ವೇದಿಕೆಯ ಸಿಇಒ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.
ಬಿಡದಿ ಉಪನಗರ ಯೋಜನೆಯನ್ನು ಜಿಬಿಐಟಿ ಹೆಸರಿನಲ್ಲಿ ರಾಜ್ಯ ಸರ್ಕಾರ ಒತ್ತಾಯಪೂರ್ವಕವಾಗಿ ಅನುಷ್ಠಾನಗೊಳಿಸಲು ಮುಂದಾಗಿದೆ. ರೈತ ವಿರೋಧಿ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ನಡೆಸಿದರೆ ತಮ್ಮನ್ನು ರಾಜಕೀಯಗೊಳಿಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ ಎಂದರು.
ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಜೆಡಿಎಸ್ ಹಾಗೂ ಬಿಜೆಪಿ ಸದನದಲ್ಲಿ ಹೋರಾಟ ನಡೆಸಿದ್ದವು. ಸರ್ಕಾರ ಹಠಕ್ಕೆ ಬೀಳದೆ ರಾಜೀನಾಮೆ ಪಡೆದುಕೊಂಡಿದ್ದರೆ ವಿಧಾನಮಂಡಲದ ಅಧಿವೇಶನದ ಕಲಾಪಗಳು ಸುಗಮವಾಗಿ ನಡೆಯುತ್ತಿದ್ದವು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಲಾಗಿದ್ದು, ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಮತ್ತಷ್ಟು ಬಲಪಡಿಸಿ ಒಗ್ಗಟ್ಟಿನಿಂದ ಮುನ್ನಡೆಯುವ ಕುರಿತು ಹಲವು ಸಲಹೆಗಳನ್ನು ನೀಡಿದ್ದಾರೆ ಎಂದು ನಿಖಿಲ್ ತಿಳಿಸಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣಕ್ಕೆ ಮರಳುವರೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯ ರಾಜಕಾರಣದ ಅನುಭವದ ಹಿನ್ನೆಲೆಯಲ್ಲಿ ಅವರನ್ನು ಕೇಂದ್ರದಲ್ಲಿ ಸಚಿವರನ್ನಾಗಿ ಮಾಡಲಾಗಿದೆ. ಸೂಕ್ತ ಸಂದರ್ಭದಲ್ಲಿ ಪಕ್ಷದ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ತಿಪ್ಪೇಸ್ವಾಮಿ, ಚೌಡರೆಡ್ಡಿ, ರಮೇಶ್‌ಗೌಡ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಹಾಗೂ ಜೆಡಿಎಸ್ ವಕ್ತಾರರಾದ ದೇವರಾಜು, ಗಂಗಾಧರಮೂರ್ತಿ ಉಪಸ್ಥಿತರಿದ್ದರು.
