ಬೆಂಗಳೂರು, ಆ.29- ಕರ್ನಾಟಕದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿನ ಗಂಭೀರ ಲೋಪವೊಂದು ಬೆಳಕಿಗೆ ಬಂದಿದ್ದು, ಕಳೆದ ಐದು ವರ್ಷಗಳಲ್ಲಿ ನಡೆಸಿದ ಗುಣಮಟ್ಟದ ತಪಾಸಣೆಯಲ್ಲಿ ಜ್ವರದ ಮಾತ್ರೆ ಪ್ಯಾರಾಸಿಟಮಾಲ್ನಿಂದ ಹಿಡಿದು ಜೀವರಕ್ಷಕ ಐವಿ ಫ್ಲೂಯಿಡ್ಗಳವರೆಗೆ ಒಟ್ಟು 301 ಔಷಧ ಬ್ಯಾಚ್ಗಳು ಕಳಪೆ ಗುಣಮಟ್ಟದ್ದೆಂದು ದೃಢಪಟ್ಟಿವೆ.
ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (KSMSCL) ವತಿಯಿಂದ ಖರೀದಿಸಿ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸಲಾಗುತ್ತಿದ್ದ ಸುಮಾರು 19.2 ಕೋಟಿ ರೂ. ಮೌಲ್ಯದ ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ.
ಪ್ರತಿನಿತ್ಯ ಲಕ್ಷಾಂತರ ಬಡ ರೋಗಿಗಳು ಅವಲಂಬಿಸಿರುವ ಇಬುಪ್ರೊಫೆನ್, ಆ್ಯಂಟಿಬಯೋಟಿಕ್ಗಳು, ಐರನ್ ಮಾತ್ರೆಗಳು ಹಾಗೂ ಪ್ರಮುಖ ಇಂಜೆಕ್ಷನ್ಗಳು ಕಳಪೆ ಗುಣಮಟ್ಟದ ಪಟ್ಟಿಗೆ ಸೇರಿರುವುದು ಆತಂಕಕ್ಕೆ ಕಾರಣವಾಗಿದೆ.
ಒಂದು ಹಂತದಲ್ಲಿ ಗರಿಷ್ಠ ಪ್ರಮಾಣದಲ್ಲಿ 9 ಕೋಟಿ ರೂ. ಮೌಲ್ಯದ 77 ಔಷಧ ಬ್ಯಾಚ್ಗಳು ಕಳಪೆ ಗುಣಮಟ್ಟದ್ದೆಂದು ಪತ್ತೆಯಾಗಿದ್ದವು. ಬಳಿಕ ಮತ್ತೊಮ್ಮೆ ಏರಿಕೆ ಕಂಡುಬಂದಿದ್ದು, 5.2 ಕೋಟಿ ರೂ. ಮೌಲ್ಯದ 146 ಬ್ಯಾಚ್ಗಳು ಗುಣಮಟ್ಟದ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿವೆ.
KSMSCLನ ಅಧಿಕೃತ ದಾಖಲೆಗಳ ಪ್ರಕಾರ, 2025-26ನೇ ಸಾಲಿನಲ್ಲಿ ಕಪ್ಪುಪಟ್ಟಿಗೆ ಸೇರಿಸಲಾದ ಸಂಸ್ಥೆಗಳ ಪೈಕಿ Biogenetic Drugs Pvt. Ltd., Vivek Pharmachem of India Pvt. Ltd. ಹಾಗೂ Gnosis Pharmaceuticals Pvt. Ltd. ಹೆಸರುಗಳು ಕಾಣಿಸಿಕೊಳ್ಳುತ್ತವೆ. ಈ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಕ್ರಮವಾಗಿ ಇಬುಪ್ರೊಫೆನ್, ಸಿಪ್ರೊಫ್ಲೋಕ್ಸಾಸಿನ್/ಪ್ಯಾರಾಸಿಟಮಾಲ್ ಹಾಗೂ ಕೆಟೋಕೊನಜೋಲ್ನಂತಹ ಔಷಧಗಳ ಬ್ಯಾಚ್ಗಳ ವಿರುದ್ಧ ಕ್ರಮ ದಾಖಲಿಸಲಾಗಿದೆ.
ಆದರೆ, ಕಪ್ಪುಪಟ್ಟಿಗೆ ಸೇರಿಸುವುದು ಎಂದರೆ ಸಂಬಂಧಪಟ್ಟ ಸಂಸ್ಥೆಯ ವಿರುದ್ಧದ ಕ್ರಮ ಎಲ್ಲ ಸಂದರ್ಭಗಳಲ್ಲೂ ಅಂತಿಮವಾಗಿ ವಿವಾದರಹಿತವಾಗಿದೆ ಎಂದರ್ಥವಲ್ಲ. ಉದಾಹರಣೆಗೆ, ವಿವೇಕ್ ಫಾರ್ಮಾಕೆಮ್ಗೆ ಸಂಬಂಧಿಸಿದ ಕಪ್ಪುಪಟ್ಟಿ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ನಲ್ಲಿ ತಾತ್ಕಾಲಿಕ ತಡೆ ನೀಡಲಾಗಿರುವುದನ್ನೂ KSMSCLನ ದಾಖಲೆಗಳು ಸೂಚಿಸುತ್ತವೆ. ಹೀಗಾಗಿ ಪ್ರತಿ ಸಂಸ್ಥೆಯ ಪ್ರಕರಣದ ಕಾನೂನು ಸ್ಥಿತಿಯನ್ನು ಪ್ರತ್ಯೇಕವಾಗಿ ಪರಿಶೀಲಿಸುವುದು ಅಗತ್ಯವಾಗಿದೆ.
ಸರ್ಕಾರದಿಂದ ತುರ್ತು ಕ್ರಮ
ಈ ಗಂಭೀರ ವಿಷಯವನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಕಳಪೆ ಗುಣಮಟ್ಟದ ಔಷಧಗಳನ್ನು ಪೂರೈಸಿದ ಕನಿಷ್ಠ ಐದು ಪ್ರಮುಖ ಕಂಪನಿಗಳನ್ನು ಈಗಾಗಲೇ ಕಪ್ಪುಪಟ್ಟಿಗೆ ಸೇರಿಸಿದೆ.ಗುಣಮಟ್ಟದ ಮಾನದಂಡಗಳನ್ನು ಪೂರೈಸದ ಔಷಧ ಬ್ಯಾಚ್ಗಳು ಪತ್ತೆಯಾದ ತಕ್ಷಣ ಅವುಗಳ ಬಳಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಅಲ್ಲದೆ, ಸಂಬಂಧಪಟ್ಟ ಸರಬರಾಜುದಾರರು 10 ದಿನಗಳೊಳಗೆ ಉತ್ತಮ ಗುಣಮಟ್ಟದ ಹೊಸ ಸ್ಟಾಕ್ ಅನ್ನು ಮರುಪೂರೈಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಬಡ ರೋಗಿಗಳಿಗೆ ದೊರೆಯುವ ಜೀವರಕ್ಷಕ ಔಷಧಿಗಳ ಗುಣಮಟ್ಟದ ವಿಚಾರದಲ್ಲಿ ಇನ್ನು ಮುಂದೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
