Homeಅಂತಾರಾಷ್ಟ್ರೀಯನೇಪಾಳಕ್ಕೆ ಬಂದಿಳಿದ 11 ಸದಸ್ಯರ ಭಾರತೀಯ ಸುರಂಗ ರಕ್ಷಣಾ ತಜ್ಞರ ತಂಡ

ನೇಪಾಳಕ್ಕೆ ಬಂದಿಳಿದ 11 ಸದಸ್ಯರ ಭಾರತೀಯ ಸುರಂಗ ರಕ್ಷಣಾ ತಜ್ಞರ ತಂಡ

11-member team from India arrives in Nepal to aid rescue

ಕಠ್ಮಂಡು, ಆ.29-(ಪಿಟಿಐ)- 500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸುಮಾರು 2,000 ಜನರು ನಾಪತ್ತೆಯಾಗಿರುವ ಹಠಾತ್‌ ಪ್ರವಾಹದ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳ ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು 11 ಸದಸ್ಯರ ಭಾರತೀಯ ತಂಡ ಇಂದು ನೇಪಾಳಕ್ಕೆ ಆಗಮಿಸಿದೆ. ವೈದ್ಯಕೀಯ ಸಿಬ್ಬಂದಿ ಹಾಗೂ ಸುರಂಗ ರಕ್ಷಣಾ ತಜ್ಞರನ್ನು ಒಳಗೊಂಡ ತಂಡವನ್ನು ನೇಪಾಳ ಸರ್ಕಾರದ ಮನವಿ ಮೇರೆಗೆ ಕಳುಹಿಸಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ಮೂಲಗಳು ತಿಳಿಸಿವೆ.

ಹಿಮಾಲಯ ರಾಷ್ಟ್ರದಲ್ಲಿ ಹಠಾತ್‌ ಪ್ರವಾಹದಿಂದ ತೀವ್ರವಾಗಿ ಬಾಧಿತವಾಗಿರುವ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿದ್ದು, ಅವುಗಳಿಗೆ ನೆರವಾಗಲು ಭಾರತೀಯ ತಂಡವನ್ನು ನಿಯೋಜಿಸಲಾಗಿದೆ.

ಬುಧವಾರ ರಸುವಾ ಸೇರಿದಂತೆ ಮಧ್ಯ ನೇಪಾಳದ ಹಲವು ಪ್ರದೇಶಗಳಲ್ಲಿ ಭಾರಿ ಹಠಾತ್‌ ಪ್ರವಾಹ ಸಂಭವಿಸಿದ್ದು, 500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಪ್ರವಾಹದಿಂದ ವಸತಿ ಪ್ರದೇಶಗಳು, ರಸ್ತೆಗಳು, ಸೇತುವೆಗಳು ಹಾಗೂ ಜಲವಿದ್ಯುತ್‌ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯಾಗಿದೆ.

ಸ್ಥಳೀಯ ಪರಿಸ್ಥಿತಿಗಳು ಹಾಗೂ ಒರಟಾದ ಭೂಪ್ರದೇಶದ ಬಗ್ಗೆ ಉತ್ತಮ ಅರಿವು ಹೊಂದಿರುವ ತಮ್ಮದೇ ಭದ್ರತಾ ಪಡೆಗಳ ಗರಿಷ್ಠ ನಿಯೋಜನೆಗೆ ನೇಪಾಳ ಆದ್ಯತೆ ನೀಡಲಿದೆ ಎಂದು ನಿನ್ನೆ ತಿಳಿಸಿತ್ತು. ಆದಾಗ್ಯೂ, ಅತ್ಯಂತ ಸಂಕೀರ್ಣವಾದ ಭೌತಿಕ ರಚನೆಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ವಿಶೇಷ ತಾಂತ್ರಿಕ ಕೌಶಲ್ಯ ಅಗತ್ಯವಿರುವ ಸಂದರ್ಭಗಳಲ್ಲಿ ಅಂತರರಾಷ್ಟ್ರೀಯ ನೆರವು ಪಡೆಯಲು ಸರ್ಕಾರ ಸಿದ್ಧವಿದೆ ಎಂದು ವಿದೇಶಾಂಗ ಸಚಿವ ಶಿಶಿರ್‌ ಖನಾಲ್‌ ತಿಳಿಸಿದ್ದಾರೆ.

42 ಬೈಲಿ ಸೇತುವೆ ನಿರ್ಮಾಣಕ್ಕೆ ಮನವಿ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾರಿಗೆ ಸಂಪರ್ಕವನ್ನು ಪುನಃಸ್ಥಾಪಿಸಲು 42 ಬೈಲಿ ಸೇತುವೆಗಳನ್ನು ನಿರ್ಮಿಸಲು ನೆರವು ನೀಡುವಂತೆ ನೇಪಾಳವು ಭಾರತ ಮತ್ತು ಚೀನಾಗೆ ಮನವಿ ಮಾಡಿದೆ. ಈ ಪೋರ್ಟಬಲ್‌ ಸೇತುವೆಗಳನ್ನು ಭಾರಿ ಯಂತ್ರೋಪಕರಣಗಳು ಅಥವಾ ವಿಶೇಷ ಉಪಕರಣಗಳ ಅವಶ್ಯಕತೆ ಇಲ್ಲದೆ ತ್ವರಿತವಾಗಿ ಜೋಡಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಪ್ರವಾಹದಿಂದ ಹಾನಿಗೊಳಗಾದ ರಸ್ತೆ ಸಂಪರ್ಕವನ್ನು ಶೀಘ್ರವಾಗಿ ಪುನಃಸ್ಥಾಪಿಸಲು ಸಹಕಾರಿಯಾಗಲಿವೆ.

RELATED ARTICLES
spot_img

Latest News