ಬೆಂಗಳೂರು, ಆ.29- ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಬಿಟ್ಕಾಯಿನ್ ಹಗರಣ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಮುಖ ಆರೋಪಿಗಳಿಗೆ ನ್ಯಾಯಾಲಯದಿಂದ ಹಿನ್ನಡೆಯಾಗಿದ್ದು, ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.
ಕುಖ್ಯಾತ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಹಾಗೂ ಕ್ರಿಪ್ಟೊಕರೆನ್ಸಿ ಟ್ರೇಡರ್ ರಾಬಿನ್ ಖಂಡೇವಾಲಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಬೆಂಗಳೂರಿನ ವಿಶೇಷ ಪಿಎಂಎಲ್ಎ ನ್ಯಾಯಾಲಯವು ವಜಾಗೊಳಿಸಿದೆ. ಇಬ್ಬರೂ ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಸರ್ಕಾರಿ ಹಾಗೂ ಖಾಸಗಿ ಜಾಲತಾಣಗಳು, ಕ್ರಿಪ್ಟೊ ಎಕ್ಸ್ಚೇಂಜ್ಗಳು ಮತ್ತು ಆನ್ಲೈನ್ ಗೇಮಿಂಗ್ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂ. ಮೌಲ್ಯದ ಬಿಟ್ಕಾಯಿನ್ ಹಾಗೂ ಇತರ ಡಿಜಿಟಲ್ ಆಸ್ತಿಗಳನ್ನು ಕಳವು ಮಾಡಿರುವ ಆರೋಪ ಶ್ರೀಕಿ ಮೇಲಿದೆ.
ಮತ್ತೋರ್ವ ಆರೋಪಿ ರಾಬಿನ್ ಖಂಡೇವಾಲಾ, ಶ್ರೀಕಿ ಹ್ಯಾಕ್ ಮಾಡಿದ್ದ ಬಿಟ್ಕಾಯಿನ್ಗಳು ಹಾಗೂ ಇತರ ಡಿಜಿಟಲ್ ಆಸ್ತಿಗಳನ್ನು ನಗದಾಗಿ ಪರಿವರ್ತಿಸಿ, ಪೂರ್ವಯೋಜಿತ ಸಂಚಿನಂತೆ ವಿವಿಧ ವ್ಯಕ್ತಿಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದನೆಂದು ಜಾರಿ ನಿರ್ದೇಶನಾಲಯದ (ಇಡಿ) ತನಿಖೆಯಲ್ಲಿ ತಿಳಿದುಬಂದಿದೆ.
ಕಳೆದ ಮೇ ತಿಂಗಳಲ್ಲಿ ಇಡಿ ಅಧಿಕಾರಿಗಳು ಶ್ರೀಕಿ ಮತ್ತು ರಾಬಿನ್ ಖಂಡೇವಾಲಾ ಅವರನ್ನು ಬಂಧಿಸಿದ್ದರು. ತನಿಖೆ ಚುರುಕುಗೊಳಿಸಿರುವ ಸಂಸ್ಥೆ ಈಗಾಗಲೇ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿದೆ. ಪ್ರಕರಣದ ತನಿಖೆಯ ಭಾಗವಾಗಿ ಕೆಲ ತಿಂಗಳ ಹಿಂದೆ ಯುವ ಕಾಂಗ್ರೆಸ್ ನಾಯಕ ಮೊಹಮದ್ ಹ್ಯಾರಿಸ್ ನಲಪಾಡ್ ಅವರ ನಿವಾಸ ಸೇರಿದಂತೆ ಹಲವು ಸ್ಥಳಗಳಲ್ಲೂ ಇಡಿ ಅಧಿಕಾರಿಗಳು ಶೋಧ ನಡೆಸಿದ್ದರು.
ಜಾಮೀನು ಅರ್ಜಿ ವಿಚಾರಣೆ ವೇಳೆ ಇಡಿ ಪರ ವಿಶೇಷ ಅಭಿಯೋಜಕ ಮಧು ಎನ್. ರಾವ್ ವಾದ ಮಂಡಿಸಿ, ಆರೋಪಿಗಳು ಎಸಗಿದ್ದಾರೆ ಎನ್ನಲಾದ ಆರ್ಥಿಕ ಅಪರಾಧದ ಗಂಭೀರತೆ ಹಾಗೂ ತನಿಖೆಯಲ್ಲಿ ಲಭ್ಯವಾಗಿರುವ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದ ಮುಂದಿಟ್ಟರು. ಆರೋಪಿಗಳಿಗೆ ಜಾಮೀನು ನೀಡಿದರೆ ತನಿಖೆ ಹಾಗೂ ಸಾಕ್ಷ್ಯಾಧಾರಗಳಿಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ವಾದಿಸಿದರು.ಉಭಯ ಪಕ್ಷಗಳ ವಾದ-ಪ್ರತಿವಾದ ಆಲಿಸಿದ ವಿಶೇಷ ನ್ಯಾಯಾಲಯವು ಆರೋಪಗಳ ಗಂಭೀರತೆಯನ್ನು ಪರಿಗಣಿಸಿ ಇಬ್ಬರಿಗೂ ಜಾಮೀನು ನಿರಾಕರಿಸಿ ಆದೇಶಿಸಿದೆ.
ಏಪ್ರಿಲ್ನಲ್ಲಿ ಇಡಿ ದಾಳಿ
ಬಿಟ್ಕಾಯಿನ್ ಪ್ರಕರಣದ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದ ಇಡಿ, 2026ರ ಏಪ್ರಿಲ್ನಲ್ಲಿ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಶ್ರೀಕಿ ಹಾಗೂ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆಂದು ತನಿಖೆಯಲ್ಲಿ ಹೇಳಲಾದ ವ್ಯಕ್ತಿಗಳಿಗೆ ಸೇರಿದ ಸ್ಥಳಗಳಲ್ಲೂ ಶೋಧ ನಡೆಸಲಾಗಿತ್ತು.ಕಾಂಗ್ರೆಸ್ ನಾಯಕ ಮೊಹಮದ್ ಹ್ಯಾರಿಸ್ ನಲಪಾಡ್ ಹಾಗೂ ಅವರ ಸಹೋದರ ಓಮರ್ ಫಾರೂಕ್ ನಲಪಾಡ್ಗೆ ಸಂಬಂಧಿಸಿದ ಸ್ಥಳಗಳ ಮೇಲಿನ ಶೋಧವೂ ಈ ಹಂತದಲ್ಲಿ ರಾಜಕೀಯವಾಗಿ ಗಮನ ಸೆಳೆದಿತ್ತು.
ದಾಳಿಗಳ ಬಳಿಕ ಮೇ 8, 2026ರಂದು ಶ್ರೀಕೃಷ್ಣ, ರಾಬಿನ್ ಖಂಡೇವಾಲಾ ಹಾಗೂ ಸುನೀಶ್ ಹೆಗ್ಡೆ ಅವರನ್ನು ಇಡಿ ಬಂಧಿಸಿತ್ತು. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆರಂಭಿಕ ಹಂತದಲ್ಲಿ ಇಡಿ ಕಸ್ಟಡಿಗೆ ಒಪ್ಪಿಸಲಾಗಿತ್ತು.
ಏನಿದು ಬಿಟ್ಕಾಯಿನ್ ಹಗರಣ?
ಶ್ರೀಕೃಷ್ಣ ವಿರುದ್ಧ ಸರ್ಕಾರಿ ಹಾಗೂ ಖಾಸಗಿ ಜಾಲತಾಣಗಳು, ಕ್ರಿಪ್ಟೊ ಎಕ್ಸ್ಚೇಂಜ್ಗಳು ಮತ್ತು ಆನ್ಲೈನ್ ಗೇಮಿಂಗ್ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿ ಡಿಜಿಟಲ್ ಆಸ್ತಿಗಳನ್ನು ಕಳವು ಮಾಡಿರುವ ಆರೋಪಗಳಿವೆ. ತನಿಖಾ ಸಂಸ್ಥೆಗಳ ಪ್ರಕಾರ, ಕಳವು ಮಾಡಲಾದ ಬಿಟ್ಕಾಯಿನ್ ಹಾಗೂ ಇತರ ಕ್ರಿಪ್ಟೊ ಆಸ್ತಿಗಳನ್ನು ನೇರವಾಗಿ ಬಳಸದೆ ವಿವಿಧ ಕ್ರಿಪ್ಟೊ ಟ್ರೇಡಿಂಗ್ ಚಾನೆಲ್ಗಳು ಮತ್ತು ಬ್ಯಾಂಕ್ ಖಾತೆಗಳ ಮೂಲಕ ಪರಿವರ್ತಿಸಿ, ಹಣದ ಮೂಲವನ್ನು ಮರೆಮಾಚಲು ಪ್ರಯತ್ನಿಸಲಾಗಿದೆ ಎಂಬ ಆರೋಪವಿದೆ.
