ಖಮ್ಮಂ (ತೆಲಂಗಾಣ), ಆ.29- ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ದ್ವೇಷದ ಹಿನ್ನೆಲೆಯಲ್ಲಿ ನೆರೆಮನೆಯವರ ಸಾಕು ನಾಯಿಯನ್ನು ಏರ್ಗನ್ನಿಂದ ಗುಂಡಿಕ್ಕಿ ಕೊಂದಿರುವ ಅಮಾನವೀಯ ಘಟನೆ ಮುಡಿಗೊಂಡ ಮಂಡಲದ ಮುತಾರಂ ಗ್ರಾಮದಲ್ಲಿ ವರದಿಯಾಗಿದೆ. ನಿವೃತ್ತ ಸೇನಾ ಸಿಬ್ಬಂದಿಯೊಬ್ಬರು ನೆರೆಮನೆಯವರ ಸಾಕು ನಾಯಿಯನ್ನು ಗುಂಡಿಕ್ಕಿ ಕೊಂದಿರುವುದು ಸ್ಥಳೀಯವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ದೂರುದಾರ ರಾಮು ಎಂಬುವವರು ತಮ್ಮ ಮನೆಯಲ್ಲಿ ಸಾಕು ನಾಯಿಯೊಂದನ್ನು ಪ್ರೀತಿಯಿಂದ ಸಾಕುತ್ತಿದ್ದರು. ಈ ನಾಯಿ ಆಗಾಗ್ಗೆ ನೆರೆಮನೆಯಲ್ಲಿ ವಾಸಿಸುತ್ತಿದ್ದ ನಿವೃತ್ತ ಸೇನಾ ಸಿಬ್ಬಂದಿ ರೌತು ಜನಯ್ಯ ಅವರ ಮನೆ ಬಳಿ ತೆರಳುತ್ತಿತ್ತು. ಈ ವಿಚಾರವಾಗಿ ಜನಯ್ಯ ನಾಯಿಯ ಮೇಲೆ ದ್ವೇಷ ಹಾಗೂ ಅಸಮಾಧಾನ ಬೆಳೆಸಿಕೊಂಡಿದ್ದರು ಎನ್ನಲಾಗಿದೆ.
ಇದೇ ಕಾರಣಕ್ಕೆ ಕೋಪಗೊಂಡ ಅವರು ಏರ್ಗನ್ ಬಳಸಿ ನಾಯಿಯ ಮೇಲೆ ನೇರವಾಗಿ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ನಾಯಿ ಸ್ಥಳದಲ್ಲೇ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ನಾಯಿಯ ಮಾಲೀಕ ರಾಮು ಅವರು ಮುಡಿಗೊಂಡ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ನಿವೃತ್ತ ಸೇನಾ ಸಿಬ್ಬಂದಿ ಜನಯ್ಯ ಉದ್ದೇಶಪೂರ್ವಕವಾಗಿ ನಾಯಿಯ ಮೇಲೆ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ರಾಮು ಅವರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕೃತ್ಯಕ್ಕೆ ಬಳಸಲಾದ ಏರ್ಗನ್ ಹಾಗೂ ನಾಯಿಯ ಸಾವಿಗೆ ಸಂಬಂಧಿಸಿದ ಇತರ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತನಿಖೆ ಮುಂದುವರಿಸಿದ್ದಾರೆ.
ಸಾಕುಪ್ರಾಣಿಗಳ ಮೇಲಿನ ದೌರ್ಜನ್ಯ ಹಾಗೂ ಅವುಗಳ ಬಗ್ಗೆ ಹೆಚ್ಚುತ್ತಿರುವ ಅಸಹಿಷ್ಣುತೆಗೆ ಇಂತಹ ಘಟನೆಗಳು ಸಾಕ್ಷಿಯಾಗಿವೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಹಾಗೂ ಇಂತಹ ಘಟನೆಗಳ ಮರುಕಳಿಕೆಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಪ್ರಾಣಿ ಹಕ್ಕುಗಳ ಹೋರಾಟಗಾರರು ಒತ್ತಾಯಿಸಿದ್ದಾರೆ.
