Homeಕ್ರೀಡಾ ಸುದ್ದಿಆರ್‌ಸಿಬಿ ಉಗಾಂಡಕ್ಕಿಂತ ಕೆಟ್ಟ ತಂಡ : ವೀರೇಂದ್ರ ಸೆಹ್ವಾಗ್‌ ವಿವಾದಿತ ಹೇಳಿಕೆ

ಆರ್‌ಸಿಬಿ ಉಗಾಂಡಕ್ಕಿಂತ ಕೆಟ್ಟ ತಂಡ : ವೀರೇಂದ್ರ ಸೆಹ್ವಾಗ್‌ ವಿವಾದಿತ ಹೇಳಿಕೆ

ಬೆಂಗಳೂರು, ಆ.30- ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನಲ್ಲಿ 18 ವರ್ಷಗಳ ಬಳಿಕ ಸತತ ಎರಡು ಬಾರಿ ಚಾಂಪಿಯನ್‌ ಪಟ್ಟಕ್ಕೇರಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವನ್ನು ಕ್ರಿಕೆಟ್‌ನಲ್ಲಿ ಅಂಬೆಗಾಲಿಡುತ್ತಿರುವ ಉಗಾಂಡ ತಂಡಕ್ಕಿಂತಲೂ ಕಳಪೆ ತಂಡ ಎಂದು ಮಾಜಿ ಕ್ರಿಕೆಟಿಗ ಹಾಗೂ ವಿಮರ್ಶಕ ವೀರೇಂದ್ರ ಸೆಹ್ವಾಗ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಿರಾಟ್‌ ಕೊಹ್ಲಿ ಸಾರಥ್ಯದಲ್ಲಿ ಆರ್‌ಸಿಬಿ ತಂಡ ವರ್ಷದಿಂದ ವರ್ಷಕ್ಕೆ ಬಲಿಷ್ಠವಾಗಿದ್ದು, 2025 ಹಾಗೂ 2026ರಲ್ಲಿ ಟ್ರೋಫಿ ಗೆದ್ದಿರುವುದು ತಂಡದ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ, ಸೆಹ್ವಾಗ್‌ ಆರ್‌ಸಿಬಿ ತಂಡದ ಸಾಮರ್ಥ್ಯವನ್ನು ಕಟುವಾಗಿ ಟೀಕಿಸಿದ್ದಾರೆ. “ನನ್ನ ದೃಷ್ಟಿಯಲ್ಲಿ ಆರ್‌ಸಿಬಿ ಉಗಾಂಡ ತಂಡಕ್ಕಿಂತಲೂ ಕಳಪೆ ತಂಡ. ಆ ತಂಡ ಸತತ ಎರಡು ಬಾರಿ ಟ್ರೋಫಿ ಗೆದ್ದಿರುವುದು ನನಗೆ ಆಶ್ಚರ್ಯ ಮೂಡಿಸಿದೆ” ಎಂದು ಸೆಹ್ವಾಗ್‌ ಹೇಳಿದ್ದಾರೆ.

ಐಪಿಎಲ್‌ನಲ್ಲಿ ತಲಾ ಐದು ಬಾರಿ ಟ್ರೋಫಿ ಗೆದ್ದಿರುವ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ಹಾಗೂ ಮುಂಬೈ ಇಂಡಿಯನ್ಸ್‌ (ಎಂಐ) ತಂಡಗಳು ಅತ್ಯಂತ ಬಲಿಷ್ಠವಾಗಿವೆ. ಈ ತಂಡಗಳಲ್ಲಿ ಸಾಕಷ್ಟು ಅಂತಾರಾಷ್ಟ್ರೀಯ ಸ್ಟಾರ್‌ ಆಟಗಾರರಿದ್ದಾರೆ. ಆರ್‌ಸಿಬಿ, ಪಂಜಾಬ್‌ ಕಿಂಗ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳ ವಿರುದ್ಧ ಸಿಎಸ್‌ಕೆ ಹಾಗೂ ಎಂಐ ಸುಲಭವಾಗಿ ಗೆಲುವು ಸಾಧಿಸಬಲ್ಲವು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“ಆರ್‌ಸಿಬಿ, ಡಿಸಿ ಹಾಗೂ ಪಿಬಿಕೆಎಸ್‌ ವಿರುದ್ಧ ಮುಂಬೈ ಮತ್ತು ಚೆನ್ನೈ ತಂಡಗಳು ಸೆಣಸಿದರೆ ಸುಲಭವಾಗಿ ಎರಡು ಅಂಕಗಳನ್ನು ಗಳಿಸಬಹುದು. ನಾನು ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕನಾಗಿದ್ದಾಗಲೂ ಆರ್‌ಸಿಬಿಯನ್ನು ಬಲಿಷ್ಠ ತಂಡವೆಂದು ಪರಿಗಣಿಸುತ್ತಿರಲಿಲ್ಲ” ಎಂದು ಸೆಹ್ವಾಗ್‌ ಹೇಳಿದ್ದಾರೆ.

ಆರ್‌ಸಿಬಿ ನಾಯಕ ರಜತ್‌ ಪಾಟೀದಾರ್‌ ಅವರನ್ನು ‘ಅದೃಷ್ಟದ ನಾಯಕ’ ಎಂದು ಬಣ್ಣಿಸಿರುವ ಸೆಹ್ವಾಗ್‌, ಅವರ ಅದೃಷ್ಟದಿಂದ ತಂಡ ಸತತ ಎರಡು ಬಾರಿ ಚಾಂಪಿಯನ್‌ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಮುಂದಿನ ದಿನಗಳಲ್ಲಿ ಆರ್‌ಸಿಬಿ ಮತ್ತೊಮ್ಮೆ ಟ್ರೋಫಿ ಗೆಲ್ಲುವುದು ಕಷ್ಟಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

RELATED ARTICLES
spot_img

Latest News