Homeರಾಷ್ಟ್ರೀಯನಶಾಮುಕ್ತ ಯುವಜನತೆಯಿಂದಲೇ ವಿಕಸಿತ ಭಾರತ ಸಾಧ್ಯ : ಮೋದಿ 'ಮನ್‌ ಕಿ ಬಾತ್‌' ಹೈಲೈಟ್ಸ್

ನಶಾಮುಕ್ತ ಯುವಜನತೆಯಿಂದಲೇ ವಿಕಸಿತ ಭಾರತ ಸಾಧ್ಯ : ಮೋದಿ ‘ಮನ್‌ ಕಿ ಬಾತ್‌’ ಹೈಲೈಟ್ಸ್

ನವದೆಹಲಿ, ಆ.30- ದೇಶವು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಪ್ರಗತಿ ಸಾಧಿಸಿ ವಿಕಸಿತ ಭಾರತವಾಗಿ ರೂಪುಗೊಳ್ಳಬೇಕಾದರೆ ಯುವಜನತೆ ಮಾದಕ ವಸ್ತುಗಳ ಪಿಡುಗಿನಿಂದ ಸಂಪೂರ್ಣವಾಗಿ ಮುಕ್ತರಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್‌ ಕಿ ಬಾತ್‌’ನ 137ನೇ ಸಂಚಿಕೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಭವಿಷ್ಯವನ್ನು ಸುರಕ್ಷಿತವಾಗಿರಿಸುವುದು ಸರ್ಕಾರದ ಪ್ರಮುಖ ಸಂಕಲ್ಪಗಳಲ್ಲಿ ಒಂದಾಗಿದೆ ಎಂದು ಹೇಳಿದರು.

ವಿಕಸಿತ ಭಾರತಕ್ಕಾಗಿ ಸರ್ಕಾರ ನಡೆಸುತ್ತಿರುವ ‘ನಶಾ ಮುಕ್ತ ಯುವ ಅಭಿಯಾನ’ವನ್ನು ಶ್ಲಾಘಿಸಿದ ಮೋದಿ, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಈ ಜಾಗೃತಿ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಾದಕ ವ್ಯಸನವು ವ್ಯಕ್ತಿಯ ಆರೋಗ್ಯವನ್ನು ಮಾತ್ರವಲ್ಲದೆ ಇಡೀ ಕುಟುಂಬ ಹಾಗೂ ಸಮಾಜವನ್ನೇ ನಾಶಪಡಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿವಿಧ ಭಾಷೆಗಳಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ಸಂದೇಶಗಳನ್ನು ಹರಡಲು ವಿಷಯ ರಚನೆಕಾರರಿಗೆ (ಕಂಟೆಂಟ್‌ ಕ್ರಿಯೇಟರ್‌) ಪ್ರಧಾನಿ ವಿಶೇಷ ಕರೆ ನೀಡಿದರು. ಯುವಜನರಿಗೆ ಮಾದಕ ವಸ್ತುಗಳ ಅಪಾಯದ ಕುರಿತು ಅರಿವು ಮೂಡಿಸುವಲ್ಲಿ ಸಾಮಾಜಿಕ ಮಾಧ್ಯಮದ ವಿಷಯ ರಚನೆಕಾರರು, ಶಿಕ್ಷಕರು, ಪೋಷಕರು, ಕಲಾವಿದರು ಹಾಗೂ ಸ್ವಯಂಸೇವಾ ಸಂಘಟನೆಗಳು ಪ್ರಮುಖ ಪಾತ್ರ ವಹಿಸಬೇಕು ಎಂದರು.

ಹಾಡುಗಳು, ಘೋಷಣೆಗಳು, ಕಿರುಚಿತ್ರಗಳು ಹಾಗೂ ಬೀದಿ ನಾಟಕಗಳ ಮೂಲಕ ವಿವಿಧ ಭಾರತೀಯ ಭಾಷೆಗಳಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಸಂದೇಶವನ್ನು ಜನರಿಗೆ ತಲುಪಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ವ್ಯಸನದ ವಿರುದ್ಧ ಹೋರಾಡುತ್ತಿರುವವರು ಹಾಗೂ ವ್ಯಸನದಿಂದ ಹೊರಬರಲು ಪ್ರಯತ್ನಿಸುತ್ತಿರುವವರಿಗೆ ನೆರವಾಗುವವರನ್ನು ಮೋದಿ ಶ್ಲಾಘಿಸಿದರು.

ಆಗಸ್ಟ್‌ ತಿಂಗಳ ದೇಶಭಕ್ತಿ

ಆಗಸ್ಟ್‌ ತಿಂಗಳು ಭಾರತೀಯರಲ್ಲಿ ವಿಶೇಷ ದೇಶಭಕ್ತಿಯ ಭಾವನೆಯನ್ನು ಮೂಡಿಸುತ್ತದೆ ಎಂದು ಹೇಳಿದ ಪ್ರಧಾನಿ ಮೋದಿ, ರಾಷ್ಟ್ರೀಯ ಕೈಮಗ್ಗ ದಿನ, ಸ್ವಾತಂತ್ರ್ಯ ದಿನ, ರಾಷ್ಟ್ರೀಯ ಬಾಹ್ಯಾಕಾಶ ದಿನ, ಕ್ವಿಟ್‌ ಇಂಡಿಯಾ ಚಳವಳಿ ಹಾಗೂ ವಿಭಜನೆಯ ಭೀಕರ ಸ್ಮರಣಾ ದಿನದ ಮಹತ್ವವನ್ನು ವಿವರಿಸಿದರು.

ಈ ವರ್ಷ ‘ವಂದೇ ಮಾತರಂ’ ಗೀತೆಯ 150ನೇ ವಾರ್ಷಿಕೋತ್ಸವ ಆಚರಿಸಲಾಗುತ್ತಿರುವುದು ಸ್ವಾತಂತ್ರ್ಯೋತ್ಸವದ ವಿಶೇಷತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು. ‘ಹರ್‌ ಘರ್‌ ತಿರಂಗಾ’ ಅಭಿಯಾನದ ಜತೆಗೆ ‘ಸೂರ್ಯಪಥ ತಿರಂಗ’ ಉಪಕ್ರಮದ ಮೂಲಕ ಭಾರತದ ತ್ರಿವರ್ಣ ಧ್ವಜವು ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದು ಹೆಮ್ಮೆಯಿಂದ ಹೇಳಿದರು.

35 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಸ್ವಾನಿಧಿ ಯೋಜನೆ ಪ್ರಯೋಜನ

ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯಡಿ ದೇಶಾದ್ಯಂತ ಇದುವರೆಗೆ 35 ಲಕ್ಷಕ್ಕೂ ಅಧಿಕ ಮಹಿಳೆಯರು ಪ್ರಯೋಜನ ಪಡೆದು ತಮ್ಮ ಸ್ವಂತ ವ್ಯವಹಾರವನ್ನು ವಿಸ್ತರಿಸಿಕೊಂಡಿದ್ದಾರೆ ಎಂದು ಮೋದಿ ತಿಳಿಸಿದರು. ಮಹಿಳೆಯರ ಆರ್ಥಿಕ ಪ್ರಗತಿಯು ಇಡೀ ಕುಟುಂಬದ ಉನ್ನತಿಗೆ ಬುನಾದಿಯಾಗುತ್ತದೆ ಎಂದು ಹೇಳಿದರು.

ಸ್ವಚ್ಛತೆಗೆ ಯುವಕರ ಕೊಡುಗೆ

ಉತ್ತರ ಪ್ರದೇಶದ ‘ಕ್ಲೀನ್‌-ಅಪ್‌ ಪಟ್ವಾಯಿ’ ಮಾದರಿಯಲ್ಲಿ ಯುವಕರು ಕೆರೆಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುತ್ತಿರುವುದನ್ನು ಪ್ರಧಾನಿ ಶ್ಲಾಘಿಸಿದರು. ಶ್ರೀ ಅಮರನಾಥ ಯಾತ್ರೆಯ ಸಂದರ್ಭದಲ್ಲಿಯೂ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ಯಾತ್ರೆಯಲ್ಲಿ ಬಳಸಿದ ಕುದುರೆ ಹಾಗೂ ಹೇಸರಗತ್ತೆಗಳ ಸಗಣಿಯನ್ನು ಜೈವಿಕ ಅನಿಲವಾಗಿ ಪರಿವರ್ತಿಸಿ, ಅದರಿಂದ ಉತ್ಪಾದನೆಯಾಗುವ ಶುದ್ಧ ಶಕ್ತಿಯ ಮೂಲಕ ‘ಸ್ವಚ್ಛ ಜ್ಯೋತಿ’ ಬೆಳಗಿಸಿರುವುದು ಪರಿಸರ ಸಂರಕ್ಷಣೆಗೆ ಉತ್ತಮ ಉದಾಹರಣೆಯಾಗಿದೆ ಎಂದು ಮೋದಿ ಬಣ್ಣಿಸಿದರು.

RELATED ARTICLES
spot_img

Latest News