ಮುಂಬೈ, ಆ.31 (ಪಿಟಿಐ)- ತ್ವರಿತ ಜಲಾಂತರ್ಗಾಮಿ ರಕ್ಷಣಾ ಸಾಮರ್ಥ್ಯ ಹೊಂದಿರುವ ಆಳ ಸಮುದ್ರ ಡೈವಿಂಗ್ ಹಡಗು ‘ಐಎನ್‌ಎಸ್ ನಿಪುನ್’ ಅನ್ನು ಇಂದು ಮುಂಬೈನಲ್ಲಿ ಭಾರತೀಯ ನೌಕಾಪಡೆಗೆ ನಿಯೋಜಿಸಲಾಯಿತು.
ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರ ಸಮ್ಮುಖದಲ್ಲಿ ಐಎನ್‌ಎಸ್ ನಿಪುನ್ ಅನ್ನು ನೌಕಾಪಡೆಗೆ ಸೇರ್ಪಡೆಗೊಳಿಸಲಾಯಿತು. ಭಾರತೀಯ ನೌಕಾಪಡೆಗೆ ನಿಯೋಜಿಸಲಾದ ಎರಡನೇ ಆಳ ಸಮುದ್ರ ಡೈವಿಂಗ್ ಹಡಗು ಇದಾಗಿದೆ.
ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿರುವ ಈ ಹಡಗು 119.4 ಮೀಟರ್ ಉದ್ದ ಹೊಂದಿದ್ದು, ಸುಮಾರು 10,500 ಟನ್ ಸಾಮರ್ಥ್ಯ ಹೊಂದಿದೆ. ಸಮುದ್ರದ 300 ಮೀಟರ್ ಆಳದವರೆಗೆ ಡೈವಿಂಗ್ ಕಾರ್ಯಾಚರಣೆಗಳನ್ನು ಬೆಂಬಲಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.
ಜಲಾಂತರ್ಗಾಮಿ ನೌಕೆಗಳಲ್ಲಿನ ಅವಘಡಗಳ ಸಂದರ್ಭದಲ್ಲಿ ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ಐಎನ್‌ಎಸ್ ನಿಪುನ್ ನೆರವಾಗಲಿದೆ. ಇದರ ಜತೆಗೆ ವಿಪತ್ತು ಪರಿಹಾರ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಹಾಗೂ ಮಾನವೀಯ ನೆರವು ಸೇರಿದಂತೆ ವಿವಿಧ ಕಾರ್ಯಗಳಿಗೂ ಹಡಗನ್ನು ಬಳಸಿಕೊಳ್ಳಬಹುದಾಗಿದೆ.
