Homeರಾಜಕೀಯಮಿಸ್ಟರ್‌ ಪ್ರಿಯಾಂಕ್‌ ಖರ್ಗೆ, ನನ್ನ ಹತ್ರ ನಿಮ್ಮ ಆಟ ನಡೆಯಲ್ಲ : ಕುಮಾರಸ್ವಾಮಿ ವಾಗ್ದಾಳಿ

ಮಿಸ್ಟರ್‌ ಪ್ರಿಯಾಂಕ್‌ ಖರ್ಗೆ, ನನ್ನ ಹತ್ರ ನಿಮ್ಮ ಆಟ ನಡೆಯಲ್ಲ : ಕುಮಾರಸ್ವಾಮಿ ವಾಗ್ದಾಳಿ

ತುಮಕೂರು, ಆ.31- ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ಮುಂದುವರಿಸಿದ್ದು, ತಾವು ಕೇಳುತ್ತಿರುವ ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರ ನೀಡದೆ ಕೇವಲ ‘ಎಕ್ಸ್‌’ ವೇದಿಕೆಯಲ್ಲಿ ಮಾತನಾಡಿ ಜಾರಿಕೊಳ್ಳುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರು ಕ್ಯಾಮೆರಾ ಮುಂದೆ ಮಾತನಾಡದೆ ‘ಎಕ್ಸ್‌’ನಲ್ಲಿ ಹೇಳಿಕೆ ನೀಡಿದ್ದಾರೆ. “ಬೆಟ್ಟ ಅಗೆದು ಇಲಿ ಹಿಡಿದಂತೆ ಏನೋ ಬಿಟ್ಟಿದ್ದಾರೆ. ನೀವು ಮಾಡುತ್ತಿರುವುದೇ ಚಿತ್ರಾನ್ನ, ಯಾರಿಗೆ ಮೃಷ್ಟಾನ್ನ ಕೊಟ್ಟಿದ್ದೀರಿ?” ಎಂದು ವ್ಯಂಗ್ಯವಾಡಿದರು.

“ಪ್ರಿಯಾಂಕ್‌ ಖರ್ಗೆ, ನನ್ನನ್ನು ಆರ್‌ಎಸ್‌ಎಸ್‌, ಬಿಜೆಪಿಯವರನ್ನು ಆಟ ಆಡಿಸಿದಂತೆ ಆಟ ಆಡಿಸಲು ಸಾಧ್ಯವಿಲ್ಲ. ನನ್ನ ಹತ್ತಿರ ಆಟ ಆಡಲು ಆಗುವುದಿಲ್ಲ. ಮಿಸ್ಟರ್‌ ಪ್ರಿಯಾಂಕ್‌ ಖರ್ಗೆ, ನಾನು ಕದ್ದು ಹೋಗುವವನಲ್ಲ, ಪಲಾಯನ ಮಾಡುವುದಿಲ್ಲ” ಎಂದು ಕುಮಾರಸ್ವಾಮಿ ಗುಡುಗಿದರು.

ರೆಸಾರ್ಟ್‌ನಲ್ಲಿ ಕುಳಿತು ಒಎಂಆರ್‌ ಶೀಟ್‌ ತಿದ್ದಿಸಿದ ಅಧಿಕಾರಿಯನ್ನು ದೆಹಲಿಯಿಂದ ದೇವನಹಳ್ಳಿ ರೆಸಾರ್ಟ್‌ಗೆ ಕರೆತಂದು ಕೂರಿಸಿಕೊಂಡಿದ್ದು ಏಕೆ ಎಂದು ಪ್ರಶ್ನಿಸಿದ ಅವರು, ಬಳಿಕ ಆ ಅಧಿಕಾರಿಯನ್ನು ಸಿಐಡಿ ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದೀರಿ ಎಂದು ಆರೋಪಿಸಿದರು.

“24 ಮಂದಿಗೆ ಕೆಲಸ ಕೊಟ್ಟಿದ್ದೀರಲ್ಲ, ಅವರು ಯಾರ್ಯಾರ ಸಂಬಂಧಿಕರು ಎಂಬುದನ್ನು ಹೇಳಿ. ಸಂಬಂಧಿಕರಿಗೆ ಕೆಲಸ ಕೊಡಿಸಿದ್ದೇವೆ ಎಂದು ಹೇಳಿದ್ದೀರಿ. ಅದರ ಬಗ್ಗೆ ಸಚಿವರು ಉತ್ತರಿಸಬೇಕಲ್ಲವೇ?” ಎಂದು ಪ್ರಶ್ನಿಸಿದ ಅವರು, ತಮ್ಮ ಬಗ್ಗೆ ಮಾತನಾಡುವ ಮುನ್ನ ಸರಿಯಾದ ಮಾಹಿತಿ ಪಡೆದು ಮಾತನಾಡುವಂತೆ ಪ್ರಿಯಾಂಕ್‌ ಖರ್ಗೆ ಅವರಿಗೆ ತಿರುಗೇಟು ನೀಡಿದರು.

ಒಎಂಆರ್‌ ಶೀಟ್‌ಗಳಿಗೆ ಕಾರ್ಬನ್‌ ಬಳಸಿ ಅಕ್ರಮ ಎಸಗಿರುವ ಕುರಿತು ಬೀದಿ ಬೀದಿಯಲ್ಲಿ ಚರ್ಚೆಯಾಗುತ್ತಿದೆ. ತನಿಖೆಯಲ್ಲೂ ಅದು ಸಾಬೀತಾಗಿದೆ. ಫೋರೆನ್ಸಿಕ್‌ ಲ್ಯಾಬ್‌ ವರದಿಯಲ್ಲೂ ಈ ಬಗ್ಗೆ ರುಜುವಾತಾಗಿದೆ ಎಂದು ಕುಮಾರಸ್ವಾಮಿ ಹೇಳಿದರು. “ಸತ್ಯ ಹೀಗಿರುವಾಗ ಅದನ್ನು ಸಮರ್ಥಿಸಿಕೊಳ್ಳುವುದರಲ್ಲಿ ಅರ್ಥವೇನಿದೆ?” ಎಂದು ಪ್ರಶ್ನಿಸಿದರು.

“ಬನ್ನಿ, ನಿಮ್ಮೊಂದಿಗೆ ಎಲ್ಲಿ ಬೇಕಾದರೂ ಚರ್ಚೆಗೆ ಬರುತ್ತೇನೆ. ಪಲಾಯನ ಮಾಡುವ ವ್ಯಕ್ತಿ ನಾನಲ್ಲ. ಪಲಾಯನದ ಪ್ರಶ್ನೆಯೇ ಇಲ್ಲ” ಎಂದು ಪ್ರಿಯಾಂಕ್‌ ಖರ್ಗೆ ಅವರಿಗೆ ಸವಾಲು ಹಾಕಿದರು.

ಈ ವಿಚಾರವನ್ನು ಇಲ್ಲಿಗೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ನಾಳೆ ದೆಹಲಿಯಲ್ಲಿ ಈ ಕುರಿತು ಸುದೀರ್ಘವಾಗಿ ಮಾಧ್ಯಮಗಳೊಂದಿಗೆ ಮಾತನಾಡುತ್ತೇನೆ. ನಿರುದ್ಯೋಗಿ ಯುವಕರ ಹಿತವನ್ನು ಬಲಿ ಕೊಡುವುದಕ್ಕೆ ನಿಮ್ಮನ್ನು ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

2028ರ ಚುನಾವಣೆಗೆ ರಾಜ್ಯ ರಾಜಕಾರಣಕ್ಕೆ ವಾಪಸ್‌

ರಾಜ್ಯ ರಾಜಕಾರಣಕ್ಕೆ ಮರಳುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, “ನಾನು ರಾಜ್ಯ ರಾಜಕಾರಣಕ್ಕೆ ಬರುತ್ತೇನೆ. ಅದು ಈಗಲ್ಲ, 2028ರ ಸಾರ್ವತ್ರಿಕ ಚುನಾವಣೆಗೆ ಬರುತ್ತೇನೆ” ಎಂದು ಸ್ಪಷ್ಟಪಡಿಸಿದರು.

“ಏನೋ ನಾನೇ ಮುಂದಿನ ಏಳೂವರೆ ವರ್ಷ ಗೂಟ ಹೊಡೆದುಕೊಂಡು ಇರುತ್ತೇನೆ ಅಂತಾರಲ್ಲ. ಆಗ ನೋಡೋಣ ಯಾರ ಗೂಟ ಇರುತ್ತದೆ? ಜನ ಗೂಟ ಕಿತ್ತಾಕುತ್ತಾರೆ” ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದರು.

RELATED ARTICLES
spot_img

Latest News