ಟೆಹ್ರಾನ್, ಆ.31- ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧದ ಕಾರ್ಮೋಡ ಆವರಿಸಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಹಾರ್ಮುಜ್ ಜಲಸಂಧಿಯ ಆಯಕಟ್ಟಿನ ಪ್ರದೇಶದಲ್ಲಿರುವ ಇರಾನ್‌ನ ಲಾರಕ್ ದ್ವೀಪದ ಮೇಲೆ ಅಮೆರಿಕ ಪಡೆಗಳು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇರಾನ್‌ನ ಎರಡು ಪ್ರಮುಖ ಕ್ಷಿಪಣಿ ಉಡಾವಣಾ ವ್ಯವಸ್ಥೆಗಳು (ಲಾಂಚರ್‌ಗಳು) ಧ್ವಂಸಗೊಂಡಿವೆ ಎನ್ನಲಾಗಿದೆ. ಜುಲೈ ಅಂತ್ಯದ ಬಳಿಕ ಇರಾನ್ ಭೂಪ್ರದೇಶದ ಮೇಲೆ ಅಮೆರಿಕ ನಡೆಸಿದ ಮೊದಲ ನೇರ ದಾಳಿ ಇದಾಗಿದೆ ಎಂದು ವರದಿಯಾಗಿದೆ.
ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಹಡಗುಗಳ ಮೇಲೆ ದಾಳಿ ನಡೆಸಲು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪಡೆಗಳು ಸಮುದ್ರ ಗಣಿಗಳು ಹಾಗೂ ರಾಕೆಟ್‌ಗಳನ್ನು ಸಿದ್ಧಪಡಿಸುತ್ತಿದ್ದವು ಎಂಬ ಮಾಹಿತಿ ಅಮೆರಿಕ ಪಡೆಗಳಿಗೆ ಲಭ್ಯವಾಗಿತ್ತು ಎನ್ನಲಾಗಿದೆ. ಇದರ ಆಧಾರದ ಮೇಲೆ ಅಮೆರಿಕ ಪಡೆಗಳು ತಕ್ಷಣ ಪ್ರತಿದಾಳಿ ನಡೆಸಿ ಲಾಂಚರ್‌ಗಳನ್ನು ಧ್ವಂಸಗೊಳಿಸಿವೆ ಎಂದು ತಿಳಿದುಬಂದಿದೆ.
ಅಮೆರಿಕದ ದಾಳಿಗೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಸರ್ಕಾರ ಹಾಗೂ ಸೇನಾ ನಾಯಕರು ಎಚ್ಚರಿಕೆ ನೀಡಿದ್ದಾರೆ.
ಹಾರ್ಮುಜ್ ಜಲಸಂಧಿಗೆ ಲಾರಕ್ ದ್ವೀಪದ ಆಯಕಟ್ಟಿನ ಸ್ಥಾನ
ದಾಳಿಗೊಳಗಾದ ಲಾರಕ್ ದ್ವೀಪವು ಹಾರ್ಮುಜ್ ದ್ವೀಪದ ದಕ್ಷಿಣಕ್ಕೆ ಹಾಗೂ ಕೆಶ್ ದ್ವೀಪದ ಪೂರ್ವಕ್ಕೆ ಇದೆ. ಇರಾನ್ ರಾಜಧಾನಿ ಟೆಹ್ರಾನ್‌ನಿಂದ ಆಗ್ನೇಯ ದಿಕ್ಕಿನಲ್ಲಿ ಸುಮಾರು 1,100 ಕಿ.ಮೀ. ದೂರದಲ್ಲಿರುವ ಈ ದ್ವೀಪವು ಹಾರ್ಮುಜ್ ಜಲಸಂಧಿಯ ಮೇಲೆ ನಿಗಾ ಇಡಲು ಆಯಕಟ್ಟಿನ ಪ್ರದೇಶವಾಗಿದೆ.
ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಸಂಘರ್ಷ ತೀವ್ರಗೊಂಡಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ. ಸಂಘರ್ಷ ಮತ್ತಷ್ಟು ಉಲ್ಬಣಗೊಂಡರೆ ಜಾಗತಿಕ ತೈಲ ಪೂರೈಕೆ ಸರಪಳಿ, ಇಂಧನ ಬೆಲೆ ಹಾಗೂ ಅಂತರರಾಷ್ಟ್ರೀಯ ವ್ಯಾಪಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಜಾಗತಿಕ ಸಮುದಾಯವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
